ಮಂಗಳೂರು: ವೆನ್‌ಲಾಕ್‌ನಲ್ಲಿ ಅಗತ್ಯ ಹೊಸ ಕಟ್ಟಡಗಳೊಂದಿಗೆ ಅಂದಾಜು 10 ಕೋಟಿ ರೂ. ವೆಚ್ಚದಲ್ಲಿ ನವೀಕರಣ ಕಾಮಗಾರಿಯನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳುವ ಬಗ್ಗೆ ಜನವರಿಯೊಳಗೆ ಅಂತಿಮ ತೀರ್ಮಾನ ಮಾಡಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಶನಿವಾರ ಲೇಡಿಗೋಶನ್ ಆಸ್ಪತ್ರೆಯ ವಿನೂತನ ಸೌಲಭ್ಯಗಳನ್ನು ವೀಕ್ಷಿಸಿದ ಬಳಿಕ ವೆನ್‌ಲಾಕ್ ಆಸ್ಪತ್ರೆ ಸೇರಿದಂತೆ ಪ್ರಗತಿ ಪರಿಶೀಲನೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ವೆನ್‌ಲಾಕ್ ಆಸ್ಪತ್ರೆಯ ಶವಾಗಾರ ಕಟ್ಟಡ, ಪ್ಯಾರಾ ಮೆಡಿಕಲ್ ಕಾಲೇಜು ಕಟ್ಟಡ, ಪೋಸ್ಟ್ ಮಾರ್ಟಂ ಕೊಠಡಿ ನಿರ್ಮಾಣ, ಅಡುಗೆ ಕೋಣೆ ನಿರ್ಮಾಣ, ಎರಡು ಕಟ್ಟಡಗಳನ್ನು ಸಂಪರ್ಕಿಸುವ ಸೇತುವೆಯ ಪುನರ್ ನಿರ್ಮಾಣ ಸೇರಿದಂತೆ ಅಂದಾಜು ಮೂಲ ಕಾಮಗಾರಿಗಳಿಗೆ ವಿವಿಧ ಸಂಸ್ಥೆಗಳ ಸಿಎಸ್‌ಆರ್ ಫಂಡ್‌ನಿಂದ ಪಡೆಯುವ ಜತೆಗೆ ಇಲಾಖೆಯಿಂದಲೂ ಅನುದಾನ ಒದಗಿಸಿ ಕ್ರಮ ವಹಿಸಲಾಗುವುದು. ಮುಂದಿನ ವಾರ ಅಧಿಕಾರಿಗಳು ಬೆಂಗಳೂರಿನಲ್ಲಿ ಮಾಹಿತಿಯನ್ನು ನೀಡಿದರೆ ಯಾವ ಹಂತದಲ್ಲಿ ಯಾವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದು ಎಂಬುದನ್ನು ನಿರ್ಧರಿಸಲಾಗುವುದು. ಲೇಡಿಗೋಶನ್ ಸೌಲಭ್ಯಗಳು ಅತ್ಯುತ್ತಮವಾಗಿ ನಿರ್ವಹಣೆಯಾಗುತ್ತಿದೆ ಎಂದವರು ಹೇಳಿದರು.
ವೆನ್‌ಲಾಕ್‌ನಲ್ಲಿ ಹೊಸ ಒಪಿಡಿ (ಹೊರರೋಗಿ ವಿಭಾಗ) ಬ್ಲಾಕ್‌ಗೆ ಬೇಡಿಕೆ ಬಂದಿದ್ದು ಈ ಬಗ್ಗೆ ಕೆಎಂಸಿ ಜತೆ ಮಾತುಕತೆ ನಡೆಸಿ ಅಗತ್ಯ ಕ್ರಮ ವಹಿಸಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ರಾಜ್ಯದಲ್ಲಿ ಡೇ ಕೇರ್ ಕಿಮೋ ತೆರಪಿ ಸೆಂಟರ್ ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ತೆರೆಯಲಾಗುತ್ತಿದ್ದು, ವೆನ್‌ಲಾಕ್ ಆಸ್ಪತ್ರೆ ಯಲ್ಲೂ ಈ ಸೌಲಭ್ಯ ಲಭ್ಯವಾಗಲಿದೆ. ಈ ಸೆಂಟರ್‌ನಲ್ಲಿ ಬೆಳಗ್ಗಿನಿಂದ ಸಂಜೆಯ ಅವಧಿಯಲ್ಲಿ ಕಿಮೋತೆರಪಿ ಸೌಲಭ್ಯ ಪಡೆ ಯುವ ನಿಟ್ಟಿನಲ್ಲಿ 10 ಬೆಡ್ ಸೌಲಭ್ಯಗಳ ಕೇಂದ್ರ ಆರಂಭಗೊಳ್ಳಲಿದೆ. ಜಿಲ್ಲಾಸ್ಪತ್ರೆಗಳಲ್ಲಿ ಆಂಕಾಲಜಿಸ್ಟ್‌ಗಳು ಇಲ್ಲದ ಕಾರಣ ಖಾಸಗಿ ವೈದ್ಯಕೀಯ ಕಾಲೇಜುಗಳ ಸಹಕಾರವನ್ನು ಪಡೆಯಲಾಗುತ್ತಿದ್ದು, ವೆನ್‌ಲಾಕ್‌ನಲ್ಲಿ ಯೇನೆಪೋಯ ಆಸ್ಪತ್ರೆಯ ಸಹಯೋಗದೊಂದಿಗೆ ಸೆಂಟರ್ ಕಾರ್ಯಾಚರಿಸಲಿದೆ. ಈ ಬಗ್ಗೆ ಸಿದ್ಧತೆ ನಡೆದಿದ್ದು, ಡಿಸೆಂಬರ್‌ನಲ್ಲಿ ಮುಖ್ಯಮಂತ್ರಿಯವರು ಈ ಸೌಲಭ್ಯವನ್ನು ರಾಜ್ಯವ್ಯಾಪಿಯಾಗಿ ಉದ್ಘಾಟಿಸಲಿದ್ದಾರೆ ಎಂದವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ, ಲೇಡಿಗೋಶನ್ ಅಧೀಕ್ಷಕ ಡಾ. ದುರ್ಗಾಪ್ರಸಾದ್, ವೆನ್‌ಲಾಕ್ ಅಧೀಕ್ಷಕ ಡಾ. ಶಿವಕುಮಾರ್, ಪಾಲಿಕೆ ಸದಸ್ಯರಾದ ವಿನಯರಾಜ್, ಅನಿಲ್ ಕುಮಾರ್, ಇತರರು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post