ಮಂಗಳೂರು: ನಗರದ ಬಜ್ಪೆಯಲ್ಲಿರುವ ಎಸ್ಇಝೆಡ್ನಲ್ಲಿರುವ ಶ್ರೀ ಉಲ್ಕಾ ಎಲ್ಎಲ್ಪಿ ಮೀನು ಸಂಸ್ಕರಣಾ ಘಟಕದಲ್ಲಿ ಓರ್ವನ ಪ್ರಾಣ ಉಳಿಸಲು ಹೋಗಿ ಒಟ್ಟಾರೆ ಐವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಪ್ರಕರಣದಲ್ಲಿ ಇನ್ನೂ ಮೂವರು ಕಾರ್ಮಿಕರು ಉಸಿರುಗಟ್ಟಿ ಗಂಭೀರ ಸ್ಥಿತಿಯಲ್ಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಇವರು ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಮಹಮ್ಮದ್ ಸಮರುಲ್ಲಾ ಇಸ್ಲಾಂ, ಉಮರುಲ್ಲಾ ಫಾರೂಕ್, ನಿಜಾಮುದ್ದೀನ್, ನಿಜಾಮುದ್ದೀನ್ ಇಸ್ಲಾಂ, ಶರಕತ್ ಅಲಿ ಮೃತ ಕಾರ್ಮಿಕರು ಎಂದು ತಿಳಿದುಬಂದಿದೆ.
ಈ ಕುರಿತು ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಮಾತನಾಡಿ, ಭಾನುವಾರ ಸಂಜೆ 6-7 ಗಂಟೆ ಸುಮಾರಿಗೆ ಒಬ್ಬ ವ್ಯಕ್ತಿ ಮೀನು ತ್ಯಾಜ್ಯಾ ಸಂಗ್ರಹಣಾ ಟ್ಯಾಂಕ್ನಲ್ಲಿ ಬಿದ್ದು, ಪ್ರಜ್ಞಾಹೀನನಾಗಿದ್ದಾನೆ. ಆತನನ್ನು ಕಾಪಾಡಲು ಹೋದ ಹೆಚ್ಚುವರಿಯಾಗಿ ಏಳು ಜನವೂ ಸಂಗ್ರಹಣಾ ಟ್ಯಾಂಕ್ನೊಳಗೆ ಬಿದ್ದಿದ್ದಾರೆ. ಪ್ರಜ್ಞಾಹೀನರಾದ ಅವರನ್ನು ತಕ್ಷಣವೇ ನಗರದ ಎ.ಜೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅದರಲ್ಲಿ ಒಬ್ಬ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮತ್ತಿಬ್ಬರು ನಿನ್ನೆ ರಾತ್ರಿಯೇ ಆಸ್ಪತ್ರೆಗೆ ದಾಖಲಾದ ಬಳಿಕ ಸಾವನ್ನಪ್ಪಿದ್ದಾರೆ. ಮಹಮ್ಮದ್ ಸಮರುಲ್ಲಾ ಇಸ್ಲಾಂ, ಉಮರುಲ್ಲಾ ಫಾರೂಕ್, ನಿಜಾಮುದ್ದೀನ್ ನಿನ್ನೆ ಸಾವನ್ನಪ್ಪಿದವರು. ಉಳಿದ ಐದು ಜನರಿಗೆ ಐಸೋಲೇಷನ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅದರಲ್ಲಿ ಇಬ್ಬರು ನಿಜಾಮುದ್ದೀನ್ ಇಸ್ಲಾಂ, ಶರಕತ್ ಅಲಿ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ. ಅದರ ಜೊತೆ ಹಸನ್ ಅಲಿ, ಮೊಹಮ್ಮದ್ ಅಲೀಬುಲ್ಲಾ ಮತ್ತು ಅಫೀಸುಲ್ಲಾ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ನಿಜಾಮುದ್ದೀನ್ ಮೊದಲು ಮೀನು ತ್ಯಾಜ್ಯ ಸಂಗ್ರಹಣಾ ಟ್ಯಾಂಕ್ನೊಳಗೆ ಬಿದ್ದವನು. ಆತನನ್ನು ಕಾಪಾಡಲು ಉಳಿದವರು ಟ್ಯಾಂಕ್ನೊಳಗೆ ಇಳಿದಿದ್ದರು. ಇವರೆಲ್ಲ ಪಶ್ಚಿಮ ಬಂಗಾಳ ಮೂಲದವರು. ಸುಮಾರು 20 ರಿಂದ 23ರ ಚಿಕ್ಕ ವಯಸ್ಸಿನ ಹುಡುಗರು. ಮಂಗಳೂರಿನ ಎಸ್ಇಝಡ್ ವ್ಯಾಪ್ತಿಯಲ್ಲಿರುವ ಶ್ರೀ ಉಲ್ಕಾ ಎಲ್ಎಲ್ಪಿ ಮೀನುಸಂಸ್ಕರಣಾ ಘಟಕದಲ್ಲಿ ಈ ದುರ್ಘಟನೆ ಸಂಭವಿಸಿದೆ. ಮುಂಬೈ ಮೂಲದ ವ್ಯಕ್ತಿಗೆ ಸೇರಿರುವ ಈ ಸಂಸ್ಥೆಯಲ್ಲಿ ಒಟ್ಟು 68 ಮಂದಿ ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರು ಕೆಲಸ ಮಾಡುತ್ತಿದ್ದರು.
ಫಿಶ್ ಮಿಲ್, ಮುಂಬೈ ಮೂಲದ ರಾಜು ಎಂಬವರಿಗೆ ಸೇರಿದ್ದಾಗಿದ್ದು ಶ್ರೀ ಉಲ್ಕಾ ಎಲ್ಎಲ್ ಪಿ ಹೆಸರಿನಲ್ಲಿ ಕಾರ್ಯಾಚರಿಸುತ್ತಿತ್ತು. ಕಾರ್ಮಿಕರಿಗೆ ರಕ್ಷಣಾತ್ಮಕ ಉಪಕರಣಗಳನ್ನು ಒದಗಿಸದೆ ನಿರ್ಲಕ್ಷ್ಯ ವಹಿಸಿದ ಬಗ್ಗೆ ಬಜಪೆ ಠಾಣೆಯಲ್ಲಿ 337, 338, 304 ಅಡಿ ಪ್ರಕರಣ ದಾಖಲಾಗಿದೆ. ಕಂಪನಿಯ ಪ್ರೊಡಕ್ಷನ್ ಮ್ಯಾನೇಜರ್ ರೂಬಿ ಜೋಸೆಫ್, ಏರಿಯಾ ಮ್ಯಾನೇಜರ್ ಕುಬೇರ್ ಗಾಡೆ, ಫ್ಯಾಕ್ಟರಿ ಸೂಪರ್ ವೈಸರ್ ಮೊಹಮ್ಮದ್ ಅನ್ವರ್, ಕಂಪೆನಿಯ ಕಾರ್ಮಿಕರನ್ನು ನೋಡಿಕೊಳ್ಳುತ್ತಿದ್ದ ಉಳ್ಳಾಲದ ಆಜಾದ್ ನಗರ ನಿವಾಸಿ ಫಾರೂಕ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಸಂಬಂಧಪಟ್ಟ ಇಲಾಖೆಯವರನ್ನು ಬರಲು ಹೇಳಿದ್ದೇವೆ. ಗಂಭೀರ ಪ್ರಕರಣವಾಗಿರುವುದರಿಂದ ಎಲ್ಲಾ ರೀತಿಯಲ್ಲೂ ತನಿಖೆ ಮಾಡಲಾಗುವುದು ಎಂದು ತಿಳಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post