ಉಳ್ಳಾಲ, ಎ.17: ಪಶ್ಚಿಮ ಬಂಗಾಳ ಮೂಲದ 19 ವರ್ಷದ ಯುವತಿಯೋರ್ವಳನ್ನು ಆಟೋ ಚಾಲಕ ಸಹಿತ ಮೂವರು ಸೇರಿ ಗ್ಯಾಂಗ್ ರೇಪ್ ನಡೆಸಿರುವ ಕೃತ್ಯ ಮಂಗಳೂರು ಹೊರವಲಯದ ಉಳ್ಳಾಲದ ಕುತ್ತಾರು ರಾಣಿಪುರ ರಿಷಿವನ ಕಾನ್ವೆಂಟ್ ಬಳಿಯಲ್ಲಿ ಬುಧವಾರ ಮಧ್ಯರಾತ್ರಿ ನಡೆದಿದೆ. ಕೆಲಸ ಕೊಡಿಸುವ ನೆಪದಲ್ಲಿ ರಿಕ್ಷಾ ಚಾಲಕ ಪ್ರಭುರಾಜ್ ಎಂಬಾತ ಹೊರ ರಾಜ್ಯದ ಯುವತಿಯನ್ನ ಪುಸಲಾಯಿಸಿ ಆಕೆಗೆ ಮದ್ಯ ಕುಡಿಸಿ ಮತ್ತಿಬ್ಬರು ಸಹಚರರೊಂದಿಗೆ ಗ್ಯಾಂಗ್ ರೇಪ್ ನಡೆಸಿರುವ ಆರೋಪ ಕೇಳಿ ಬಂದಿದೆ. ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ಮೂಲಕ ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ.
ಮಂಗಳೂರಿನಲ್ಲಿ ಆಟೋ ರಿಕ್ಷಾ ಚಾಲಕನಾಗಿರುವ, ಮೂಲ್ಕಿ ಕಾರ್ನಾಡು ಲಿಂಗಪ್ಪಯ್ಯಕಾಡು ನಿವಾಸಿ ಪ್ರಭುರಾಜ್ (38), ಪೈಂಟರ್ ಕಮ್ ಎಲೆಕ್ಟ್ರೀಷಿಯನ್ ಕೆಲಸ ಮಾಡುತ್ತಿರುವ ಕುಂಪಲ ಚಿತ್ರಾಂಜಲಿ ನಗರ ನಿವಾಸಿ ಮಿಥುನ್ (37), ಡೆಲಿವರಿ ಬಾಯ್ ಆಗಿರುವ ಪಡೀಲ್ ಕೊಡಕ್ಕಲ್ ನಿವಾಸಿ ಮನೀಶ್ (30) ಎಂಬ ಮೂವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಸಂತ್ರಸ್ತ ಯುವತಿ ಕೇರಳದ ಕಾಸರಗೋಡು ಜಿಲ್ಲೆಯ ಉಪ್ಪಳದ ಫ್ಲೈವುಡ್ ಫ್ಯಾಕ್ಟರಿಯೊಂದರಲ್ಲಿ ಕೆಲಸಕ್ಕಿದ್ದು ಸ್ನೇಹಿತನ ಜೊತೆ ಮಂಗಳೂರಿನಲ್ಲಿ ಬೇರೆ ಉದ್ಯೋಗಕ್ಕಾಗಿ ಬುಧವಾರ ರೈಲಿನಲ್ಲಿ ಮಂಗಳೂರಿಗೆ ಬಂದಿದ್ದಳು. ಮಂಗಳೂರಿನಲ್ಲಿ ಯುವತಿ ತನ್ನ ಜೊತೆ ಬಂದಿದ್ದ ಸ್ನೇಹಿತನೊಂದಿಗೆ ಜಗಳವಾಡಿದ್ದು ಆಕೆಯ ಮೊಬೈಲಿಗೆ ಹಾನಿಯುಂಟಾಗಿತ್ತು. ಈ ವೇಳೆ ಯುವತಿ ಆರೋಪಿ ಪ್ರಭುರಾಜ್ ಎಂಬವನ ಆಟೋ ಹತ್ತಿದ್ದು ರಿಕ್ಷಾ ಚಾಲಕ ಆಕೆಯನ್ನು ಮೊಬೈಲ್ ರಿಪೇರಿ ಅಂಗಡಿಗೆ ಕರೆದುಕೊಂಡು ಹೋಗಿ ಸಹಕರಿಸಿದ್ದಾನೆ. ಸಂತ್ರಸ್ತ ಯುವತಿಗೆ ಊಟ ಕೊಡಿಸಿದ್ದಲ್ಲದೆ, ಆಕೆಯ ಕೋರಿಕೆ ಮೇರೆಗೆ ರಿಕ್ಷಾ ಚಾಲಕ ಮತ್ತೆ ಆಕೆಯನ್ನ ರೈಲು ನಿಲ್ದಾಣಕ್ಕೆ ಬಿಡಲು ಒಪ್ಪಿದ್ದಾನೆ. ಈ ಮಧ್ಯೆ ಆಟೋ ಚಾಲಕ ಯುವತಿಯ ಪರಿಚಯ ಬೆಳೆಸಿದ್ದು ಆಕೆಗೆ ರೊಟ್ಟಿ ಅಂಗಡಿಯೊಂದರಲ್ಲಿ ಕೆಲಸ ಕೊಡಿಸೋದಾಗಿ ಆಮಿಷ ತೋರಿಸಿ ತನ್ನ ಆಟೋ ರಿಕ್ಷಾದಲ್ಲಿ ಕರೆದುಕೊಂಡು ಹೋಗಿದ್ದಾನೆ.
ದಾರಿ ಮಧ್ಯದಲ್ಲಿ ಮತ್ತೆ ಇಬ್ಬರು ಸಚಚರರನ್ನ ರಿಕ್ಷಾಕ್ಕೆ ಹತ್ತಿಸಿಕೊಂಡಿದ್ದು ಆರೋಪಿಗಳು ನಗರದಲ್ಲೇ ಯುವತಿಗೆ ಮದ್ಯ ಕುಡಿಸಿದ್ದಾರೆ. ನಶೆಯಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿ ಎಚ್ಚೆತ್ತಾಗ ತನ್ನನ್ನು ರಿಕ್ಷಾ ಚಾಲಕ ಸೇರಿ ಮೂವರೊಂದಿಗೆ ಕಾರಿನಲ್ಲಿ ಕರೆದೊಯ್ಯುತ್ತಿದ್ದುದನ್ನು ಕಂಡು ಬೊಬ್ಬಿಟ್ಟಿದ್ದಾಳೆ. ಯುವತಿಯ ಚೀರಾಟಕ್ಕೆ ಬೆದರಿದ ಆರೋಪಿಗಳು ಯುವತಿಯನ್ನ ಮಧ್ಯರಾತ್ರಿ ರಾಣಿಪುರದ ನೇತ್ರಾವತಿ ನದಿ ತೀರದ ರಸ್ತೆ ಬದಿ ಬಿಟ್ಟು ಓಡಿದ್ದಾರೆ. ಯುವತಿಯು ಮಧ್ಯರಾತ್ರಿ ಸುಮಾರು 1.30 ಗಂಟೆ ವೇಳೆ ಅತ್ಯಾಚಾರಿಗಳಿಂದ ತಪ್ಪಿಸಿ ರಾಣಿಪುರದ ಸ್ಥಳೀಯರೋರ್ವರ ಮನೆಯ ಬಾಗಿಲನ್ನು ತಟ್ಟಿದ್ದು ಕುಡಿಯಲು ನೀರು ಕೇಳಿದ್ದಾಳೆ. ಯುವತಿಯ ಮೈಮೇಲೆ ತರಚಿದ ಗಾಯಗಳಾಗಿದ್ದು, ಗಾಬರಿಗೊಂಡ ಸ್ಥಳೀಯರು ಆಕೆಯನ್ನ ಉಪಚರಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಉಳ್ಳಾಲ ಪೊಲೀಸರು ತೀವ್ರ ಅಸ್ವಸ್ಥಗೊಂಡಿದ್ದ ಯುವತಿಯನ್ನ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ತಾನು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವೇಳೆ ಆರೋಪಿಗಳು ಸಾಮೂಹಿಕ ಅತ್ಯಾಚಾರವೆಸಗಿರುವ ಕುರಿತಾಗಿ ಸಂತ್ರಸ್ತ ಯುವತಿ ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದಾಳೆ. ಆಸ್ಪತ್ರೆಗೆ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಸೇರಿದಂತೆ ಪೊಲೀಸರ ತನಿಖಾ ತಂಡವು ಭೇಟಿ ನೀಡಿ ಘಟನಾ ಸ್ಥಳದ ಸಿಸಿಟಿವಿ ಫೂಟೇಜ್ ಪರಿಶೀಲನೆ ನಡೆಸಿದೆ. ಯುವತಿ ತನ್ನ ಹೇಳಿಕೆಯಲ್ಲಿ ಅತ್ಯಾಚಾರ ಆಗಿರುವುದಾಗಿ ಹೇಳಿದ್ದಾರೆ. ವೈದ್ಯಕೀಯ ವರದಿ ಬಂದ ಬಳಿಕ ಇದನ್ನು ದೃಢಪಡಿಸಲಾಗುವುದು” ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಹೇಳಿದರು.
ಘಟನೆ ಕುರಿತಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 51/2025 ರಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್): ಕಲಂ 126(2),140(2), 352, 351(1), 115(2), 64, 309(6), 70 ಮತ್ತು 3(5) ರಂತೆ ಪ್ರಕರಣ ದಾಖಲಾಗಿರುತ್ತದೆ.
Discover more from Coastal Times Kannada
Subscribe to get the latest posts sent to your email.
Discussion about this post