ನಗಾಂವ್ (ಅಸ್ಸಾಂ): ಹಲವು ವಿವಾದಗಳಲ್ಲಿ ಸಿಲುಕಿಕೊಂಡಿದ್ದ ಅಸ್ಸಾಂ ಪೊಲೀಸ್ ಇಲಾಖೆಯ ಮಹಿಳಾ ಸಬ್‌ಇನ್‌ಸ್ಪೆಕ್ಟರ್ ಜುನ್ಮೋನಿ ರಭಾ, ಮಂಗಳವಾರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಕಾರು ನಗಾಂವ್ ಜಿಲ್ಲೆಯಲ್ಲಿ ಟ್ರಕ್‌ಗೆ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ.
ಎರಡು ಜನಪ್ರಿಯ ಪೊಲೀಸ್ ಚಲನಚಿತ್ರಗಳು ತೆರೆ ಕಂಡ ಬಳಿಕ ’ಲೇಡಿ ಸಿಂಗಂ’ ಅಥವಾ ’ದಬಾಂಗ್ ಕಾಪ್’ ಎಂದು ಕರೆಸಿಕೊಂಡಿದ್ದ ಜುನ್ಮೋನಿ, ಅಪಘಾತ ನಡೆದಾಗ ಏಕಾಂಗಿಯಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಹಾಗೂ ಸಮವಸ್ತ್ರದಲ್ಲಿ ಇರಲಿಲ್ಲ ಎಂದು ಹೇಳಲಾಗಿದೆ. ಕಾಳಿಬೋರ್ ಉಪವಿಭಾಗದ ಸರ್‌ಭುಗಿಯಾ ಎಂಬ ಗ್ರಾಮದಲ್ಲಿ ಈ ಅಪಘಾತ ನಡೆದಿದೆ.
ಜುನ್ಮೋನಿ, ಇಲಾಖೆ ಅಥವಾ ತಮ್ಮ ಕುಟುಂಬಕ್ಕೆ ಯಾವುದೇ ಮಾಹಿತಿ ನೀಡದೇ ಖಾಸಗಿ ಕಾರಿನಲ್ಲಿ ಉತ್ತರ ಅಸ್ಸಾಂಗೆ ಹೋಗುತ್ತಿದ್ದರು ಎಂದು ಪೊಲೀಸ್ ಮೂಲಗಳು ಹೇಳಿವೆ. ಮೊರಿಕೊಲಾಂಗ್ ಹೊರಠಾಣೆಯ ಹೊಣೆ ಹೊಂದಿದ್ದ ರಭಾ, ಹಣಕಾಸು ಅವ್ಯವಹಾರಗಳಲ್ಲಿ ಷಾಮೀಲಾಗಿದ್ದವರಿಗೆ ಹಾಗೂ ಇತರ ಅಪರಾಧಿಗಳಿಗೆ ಸಿಂಹಸ್ವಪ್ನ ಎನಿಸಿದ್ದರು. ಜುನ್ಮೋನಿ ರಾಭಾ ಅಸ್ಸಾಂ ಪೊಲೀಸ್ ಇಲಾಖೆಯಲ್ಲಿ ಎಸ್‌ಐ ಆಗಿ ಕೆಲಸ ಮಾಡುತ್ತಿದ್ದರು. ವಿವಾದಗಳಿಂದಾಗಿ ಅವರು ಹಲವು ಸಲ ಅಮಾನತುಗೊಂಡಿದ್ದರು. ಹಲವು ಕಷ್ಟಕರ ಪ್ರಕರಣಗಳನ್ನು ಧೈರ್ಯವಾಗಿ ಎದುರಿಸಿದ್ದ ಅವರು, ಉದ್ಯೋಗದ ಹೆಸರಿನಲ್ಲಿ ವಂಚಿಸಿದ್ದ ಭಾವಿ ಪತಿಯನ್ನು ಬಂಧಿಸಿ ಪ್ರಶಂಸೆ ಪಡೆದಿದ್ದರು.
ಕಳೆದ ಜೂನ್‌ನಲ್ಲಿ ಲಂಚ ಆರೋಪದಿಂದ ಇವರನ್ನು ಬಂಧಿಸಿ, ಸೇವೆಯಿಂದ ಅಮಾನತು ಮಾಡಲಾಗಿತ್ತು. ಅಮಾನತು ರದ್ದಾದ ಬಳಿಕ ಅವರು ಮತ್ತೆ ಸೇವೆಗೆ ಸೇರಿದ್ದರು. 2022ರ ಜನವರಿಯಲ್ಲಿ ಬಿಜೆಪಿ ಶಾಸಕ ಅಮಿಯ ಕುಮಾರ್ ಭುಯಾನ್ ಜತೆಗಿನ ದೂರವಾಣಿ ಸಂಭಾಷಣೆ ಸೋರಿಕೆಯಾದ ಸಂದರ್ಭದಲ್ಲಿ ಮತ್ತೆ ವಿವಾದದಲ್ಲಿ ಸಿಲುಕಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post