ಮಂಗಳೂರು, ಮಾರ್ಚ್ 17: ಭೂ ವ್ಯವಹಾರದಲ್ಲಿನ ವೈಷಮ್ಯದಿಂದ ವ್ಯಕ್ತಿಯೊಬ್ಬರು ಸ್ಕೂಟರಿನಲ್ಲಿ ತೆರಳುತ್ತಿದ್ದಾಗ ತನ್ನ ಇನ್ನೋವಾ ಕಾರಿನಲ್ಲಿ ಡಿಕ್ಕಿಪಡಿಸಿ ಕೊಲೆಗೆ ಯತ್ನಿಸಿದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಗರದ ಆರ್ಯ ಸಮಾಜ ರಸ್ತೆಯಲ್ಲಿ ನಡೆದಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಫಳ್ನೀರ್ ನಿವಾಸಿ ಮಹಮ್ಮದ್ ಶರೀಫ್ (26) ಎಂಬಾತ ಬಂಧಿತ. ಮಲ್ಲಿಕಟ್ಟೆ ನಿವಾಸಿ ಮೋಹನದಾಸ್ ಶೆಟ್ಟಿ (56) ಅವರಿಗೆ ಇನ್ನೋವಾ ಕಾರಿನಲ್ಲಿ ಡಿಕ್ಕಿಪಡಿಸಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಹಮ್ಮದ್ ಶರೀಫ್ ಮತ್ತು ಆತನ ತಂದೆ ಮಹಮ್ಮದ್ ಇಕ್ಬಾಲ್ ಎಂಬವರ ಜೊತೆಗೆ ಮೋಹನದಾಸ್ ಶೆಟ್ಟಿಗೆ ಭೂ ವ್ಯವಹಾರವಿದ್ದು, ಸುರತ್ಕಲ್ ನ ಕಾನ ಮತ್ತು ವಾವಂಜೂರಿನಲ್ಲಿ ಸುಮಾರು ಎರಡು ಕೋಟಿ ಮೌಲ್ಯದ ಜಾಗವನ್ನು ಖರೀದಿಸಲು ಹೂಡಿಕೆ ಮಾಡಿದ್ದರು. ವ್ಯವಹಾರದಲ್ಲಿ ಮೋಹನದಾಸ್ ಶೆಟ್ಟಿ ಮೋಸ ಮಾಡಿದ ಸಿಟ್ಟಿನಿಂದ ಇಂದು ಬೆಳಗ್ಗೆ 11 ಗಂಟೆಗೆ ನಗರದ ಆರ್ಯ ಸಮಾಜ ರಸ್ತೆಯ ಬದಿಯಲ್ಲಿ ಮಾತುಕತೆ ನಡೆಸಿದ್ದರು. ಈ ವೇಳೆ, ಮೋಹನದಾಸ ಶೆಟ್ಟಿಯವರ ಮೊಬೈಲ್ ಕಸಿದಿದ್ದು ನಂತರ ತನ್ನ ದ್ವಿಚಕ್ರ ವಾಹನವನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ಆರೋಪಿ ವ್ಯಕ್ತಿ ಸಿಟ್ಟಿನಿಂದ ತನ್ನ ಇನೋವಾ ಕ್ರಿಸ್ಟಾ ಕಾರನ್ನು ಅತಿ ವೇಗವಾಗ ಚಲಾಯಿಸಿ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಗುದ್ದಿ ಕೊಲೆಗೆ ಪ್ರಯತ್ನಿಸಿದ್ದಾನೆ. ಈ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದಲ್ಲಿ ತನಿಖೆ ಕೈಗೊಂಡ ಪೊಲೀಸರು ಕೃತ್ಯವೆಸಗಿದ ಆರೋಪಿ ಮಹಮ್ಮದ್ ಶರೀಫ್ ಎಂಬಾತನನ್ನು ಪತ್ತೆಮಾಡಿ ದಸ್ತಗಿರಿ ಮಾಡಿದ್ದಾರೆ. ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ದಾಖಲಾಗಿದೆ.
Discover more from Coastal Times Kannada
Subscribe to get the latest posts sent to your email.







Discussion about this post