ಮಂಗಳೂರು, ಜುಲೈ 17 : ಮಹತ್ವದ ಕಾರ್ಯಾಚರಣೆಯಲ್ಲಿ ಮಂಗಳೂರು ಪೊಲೀಸರು ಶ್ರೀಮಂತರು ಮತ್ತು ಬೇರೆ ಬೇರೆ ನಗರಗಳ ಉದ್ಯಮಿಗಳನ್ನೇ ಗುರಿಯಾಗಿಸಿ ದೇಶಾದ್ಯಂತ ನೆಟ್ವರ್ಕ್ ಇಟ್ಟುಕೊಂಡು ಭಾರೀ ವಂಚನಾ ಜಾಲ ಎಸಗುತ್ತಿದ್ದ ಕತರ್ನಾಕ್ ಆರೋಪಿಯನ್ನು ಬಲೆಗೆ ಕೆಡವಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಹತ್ತು ವರ್ಷಗಳಲ್ಲಿ ಇನ್ನೂರು ಕೋಟಿಗೂ ಅಧಿಕ ವಂಚನೆ ಎಸಗಿದ ಜಾಲ ಎನ್ನಲಾಗುತ್ತಿದ್ದು ಪ್ರಮುಖ ಆರೋಪಿ ಜಪ್ಪಿನಮೊಗರು ಬಳಿಯ ತಂದೊಳಿಗೆ ಎಂಬಲ್ಲಿ ದುಬಾಯ್ಸ್ ಹೆಸರಿನ ಐಷಾರಾಮಿ ಮನೆಯಲ್ಲಿ ಇದ್ದಾಗಲೇ ಮಿಂಚಿನ ಕಾರ್ಯಾಚರಣೆ ನಡೆಸಿ ಸೆರೆಹಿಡಿದಿದ್ದಾರೆ. ರೋಹನ್ ಸಲ್ಡಾನ(45) ಬಂಧಿತ ಆರೋಪಿಯಾಗಿದ್ದು ಆತನ ಜೊತೆಗಿದ್ದ ಇನ್ನೊಬ್ಬ ಸಹಚರನನ್ನೂ ಬಂಧಿಸಲಾಗಿದೆ.
ಮಂಗಳೂರಿನ ಸಿಇಎನ್ ಠಾಣೆಯಲ್ಲಿ ಇತ್ತೀಚೆಗೆ ಎರಡು ವಂಚನೆ ಪ್ರಕರಣ ದಾಖಲಾಗಿದ್ದು ಇದಕ್ಕೆ ಸಂಬಂಧಿಸಿ 20ಕ್ಕೂ ಹೆಚ್ಚು ಸೈಬರ್ ಠಾಣೆ ಪೊಲೀಸರು ಗುರುವಾರ ರಾತ್ರಿ ಮಹತ್ತರ ಕಾರ್ಯಾಚರಣೆ ನಡೆಸಿದ್ದರು. ಆರೋಪಿತನ ಮನೆಯಿಂದ ದಾಖಲಾತಿ, ಖಾಲಿ ಚೆಕ್ಗಳು ಹಾಗೂ ಸುಮಾರು 667 ಗ್ರಾಂ ಚಿನ್ನಾಭರಣಗಳು ಮತ್ತು ಅಂದಾಜು 2.75 ಕೋಟಿ ಮೌಲ್ಯದ ವಜ್ರದ ಉಂಗುರ ವಶಪಡಿಸಿಕೊಳ್ಳಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಆರೋಪಿ ವಿರುದ್ಧ ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 22/2025 ಕಲಂ: 316(2), 316(5) 318(2), 318(3) ಜೊತೆಗೆ 3(5) ಭಾರತೀಯ ನ್ಯಾಯ ಸಂಹಿತೆ ಹಾಗೂ ಅಪರಾಧ ಕ್ರಮಾಂಕ:30/2025 ಕಲಂ:316(2), 316(5), 318(2), 318 (3), 61(2) ಜೊತೆಗೆ 3(5) ಭಾರತೀಯ ನ್ಯಾಯ ಸಂಹಿತೆಯಂತೆ ವಂಚನೆ ಪ್ರಕರಣಗಳು ದಾಖಲಾಗಿರುತ್ತದೆ ಎಂದು ಕಮಿಷನರ್ ತಿಳಿಸಿದ್ದಾರೆ.
