ಮಂಗಳೂರು, ಮಾ. 17: ಚಿಂತಕ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಧರ್ಮ-ಧರ್ಮಗಳ ನಡುವೆ ದ್ವೇಷ ಪ್ರಚೋದನೆ ಅಡಿಯಲ್ಲಿ ಸೂಲಿಬೆಲೆ ವಿರುದ್ಧ ದೂರು ದಾಖಲಾಗಿದೆ. ಮಾರ್ಚ್ 9ರಂದು ವಿ.ಎಚ್.ಪಿ ಹಮ್ಮಿಕೊಂಡಿದ್ದ ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮನಡೆ ಪಾದಯಾತ್ರೆಯ ಸಮಾರೋಪ ಕಾರ್ಯಕ್ರಮದಲ್ಲಿ ಸೂಲಿಬೆಲೆ ಮಾತನಾಡಿ, ಅನ್ಯ ಸಮಾಜದವರನ್ನು ಪ್ರೀತಿಸಿ ಮದುವೆಯಾಗಿ ಎಂದು ಕರೆ ನೀಡಿದ್ದರು. ಇದು ಭಾರೀ ವಿವಾದ ಸೃಷ್ಟಿಸಿತ್ತು. ಈ ಸಂಬಂಧ ಇದೀಗ ಪ್ರಚೋದನಕಾರಿ ಭಾಷಣ ಮಾಡಿ, ಕೋಮು ದ್ವೇಷಕ್ಕೆ ಕಾರಣರಾಗಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡ ರಶೀದ್ ಉಳ್ಳಾಲ ಠಾಣೆಗೆ ದೂರು ನೀಡಿದ್ದು, ಈ ದೂರಿನ ಮೇರೆಗೆ ಉಳ್ಳಾಲ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಸೂಲಿಬೆಲೆ ಮಾತಿಗೆ ಮುಸ್ಲಿಂ ಸಂಘಟನೆಗಳು, ಕಮ್ಯುನಿಸ್ಟ್ ಮತ್ತು ಕಾಂಗ್ರೆಸ್ ಪಕ್ಷದ ನಾಯಕರಿಂದ ಆಕ್ಷೇಪ ವ್ಯಕ್ತವಾಗಿತ್ತು. ಎಸ್ಡಿಪಿಐ ನಾಯಕರು ಬಂಟ್ವಾಳ ಮತ್ತು ಉಳ್ಳಾಲದಲ್ಲಿ ಸೂಲಿಬೆಲೆ ವಿರುದ್ಧ ದೂರು ನೀಡಿದ್ದರು. ಆನಂತರ, ಉಳ್ಳಾಲದ ಯುವ ಕಾಂಗ್ರೆಸ್ ಮುಖಂಡ ರಶೀದ್ ನೇತೃತ್ವದಲ್ಲಿ ಉಳ್ಳಾಲ ಪೊಲೀಸರಿಗೆ ದೂರು ನೀಡಲಾಗಿತ್ತು. ಇದೀಗ ಉಳ್ಳಾಲ ಪೊಲೀಸರು ಸೆಕ್ಷನ್ 192, 353 BNS (505(2) ಮತ್ತು 353IPC ಪ್ರಕಾರ ಪ್ರಕರಣ ದಾಖಲಿಸಿದ್ದಾರೆ.
ಅಷ್ಟಕ್ಕೂ ಸೂಲಿಬೆಲೆ ಹೇಳಿದ್ದೇನು? : ಮತಾಂತರ ಎಂದು ಬಡಿದಾಡಿದ್ದು ಸಾಕು. ಈಗ ಹಿಂದೂ ಧರ್ಮಕ್ಕೆ ಘರ್ ವಾಪ್ಸಿ ಮಾಡೋ ಬಗ್ಗೆ ಮಾತಾಡಿ. ಎಲ್ಲಿವರೆಗೆ ಲವ್ ಜಿಹಾದ್, ಮತಾಂತರ ಬಗ್ಗೆ ಮಾತನಾಡೋದು? ಎಷ್ಟು ದಿನ ನಮ್ಮ ಹುಡುಗಿಯರನ್ನೇ ನೋಡ್ತಿಯಪ್ಪ ಅಂತ ನಮ್ಮ ಗಂಡು ಮಕ್ಕಳಿಗೆ ಕೇಳೋಣ. ಬೇರೆ ಧರ್ಮದ ಹುಡುಗಿಯರನ್ನೂ ನೋಡು ಅಂತ ಹೇಳಬೇಕು. ಅನ್ಯಧರ್ಮದ ಯುವತಿಯರನ್ನು ಪ್ರೀತಿಸಿ ಮದುವೆಯಾಗಿ ಎಂದು ಹಿಂದೂ ಯುವಕರಿಗೆ ಕರೆ ನೀಡಿದ್ದರು.
ನಮ್ಮ ಸಮಾಜದಲ್ಲಿ ಹೆಣ್ಣು ಮಕ್ಕಳಿಲ್ಲ ಅನ್ನೋವಾಗ ಪಕ್ಕದ ಸಮಾಜದಲ್ಲೂ ಸಮಸ್ಯೆಯಿದೆ ಎಂದು ಧೈರ್ಯ ತುಂಬಿ. ನಾವು ಆಕ್ರಮಣಕಾರಿಯಾಗಿ ಆಡಬೇಕು, ರಕ್ಷಣಾತ್ಮಕವಾಗಿ ಆಡಿದ್ದು ಸಾಕು. ಟೆಸ್ಟ್ ಮ್ಯಾಚ್‌ಗಳು ನಿಂತು ಹೋಯ್ತು. ಈಗ ಟ್ವೆಂಟಿ ಟ್ವೆಂಟಿ ಮ್ಯಾಚ್ ಆಡೋ ಸಮಯ ಬಂದಾಗಿದೆ. ಇರುವ ಇಪ್ಪತ್ತು ಓವರ್‌ನಲ್ಲಿ ಬಡಿಬೇಕು ಅಷ್ಟೇ. ಘರ್ ವಾಪ್ಸಿ ಹೇಗೆ ಮಾಡೋದು ಅನ್ನೋದರ ಬಗ್ಗೆ ರೀಲ್ಸ್ ಮಾಡಿ. ಹಿಂದೂ ಧರ್ಮದಿಂದ ಹೋಗಿರುವವರನ್ನ ಮೊದಲು ವಾಪಸ್ ತರೋಣ ಎಂದು ಕರೆ ನೀಡಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post