ಮಂಗಳೂರು: ಕೇಂದ್ರ ಸರಕಾರದ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಕರ್ನಾಟಕ ಉಲಮಾ ಒಕ್ಕೂಟದ ನೇತೃತ್ವದಲ್ಲಿ ಅಡ್ಯಾರ್ ಕಣ್ಣೂರಿನ ಶಾ ಗಾರ್ಡನ್‌ನಲ್ಲಿ ಶುಕ್ರವಾರ (ಎ.18) ಪ್ರತಿಭಟನಾ ಸಮಾವೇಶ ನಡೆಸಲಾಗುತ್ತಿದೆ. ಸಂಯುಕ್ತ ಖಾಝಿಗಳ ನೇತೃತ್ವದಲ್ಲಿ ಅಡ್ಯಾರ್ ಕಣ್ಣೂರಿನಲ್ಲಿ ಹಮ್ಮಿಕೊಂಡಿರುವ ಪ್ರತಿಭಟನ ಸಮಾವೇಶದಲ್ಲಿ ಭಾರಿ ಜನಸ್ತೋಮ ಸೇರಿದೆ.
4.30 ಕ್ಕೆ ಸಭಾ ಕಾರ್ಯಕ್ರಮ ಆರಂಭವಾಗಲಿದ್ದು, ಜಿಲ್ಲೆಯ ವಿವಿಧೆಡೆಯಿಂದ ಜನರು ಆಗಮಿಸುತ್ತಿದ್ದಾರೆ. ಬಿಸಿಲ ಝಳದ ನಡುವೆಯೂ ಅಡ್ಯಾರ್ ಕಣ್ಣೂರಿನ ಶಾ ಗಾರ್ಡನ್ ಮೈದಾನದಲ್ಲಿ ಜನರು ಸೇರಿದ್ದಾರೆ. ಜನರಿಂದ ಅಝಾದಿ ಘೋಷಣೆ ಕೇಳಿಬರುತ್ತಿದೆ. ಹೆದ್ದಾರಿಯಲ್ಲಿ ವಾಹನ ಸಂಚಾರ ವಿರಳವಾಗಿದ್ದು, ಮೈದಾನದ ಸುತ್ತಲೂ ಬಿಗು ಪೊಲೀಸ್ ಭದ್ರತೆ ನೀಡಲಾಗಿದೆ. ಪೊಲೀಸರು ಮತ್ತು ಸ್ವಯಂ ಸೇವಕರಿಂದ ಸಂಚಾರ ವ್ಯವಸ್ಥೆ ನಿರ್ವಹಣೆ ಮಾಡಲಾಗುತ್ತಿದೆ.
ಸಮಾವೇಶದಲ್ಲಿ ವಕ್ಫ್‌ಬೋರ್ಡ್ ಮಾಜಿ ಅಧ್ಯಕ್ಷ ಹಾಗೂ ಉಲೇಮಾ ಕೋರ್ಡಿನೇಷನ್ ಕಮಿಟಿ ಕೋಶಾಧಿಕಾರಿ ಶಾಫಿ ಸಅದಿ ಉಸ್ತಾದ್ ಮಾತನಾಡಿ, “ಮೇ 5ರಂದು ಸುಪ್ರೀಂ ಕೋರ್ಟ್ ಈ ಕಾಯ್ದೆ ತಂದವರನ್ನು ಬೀದಿಗೆ ತರಲಿದೆ. ಯಾವ ಹಿಂದೂಗಳ ಆಸ್ತಿಯನ್ನು ವಕ್ಫ್ ಮಂಡಳಿ ಮುಟ್ಟಿಲ್ಲ. ಕರ್ನಾಟಕದಲ್ಲಿ ಇತರ ಧರ್ಮೀಯರ ಆರಾಧನಾ ವಿಚಾರದಲ್ಲಿ ವಕ್ಫ್ ಮಂಡಳಿ ಹಸ್ತಕ್ಷೇಪ ಮಾಡಿಲ್ಲ. 26 ಲಕ್ಷ ಎಕರೆ ವಕ್ಫ್ ಆಸ್ತಿಯನ್ನು ಕಬಳಿಸುವ ತಂತ್ರಗಾರಿಕೆ ಕೇಂದ್ರ ಸರ್ಕಾರದ್ದಾಗಿದೆ. ಯಾರಿಗೂ ಇಲ್ಲದ ಕಾನೂನನ್ನು ಮುಸ್ಲಿಮರಿಗೆ ಹೇರಲಾಗಿದೆ. ಯಾವುದೇ ಕಾರಣಕ್ಕೂ ಮುಸ್ಲಿಮರ ಧಾರ್ಮಿಕ ಭೂಮಿಯನ್ನು ಮುಟ್ಟಲು ಬಿಡಲ್ಲ” ಎಂದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಖಾಜಿ ತ್ವಾಖಾ ಅಹ್ಮದ್ ಮುಸ್ಲಿಯಾರ್, “ದೇಶದ ಮುಸ್ಲಿಂ ಸಮುದಾಯದ ಹಕ್ಕನ್ನು ಕೇವಲ ಮುಸಲ್ಮಾನ ಎಂಬ ಕಾರಣಕ್ಕೆ ಫ್ಯಾಸಿಸ್ಟ್ ಶಕ್ತಿಗಳು ಕಸಿದುಕೊಳ್ಳಲು ಮುಂದಾಗಿವೆ. ಆದರೆ, ಯಾವುದೇ ಕಾರಣಕ್ಕೂ ವಕ್ಫ್ ತಿದ್ದುಪಡಿ ಕಾಯ್ದೆ ಜಾರಿ ಮಾಡಲು ಬಿಡಲ್ಲ. ನೂರಾರು ವರ್ಷಗಳಿಂದ ಮುಸ್ಲಿಂ ಸಮುದಾಯ ಈ ನೆಲದಲ್ಲಿ ಬದುಕುತ್ತಿದೆ. ಇನ್ನೂ ಕೂಡ ಬದುಕಲಿದೆ” ಎಂದು ಹೇಳಿದರು.