ಮನೆಯ ಹೊರಗಡೆ ರಿಮೋಟ್ ಆಧರಿತ ದೊಡ್ಡ ಗೇಟ್ ಅಳವಡಿಸಿದ್ದು ಯಾರಿಗೂ ಒಳಗಡೆ ಬರೋಕೆ ಆಗದಂತೆ ಮಾಡಿಕೊಂಡಿದ್ದ. ಪೊಲೀಸರು ಬಂದಾಗಲೂ ಗೇಟ್ ತೆರೆಯದೆ ಒಳಗಡೆ ಇದ್ದ. ಹೀಗಾಗಿ ಹತ್ತಡಿ ಎತ್ತರದ ಗೇಟ್ ಒಳಗೆ ಹಾರಿ ಪೊಲೀಸರು ಎಂಟ್ರಿ ಕೊಟ್ಡಿದ್ದು ಈ ವೇಳೆ ಮಲೇಶಿಯಾ ಯುವತಿ ಜೊತೆಗೆ ಕುಳಿತು ರೊನಾಲ್ಡ್ ಬಿಯರ್ ಹೀರುತ್ತಿದ್ದ. ಪೊಲೀಸರು ಗ್ಲಾಸ್ ಚೇಂಬರ್ ಒಡೆದುಕೊಂಡೇ ಒಳಗೆ ಎಂಟ್ರಿಯಾಗಿದ್ದು ಈ ವೇಳೆ ಒಬ್ಬಾತ ಹೊರಗಡೆ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಎಂಟು ಗಂಟೆ ರಾತ್ರಿಗೆ ಪೊಲೀಸರು ತಮ್ಮ ಬೂಟು ಕಳಚಿ ಎದುರಿನ ಗದ್ದೆಯಲ್ಲಿ ಆತನನ್ನು ಬೆನ್ನಟ್ಟಿ ಹಿಡಿದಿದ್ದಾರೆ.
ಪೊಲೀಸರು ಪ್ರಾಥಮಿಕ ತಪಾಸಣೆ ನಡೆಸಿದ ವೇಳೆ ನಲ್ವತ್ತು ಕೋಟಿಯಷ್ಟು ಮೊತ್ತ ಆತನ ವಿವಿಧ ಬ್ಯಾಂಕ್ ಖಾತೆಗಳಲ್ಲಿರೋದು ಪತ್ತೆಯಾಗಿದೆ. ಅಲ್ಲದೆ, ಜಪ್ಪಿನಮೊಗರು ನೇತ್ರಾವತಿ ನದಿಯಲ್ಲಿ ಬೋಟ್ ಹಾಕಲು 5-10 ಕೋಟಿಯಷ್ಟು ಇನ್ವೆಸ್ಟ್ ಮಾಡಿದ್ದಾನಂತೆ. ದುಬಾಯ್ಸ್ ಹೆಸರಿನಲ್ಲಿ ಬೇರೆ ಬೇರೆ ಬಿಸಿನೆಸ್ ಹೊಂದಿದ್ದಾನೆ. ಈತನ ಪತ್ನಿ ಚೆನ್ನೈಯಲ್ಲಿದ್ದು ಒಂದು ಮಗು ಇದೆ. ಇದೇ ರೀತಿಯ ಮೋಸದ ಜಾಲ ಹೆಣೆದು ಹಲವಾರು ಮಂದಿಗೆ ವಂಚನೆ ಎಸಗಿರುವ ಮಾಹಿತಿ ಪೊಲೀಸರಿಗೆ ಲಭಿಸಿದ್ದು ಉತ್ತರ ಭಾರತದ ಸೈಬರ್ ಕಳ್ಳರ ರೀತಿಯಲ್ಲೇ ರೊನಾಲ್ಡ್ ಹೈ ಫೈ ಉದ್ಯಮಗಳನ್ನು ಯಾಮಾರಿಸಿ ಹಣ ಕೀಳುತ್ತಿದ್ದ. ಹಿಂದೊಮ್ಮೆ ಈತನ ಪತ್ತೆಗಾಗಿ ಸಿಐಡಿ ಪೊಲೀಸರು ಬಂದಿದ್ದರು ಎನ್ನುವ ಮಾಹಿತಿ ಇದ್ದು ಅವರು ಕೂಡ ರೊನಾಲ್ಡ್ ಎಸೆದ ಜಾಲಕ್ಕೆ ಸಿಲುಕಿ ಹಿಂದಕ್ಕೆ ತೆರಳಿದ್ದರು.
