ಬೆಳ್ತಂಗಡಿ: ಇಂದು ಬೆಳಗ್ಗೆ ರಾಜ್ಯ ಬಿಜೆಪಿ ನಿಯೋಗ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಶಾಸಕರು, ಪರಿಷತ್ ವಿಪಕ್ಷ ನಾಯಕರು, ಸದಸ್ಯರು, ಸಂಸದರು, ಪಕ್ಷದ ವಿವಿಧ ಪದಾಧಿಕಾರಿಗಳು ದೇವರ ದರ್ಶನ ಪಡೆದು ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ವಿಜಯೇಂದ್ರ ಮಾತನಾಡಿ, “ಎಸ್ಐಟಿ ತನಿಖೆಯನ್ನು ಬಿಜೆಪಿ ಪ್ರಾರಂಭದಲ್ಲೇ ಸ್ವಾಗತಿಸಿದೆ. ತನಿಖೆಯ ಮಧ್ಯಂತರ ವರದಿಯನ್ನು ಸರಕಾರ ಮಂಡಿಸಬೇಕು ಎಂದು ಸದನದಲ್ಲಿ ಆಗ್ರಹಿಸಿದ್ದೇವೆ. ಆದರೆ ಅದರ ಹೆಸರಿನಲ್ಲಿ ನಡೆಯುತ್ತಿರುವ ಅಪಪ್ರಚಾರಗಳನ್ನು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ. “ಈಗ ಹುಟ್ಟು ಹಾಕಿರುವ ಅನುಮಾನಗಳೆಲ್ಲವೂ ಇತ್ಯರ್ಥವಾಗಬೇಕು ಎಂಬ ಅಪೇಕ್ಷೆಯನ್ನು ನಾವೆಲ್ಲರೂ ವ್ಯಕ್ತಪಡಿಸಿದ್ದೇವೆ. ತನಿಖೆ ಸಂದರ್ಭದಲ್ಲಿ ಅನೇಕ ಗೊಂದಲಗಳು, ಅಪಪ್ರಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಯಥೇಚ್ಛವಾಗಿ ನಡೆಯುತ್ತಿವೆ” ಎಂದು ಹೇಳಿದರು.
“ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಎಡಪಂಥೀಯ ಗುಂಪುಗಳ ಒತ್ತಡಕ್ಕೆ ಮಣಿದು ನಾವು ತನಿಖೆಗೆ ಆದೇಶ ಮಾಡಿದ್ದೇವೆ ಎಂದು ಹೇಳಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ವತಃ, ಇದರ ಹಿಂದೆ ಷಡ್ಯಂತ್ರ ಅಡಗಿದೆ ಎಂದು ಉಲ್ಲೇಖಿಸಿದ್ದಾರೆ. ತನಿಖೆಯ ಭರದಲ್ಲಿ ನಡೆಯುತ್ತಿರುವ ಅಪಪ್ರಚಾರಕ್ಕೆ ಕಡಿವಾಣ ಹಾಕುವ ಕೆಲಸವನ್ನು ಸರ್ಕಾರ ಮಾಡಬೇಕಿತ್ತು. ಇದಕ್ಕೆಲ್ಲ ಕಡಿವಾಣ ಹಾಕದೆ ಸರ್ಕಾರ ಅಪರಾಧ ಎಸಗಿದೆ. ಹಾಗಾಗಿ ಮುಖ್ಯಮಂತ್ರಿ ನಾಡಿನ ಜನತೆಯ ಕ್ಷಮೆ ಕೇಳಬೇಕು. ಬಿಜೆಪಿ ಈ ವಿಚಾರದಲ್ಲಿ ರಾಜಕಾರಣ ಮಾಡುತ್ತಿಲ್ಲ. ಧರ್ಮಸ್ಥಳದ ಶ್ರೀ ಮಂಜುನಾಥ ಹಾಗೂ ಅಣ್ಣಪ್ಪ ಸ್ವಾಮಿಯ ಬಗ್ಗೆ ಅಪಪ್ರಚಾರ ಮಾಡಿ, ಅಸಂಖ್ಯಾತ ಭಕ್ತರಲ್ಲಿ ಗೊಂದಲ ಸೃಷ್ಟಿಸುವ ಷಡ್ಯಂತ್ರ ಕೂಡ ಇದರ ಹಿಂದಿದೆ” ಎಂದರು.
ಈ ವೇಳೆ ಬಿಜೆಪಿ ನಾಯಕರಾದ ಸಿ.ಟಿ ರವಿ, ಛಲವಾದಿ ನಾರಾಯಣಸ್ವಾಮಿ, ಸಂಸದ ಬ್ರಿಜೇಶ್ ಚೌಟ, ಶಾಸಕರುಗಳಾದ ವೇದವ್ಯಾಸ್ ಕಾಮತ್, ಹರೀಶ್ ಪೂಂಜ, ಭಗೀರಥಿ ಮುರುಳ್ಯ, ಉಮಾನಾಥ್ ಕೋಟ್ಯಾನ್, ಭರತ್ ಶೆಟ್ಟಿ, ಪ್ರತಾಪ ಸಿಂಹ ನಾಯಕ್, ಯಶ್‌ಪಾಲ್ ಸುವರ್ಣ ಹಾಗೂ ಇತರರು ಇದ್ದರು. ಬಳಿಕ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
Discover more from Coastal Times Kannada
Subscribe to get the latest posts sent to your email.
Discussion about this post