ಮಂಗಳೂರು : ಇಂಡಿಯನ್ ಸಮೂಹ ಸಂಸ್ಥೆಗಳ 20ನೇ ವರ್ಷದ ಸಂಭ್ರಮಾಚರಣೆ IGI – ಸಂಭ್ರಮ್ 2025, ಮಾರ್ಚ್ 16 ರಂದು ಸಂಜೆ 4.00 ಗಂಟೆಗೆ ಮಂಗಳೂರಿನ ಹೋಟೆಲ್ ದೀಪಾ ಕಂಫರ್ಟ್ಸ್‌ನ ಶಹನಾಯಿ ಸಭಾಂಗಣದಲ್ಲಿ ವಿಜೃಂಭಣೆಯಿಂದ ಜರುಗಿತು. 2005ರಲ್ಲಿ ಮಂಗಳೂರಿನ ಪಂಪ್ ವೆಲ್‌ನಲ್ಲಿ ಸ್ಥಾಪನೆಯಾದ ಇಂಡಿಯನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ ಸಂಸ್ಥೆಯನ್ನು, ಆಂದಿನ ಸೇವಾದಳದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ ಮತ್ತು ಈಗಿನ ಕರ್ನಾಟಕ ಸರ್ಕಾರದ ಸ್ಪೀಕರ್ ಆದ ಶ್ರೀ ಯು.ಟಿ. ಖಾದರ್ ಉದ್ಘಾಟಿಸಿದ್ದರು. ಕಳೆದ 20 ವರ್ಷಗಳ ಅವಧಿಯಲ್ಲಿ ಸಂಸ್ಥೆಯು ಕಂಪ್ಯೂಟರ್, ತಾಂತ್ರಿಕ, ಏವಿಯೇಶನ್, ಹಾಸ್ಪಿಟಾಲಿಟಿ, ಲೋಜಿಸ್ಟಿಕ್ ಮತ್ತು ಸಪ್ಲೈ ಚೈನ್ ಮ್ಯಾನೇಜ್ಮೆಂಟ್, ಏರ್ಪೋರ್ಟ್ ಮ್ಯಾನೇಜ್ಮೆಂಟ್, ಕ್ಯಾಬಿನ್ ಕ್ರೂ ತರಬೇತಿ, ಇಂಗ್ಲಿಷ್ ತರಬೇತಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಹೆಸರಾಂತ ಸಂಸ್ಥೆಯಾಗಿದೆ.
ಈ ಸಂಭ್ರಮಾಚರಣೆಯ ಪ್ರಮುಖ ಅಂಶಗಳಲ್ಲಿ ಒಂದು LAPT (ಲಂಡನ್ ಅಕಾಡಮಿ ಆಫ್ ಪ್ರೊಫೆಷನಲ್ ಟ್ರೇನಿಂಗ್) ಅಂತರಾಷ್ಟ್ರೀಯ ಮಾನ್ಯತೆ ಸ್ವೀಕಾರವಾಗಿತ್ತು. 180ಕ್ಕೂ ಹೆಚ್ಚು ದೇಶಗಳಲ್ಲಿ ಮಾನ್ಯತೆ ಹೊಂದಿರುವ ಈ ಸಂಸ್ಥೆಯು, ಇಂಡಿಯನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್‌ಗೆ ತಮ್ಮ ಪ್ರಮಾಣೀಕರಣ ನೀಡಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದಲ್ಲಿ ಉದ್ಯೋಗ ಅವಕಾಶಗಳ ಹೆಚ್ಚಳಕ್ಕೆ ಮಾರ್ಗವಾಗಿ ನಿಲ್ಲಲಿದೆ. ಈ ಸಂದರ್ಭದಲ್ಲಿ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಮುರಳಿ ಹೊಸಮಜಲು ಅವರಿಗೆ ಏವಿಯೇಶನ್ ಶಿಕ್ಷಣ ಕ್ಷೇತ್ರದಲ್ಲಿ ನೀಡಿದ ಸೇವೆಗಾಗಿ LAPT ವತಿಯಿಂದ ಮಾಸ್ಟರ್ ಟ್ರೇನರ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮತ್ತೊಂದು ಪ್ರಮುಖ ಘಟ್ಟವೆಂದರೆ, ಕರಾವಳಿ ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ನಮ್ಮ ಸಂಸ್ಥೆಯು ಕರಾವಳಿಯ ಪ್ರಮುಖ ಮಾಧ್ಯಮ ವಾಹಿನಿಯಾಗಿರುವ ನಮ್ಮ ಕುಡ್ಲ 24×7 ಸಹಭಾಗಿತ್ವದಲ್ಲಿ ಮಾಸ್ ಮೀಡಿಯಾ ಮತ್ತು ಸಂವಹನ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು, ಇದುವರೆಗೆ ಇಲ್ಲದ ಖಾಸಗಿ ಸಂಸ್ಥೆ ಮತ್ತು ಮಾಧ್ಯಮ ವಾಹಿನಿಯ ಸಹಭಾಗಿತ್ವದ ವಿಶಿಷ್ಟ ಮಾದರಿಯಾಗಿದೆ. ಈ ಕೋರ್ಸ್ ಪತ್ರಿಕಾ ಮಾಧ್ಯಮ, ವೀಡಿಯೋ ಪ್ರೊಡಕ್ಷನ್, ಸೋಶಿಯಲ್ ಮೀಡಿಯಾ ಮತ್ತು ಡಿಜಿಟಲ್ ಮಾರ್ಕೆಟಿಂಗ್, ಪಬ್ಲಿಕ್ ರಿಲೇಶನ್, ಮಾಧ್ಯಮ ನಿರೂಪಣೆ, ಕ್ಯಾಮೆರಾ ತಂತ್ರಜ್ಞಾನ ಹಾಗೂ ಮಲ್ಟಿಮೀಡಿಯಾ ತಂತ್ರಜ್ಞಾನಗಳಲ್ಲಿ ಕೈಗಾರಿಕೆ-ಆಧಾರಿತ ತರಬೇತಿಯನ್ನು ಒದಗಿಸುತ್ತದೆ.
ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಶ್ರೀ ಮುರಳಿ ಹೊಸಮಜಲು ಅವರ ಮಾತೃಶ್ರೀಯವರಾದ ದಿ. ಶ್ರೀಮತಿ ರಾಜಮ್ಮ ಅವರ ಸ್ಮರಣಾರ್ಥವಾಗಿ ‘ಶ್ರೀಮತಿ ರಾಜಮ್ಮ ಸ್ಮಾರಕ ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ್’ ಉದ್ಘಾಟನೆಯಾಯಿತು. ಪುತ್ತೂರು ತಾಲೂಕಿನ ಕೌಕ್ರಾಡಿ ಗ್ರಾಮದಲ್ಲಿ ಜನಿಸಿದ ಶ್ರೀಮತಿ ರಾಜಮ್ಮ, ಸಮಾಜ ಸೇವೆ ಮತ್ತು ರಾಜಕೀಯ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಿದ್ದು, ದುರ್ಬಲ ಮಹಿಳೆಯರ ಹಾಗೂ ಬಡವರ ಹಕ್ಕುಗಳಿಗಾಗಿ ಶ್ರಮಿಸಿದ ಪ್ರಮುಖ ವ್ಯಕ್ತಿಯಾಗಿದ್ದರು. ಈ ಟ್ರಸ್ಟ್ ಯುವಕರು ಮತ್ತು ಮಹಿಳೆಯರ ಸಬಲೀಕರಣದ ಗುರಿಯನ್ನು ಹೊಂದಿದ್ದು, ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಈ ಸಂದರ್ಭ ಪತ್ರಿಕಾ ರಂಗದಲ್ಲಿ ಶ್ರೀ ಭಾಸ್ಕರ್ ರೈ, ಕಲಾ ಕ್ಷೇತ್ರದಲ್ಲಿ ಶ್ರೀ ವಿಪಿನ್ ಪುರುಷು, ಸಮಾಜ ಸೇವೆಯಲ್ಲಿ ಶ್ರೀಮತಿ ಶಾರದ ಕದ್ರಿ ಮತ್ತು ಶ್ರೀ ಆಕಾಶ್ ಕರ್ಕೇರ, ಹಾಗೆಯೇ CDS ಪರೀಕ್ಷೆಯಲ್ಲಿ 100ನೇ ಶ್ರೇಣಿಯಲ್ಲಿ ಉತ್ತೀರ್ಣರಾದ ಶ್ರೀ ಅದ್ವೈತ್ ನಾರಾಯಣ್ ಅವರನ್ನು ಗೌರವಿಸಲಾಯಿತು. ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು, aviation, computer science, logistics ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರನ್ನು ಸನ್ಮಾನಿಸಲಾಯಿತು.