ದೇಶದ ಪ್ರಮುಖ ನಗರಗಳಲ್ಲಿ ಏಜಂಟರನ್ನು ಇಟ್ಟುಕೊಂಡಿದ್ದು ದೊಡ್ಡ ಬಿಸಿನೆಸ್ ಮಾಡುವವರನ್ನು ದೊಡ್ಡ ಮೊತ್ತದ ಸಾಲ ಕೊಡಿಸುವುದಾಗಿ ಬಲೆಗೆ ಹಾಕುತ್ತಿದ್ದ. ನೂರು ಕೋಟಿ ಸಾಲವನ್ನು ಕೇವಲ 3ರಿಂದ ನಾಲ್ಕು ಪರ್ಸೆಂಟ್ ಬಡ್ಡಿಗೆ ಕೊಡುವುದಾಗಿ ಹೇಳಿ ಡೀಲ್ ಕುದುರಿಸುತ್ತಾನೆ. ಇದಕ್ಕಾಗಿ ಮಂಗಳೂರಿನ ಜಪ್ಪಿನಮೊಗರಿನಲ್ಲಿ ಐಷಾರಾಮಿ ಮನೆ ಮಾಡಿಕೊಂಡಿದ್ದು ಅಲ್ಲಿಂದಲೇ ವ್ಯವಹಾರ ಮಾಡುತ್ತಿದ್ದ. ಡೀಲ್ ಒಪ್ಪಿಕೊಂಡು ಮನೆಗೆ ಬಂದವರಿಗೆ ಭಾರೀ ಆತಿಥ್ಯವನ್ನೂ ಕೊಡಿಸುತ್ತಿದ್ದ.
ರೋಹನ್ ಸಲ್ಡಾನ ಉದ್ಯಮಿಯೆಂದು ಹೇಳಿಕೊಂಡು ಹೊರರಾಜ್ಯ, ಹೊರಜಿಲ್ಲೆಯ ಶ್ರೀಮಂತ ವ್ಯಕ್ತಿಗಳನ್ನು ಗುರಿಯಾಗಿಸಿ ಜಾಗದ ವ್ಯವಹಾರದ ಜೊತೆಗೆ ಸಾಲ ನೀಡುವುದಾಗಿ ಹೇಳಿ ನಂಬಿಸುತ್ತಿದ್ದ. ಈ ರೀತಿಯಾಗಿ ಆರೋಪಿ ಕೇವಲ 3 ತಿಂಗಳಲ್ಲೇ 45 ಕೋಟಿ ರೂ. ವ್ಯವಹಾರ ಮಾಡಿರುವುದು ಪತ್ತೆಯಾಗಿದೆ. ಕಳೆದ ಅನೇಕ ವರ್ಷಗಳಿಂದ 200 ಕೋಟಿ ರೂ.ಗೂ ಅಧಿಕ ವಂಚನೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಉದ್ಯಮಿ ಹಾಗೂ ಶ್ರೀಮಂತ ವ್ಯಕ್ತಿಗಳನ್ನು ತನ್ನ ಮೋಸದ ಬಲೆಗೆ ಬೀಳಿಸುತ್ತಿದ್ದ ಆರೋಪಿ ತನ್ನ ಜಪ್ಪಿನಮೊಗರುವಿನ ಐಷಾರಾಮಿ ಬಂಗಲೆಗೆ ಕರೆದು ವ್ಯವಹಾರ ನಡೆಸುತ್ತಿದ್ದ. ಈತ 5ರಿಂದ 100 ಕೋಟಿ ರೂ.ವರೆಗೆ ವ್ಯವಹಾರ ಕುದುರಿಸಿಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರಂಭಿಕ ಮಾತುಕತೆ ಬಳಿಕ ಉದ್ಯಮಿಗಳಿಂದ 50-100 ಕೋಟಿ ರೂ. ವ್ಯವಹಾರ ಅಥವಾ ಅದಕ್ಕಿಂತ ದೊಡ್ಡ ಮೊತ್ತದ ವ್ಯವಹಾರಕ್ಕೆ 5-10 ಕೋಟಿ ರೂ. ಸ್ಟ್ಯಾಂಪ್ ಡ್ಯೂಟಿ ಹಣ ಪಡೆದು ವ್ಯವಹಾರ ನಡೆಸಿ ತಾನು ನಿರೀಕ್ಷೆ ಮಾಡಿದಷ್ಟು ಹಣ ವಸೂಲಿಯಾದ ಬಳಿಕ ನಾನಾ ನೆಪ ಹೇಳಿ ಉದ್ಯಮಿಗಳಿಂದ ತಪ್ಪಿಸಿಕೊಳ್ಳುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಯು ತನ್ನ ಮೋಸದ ಬಲೆಗೆ ಬಿದ್ದವರಿಂದ 50 ಲಕ್ಷ ರೂ.ನಿಂದ ನಾಲ್ಕು ಕೋಟಿ ರೂ.ವರೆಗೆ ಪಡೆದು ಆಮೇಲೆ ಯಾರಿಗೂ ಕಾಣದಂತೆ ನಿಗೂಢವಾಗಿ ತಪ್ಪಿಸಿಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post