ಧರ್ಮಗುರು ಅಬ್ದುಲ್ ರಶೀದ್ ಝೈನಿ ಮಾತನಾಡಿ, “ದೇಶ ಗಂಡಾಂತರ ಎದುರಿಸಿದಾಗೆಲ್ಲ ಉಲೆಮಾಗಳು ಹೋರಾಟ ಮಾಡಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲೂ ಸಮರ ಸಾರಿದ್ದರು. ಇದೀಗ ಮತ್ತೆ ಅಂಥ ಕಾಲ ಬಂದಿದೆ. ಎಲ್ಲೆಡೆ ಮುಸ್ಲಿಂ ಫೋಬಿಯಾ ಹರಡಲಾಗುತ್ತಿದೆ. ಮುಸಲ್ಮಾನರನ್ನು ಈ ದೇಶದಿಂದ ಇಲ್ಲವಾಗಿಸಲು ಎಂದೂ ಸಾಧ್ಯವಿಲ್ಲ. ಎಲ್ಲ ಜಾತ್ಯತೀತರು ಒಗ್ಗಟ್ಟಾಗಿ ನಿಮ್ಮನ್ನು ಸಮುದ್ರಕ್ಕೆ ಎಸೆಯುವ ದಿನ ದೂರವಿಲ್ಲ” ಎಂದರು.
ಪ್ರತಿಭಟನಾ ಸ್ಥಳದಲ್ಲಿ ಸೇರಿದ್ದವರು ಆಝಾದಿ ಘೋಷಣೆಗಳನ್ನು ಕೂಗುತ್ತಾ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಮೈದಾನದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಪೊಲೀಸರ ಜತೆಗೆ ಸ್ವಯಂ ಸೇವಕರು ಕೂಡಾ ಮೈದಾನದ ಸುತ್ತಮುತ್ತ ಸುಗಮ ಸಂಚಾರ ವ್ಯವಸ್ಥೆ ನಿರ್ವಹಣೆಗೆ ಸಹಕರಿಸುವುದು ಕಂಡು ಬಂತು. ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದ ಕಾರಣ ಮೊಬೈಲ್ ನೆಟ್‌ವರ್ಕ್ ಬಹುತೇಕವಾಗಿ ಜಾಮ್ ಆಗಿದ್ದು, ಸಂಪರ್ಕ, ಸಂವಹನಕ್ಕೆ ಅಡ್ಡಿಯಾ ಯಿತು. ಸಮಾವೇಶದ ಪ್ರತಿ ಹಂತದ ಚಿತ್ರೀಕರಣಕ್ಕೆ ವೀಡಿಗ್ರಾಫರ್‌ಗಳ ನಿಯೋಜನೆ ಮಾಡಲಾಗಿದ್ದು, ಭದ್ರತೆಯ ದೃಷ್ಟಿಯಿಂದ ಡ್ರೋನ್ ಮೂಲಕ ಕಣ್ಗಾವಲೂ ಇರಿಸಲಾಗಿದೆ. ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ತಡೆ ಉಂಟು ಮಾಡದಂತೆ ಆಯೋಜಕರು ಆಗಾಗ್ಗೆ ಧ್ವನಿ ವರ್ಧಕ ಮೂಲಕ ಸೂಚನೆ ನೀಡುತ್ತಿದ್ದಾರೆ.
ಸಮಾವೇಶದ ಮೈದಾನದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸಮೂಹವೇ ಸೇರಿದ್ದರೆ, ಅಲ್ಲಲ್ಲಿ ರಾಷ್ಟ್ರ ಧ್ವಜ ಹಾರಾಟ ಪ್ರತಿಭಟನಾಕಾರರಿಗೆ ಹೊಸ ಚೈತನ್ಯ ನೀಡುತ್ತಿದೆ.
Discover more from Coastal Times Kannada
Subscribe to get the latest posts sent to your email.
Discussion about this post