ಈ ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಮುರಳಿ ಹೊಸಮಜಲು ವಹಿಸಿಕೊಂಡಿದ್ದು, ನಿರ್ದೇಶಕರಾದ ಶ್ರೀಮತಿ ಸಜಿತಾ ಎಂ. ನಾಯರ್ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಲೋಕಸಭಾ ಸದಸ್ಯರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕರ್ನಾಟಕ ವಿಧಾನಸಭಾ ಸದಸ್ಯರಾದ ಶ್ರೀ ವೇದವ್ಯಾಸ ಕಾಮತ್, ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಸತೀಶ್ ಕುಂಪಲ, ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ರಮಾನಾಥ ರೈ, LAPT – UK ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿಜಯ್ ಭಾಗವಹಿಸಿದರು. ವಿಶೇಷ ಆಹ್ವಾನಿತರಾಗಿ ನಮ್ಮ ಕುಡ್ಲ 24×7 ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಕದ್ರಿ ನವನೀತ್ ಶೆಟ್ಟಿ, ಹಿರಿಯ ಪತ್ರಕರ್ತ ಹಾಗೂ ಲೇಖಕರಾದ ಶ್ರೀ ಜಯಂತ್ ಕೊಡ್ಕಣಿ, ಚಲನಚಿತ್ರ ನಿರ್ದೇಶಕ ಶ್ರೀ ವಿಜಯ್ ಕುಮಾರ್, ನಟ ಮತ್ತು ನಿರ್ದೇಶಕ ಶ್ರೀ ಸ್ವರಾಜ್ ಶೆಟ್ಟಿ, ಚಲನಚಿತ್ರ ಹಾಗೂ ನಾಟಕ ಕಲಾವಿದೆ ಮಿಸ್ ರೂಪ ವರ್ಕಾಡಿ, ಸಂತ ಜಾರ್ಜ್ ಸಮೂಹ ಸಂಸ್ಥೆಗಳ ಮಾಜಿ ಪ್ರಾಂಶುಪಾಲರಾದ ಶ್ರೀ ಅಬ್ರಾಹಂ ವರ್ಗೀಸ್, ಕರ್ನಾಟಕ ಪಾಲಿಟೆಕ್ನಿಕ್ ಮಾಜಿ ಪ್ರಾಂಶುಪಾಲರಾದ ಡಾ. ಅಬ್ದುಲ್ ಖಾದರ್, ಮತ್ತು ವಕೀಲರಾದ ಶ್ರೀ ಪ್ರಸಾದ್ ರೈ ಭಾಗವಹಿಸಿದ್ದರು.
ಈ ಸಂಭ್ರಮಾಚರಣೆಯಲ್ಲಿ ಶಿಕ್ಷಣ ತಜ್ಞರು, ಕಾಲೇಜುಗಳ ಮುಖ್ಯಸ್ಥರು, ಮಾಧ್ಯಮ ಕ್ಷೇತ್ರದ ಪ್ರಮುಖರು ಉಪಸ್ಥಿತರಿದ್ದು, ಸಮಾರಂಭದ ಕೊನೆಯ ಭಾಗದಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ಹಿನ್ನೆಲೆ ಗಾಯಕರಾದ ಪ್ರಕಾಶ್ ಮಹಾದೇವನ್ ಹಾಗೂ ಗಾಯಕಿ ರೂಪ ಪ್ರಕಾಶ್ ಅವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಶಿಕ್ಷಕಿ ಶ್ರೀಮತಿ ಚೈತ್ರಾ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಅವನಿ ಪಾರ್ವತಿ ವಂದಿಸಿದರು, ಮತ್ತು ಕಾರ್ಯಕ್ರಮವನ್ನು ಶ್ರೀ ಕದ್ರಿ ನವನೀತ್ ಶೆಟ್ಟಿ ಹಾಗೂ ಶ್ರೀಮತಿ ಸಿಂಧು ಎನ್ ನಿರೂಪಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post