ಮಂಗಳೂರು, ಎ.18: ಮಂಗಳೂರು ನಗರ ಉತ್ತರ ಕ್ಷೇತ್ರದ ಹಾಲಿ ಶಾಸಕ ಬಿಜೆಪಿ ಅಭ್ಯರ್ಥಿ ಡಾ.ಭರತ್ ವೈ. ಶೆಟ್ಟಿ ಎರಡನೇ ಬಾರಿಗೆ ಆಯ್ಕೆ ಬಯಸಿ ಮಂಗಳವಾರ ಮಂಗಳೂರು ತಾಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿಗೆ ತಮ್ಮ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಗೂ ಮುನ್ನ ಪಕ್ಷದ ಪ್ರತಿನಿಧಿಗಳು ಮತ್ತು ಬೆಂಬಲಿಗರ ಸಮ್ಮುಖದಲ್ಲಿ ಡಾ.ಶೆಟ್ಟಿ ಅವರು ಕಾವೂರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಸಾರ್ವಜನಿಕ ಸಭೆ ಆಯೋಜಿಸಿದ್ದ ಕಾವೂರು ಮೈದಾನದವರೆಗೆ ನಡೆದ ಕಾಲ್ನಡಿಗೆ ಜಾಥಾದಲ್ಲಿ ಅಪಾರ ಸಂಖ್ಯೆಯಲ್ಲಿ ಬಿಜೆಪಿ ನಾಯಕರು, ಕಾರ್ಯಕರ್ತರು ಭಾಗವಹಿಸಿದ್ದರು.
ಶಾಸಕ ಭರತ್ ಶೆಟ್ಟಿ ಮಾತನಾಡಿ, ‘ಜನರ ಬೆಂಬಲದಿಂದ ಐದು ವರ್ಷ ಶಾಸಕನಾಗುವ ಅವಕಾಶ ಸಿಕ್ಕಿದೆ. ವೈದ್ಯನಾಗಿದ್ದ ನಾನು ರಾಜಕೀಯಕ್ಕೆ ಹೊಸಬನಾಗಿದ್ದೆ. ಹಿರಿಯ ನಾಯಕರ ಬೆಂಬಲ ಸಿಕ್ಕಿರುವುದು ನನ್ನ ಅದೃಷ್ಟ. ಅಭಿವೃದ್ಧಿಗೆ ನಾನೊಬ್ಬನೇ ಕಾರಣನಲ್ಲ. ನಮ್ಮ ಪಕ್ಷದ ಸಂಸ್ಕೃತಿಯಾದ ಟೀಮ್ ವರ್ಕ್‌ನಿಂದ ಸಂಪೂರ್ಣ ಅಭಿವೃದ್ಧಿ ನಡೆದಿದೆ ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ಮಾಜಿ ಕಾರ್ಪೊರೇಟರ್, ಕಾಂಗ್ರೆಸ್ ಮುಖಂಡ ಅಶೋಕ್ ಶೆಟ್ಟಿ, ಪುರಂದರ ದಾಸ್ ಕೂಳೂರು, ಶಶಿಕಲಾ ಬಿಜೆಪಿಗೆ ಸೇರ್ಪಡೆಯಾದರು. ಮನಪಾ ಮೇಯರ್ ಜಯಾನಂದ ಅಂಚನ್, ಬಿಜೆಪಿ ಮುಖಂಡರಾದ ಗಣೇಶ್ ಹೊಸಬೆಟ್ಟು, ಪೂಜಾ ಪೈ, ಕೃಷ್ಣ ಶೆಟ್ಟಿ ಕಡಬ, ರಾಜೀವ ಕಾಂಚನ್ ಮತ್ತಿತರರು ಉಪಸ್ಥಿತರಿದ್ದರು
Discover more from Coastal Times Kannada
Subscribe to get the latest posts sent to your email.
Discussion about this post