ಮಂಗಳೂರು: ಮಹಿಳೆಯರೊಂದಿಗೆ ಸ್ನೇಹದ ನಾಟಕವಾಡಿ ಅವರೊಂದಿಗೆ ಸಂಪರ್ಕ ಇಟ್ಟುಕೊಂಡು ಅವರಿಂದಲೇ ಚಿನ್ನಾಭರಣ ದೋಚುತ್ತಿದ್ದ ಕಳ್ಳ, ನಿವೃತ್ತ ಪಿಡಿಒ ಓರ್ವರನ್ನು ಹತ್ಯೆಗೈದ ಆರೋಪಿಯನ್ನು ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದಾರೆ. ಕಾರ್ಕಳ ಬೆಳ್ಮಣ್ಣಿನ ರೋಹಿತ್ ಮಥಾಯಿಸ್ (33) ಬಂಧಿತ ಆರೋಪಿ. ಈತ 2021ರ ಡಿಸೆಂಬರ್ ತಿಂಗಳ ಮೊದಲ ವಾರದಿಂದ ಕುಲಶೇಖರದ ಮಹಿಳೆಯೋರ್ವರ ಜತೆ ಕೆಲವು ತಿಂಗಳು ಸಂಪರ್ಕವನ್ನಿಟ್ಟುಕೊಂಡು ಆಕೆಯೊಂದಿಗೆ ವಾಸವಿದ್ದು, ಬಳಿಕ ಆಕೆಯ ಮನೆಯಿಂದಲೇ ಚಿನ್ನಾಭರಣ ಮತ್ತು ನಗದನ್ನು ಕಳವು ಮಾಡಿ ಹೋಗಿದ್ದ. ಈ ಬಗ್ಗೆ ಪ್ರಕರಣ ದಾಖಲಾಗಿತ್ತು.
ಆರೋಪಿ ಮಥಾಯಿಸ್ ಮುಂಬೈಗೆ ಪರಾರಿಯಾಗಿದ್ದನು. ಬಂಧಿತ ಆರೋಪಿಯಿಂದ 7 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರ ಪ್ರಕಟನೆ ತಿಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿ ರೋಹಿತ್ ಮಥಾಯಿಸ್‌ನನ್ನು ಪೊಲೀಸರು ದಸ್ತಗಿರಿ ಮಾಡಿ ಆತನಿಂದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. 2019ರಲ್ಲಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಣ್ಮಣ್ ಎಂಬಲ್ಲಿ ಹಣ ಮತ್ತು ಚಿನ್ನಾಭರಣಗಳ ಆಸೆ ಗಾಗಿ ತನ್ನ ನೆರೆಮನೆಯ ನಿವೃತ್ತ ಪಿಡಿಒ ಭರತಲಕ್ಷ್ಮೀ ಎಂಬವರನ್ನು ಕೊಲೆಗೈದ ಪ್ರಕರಣದಲ್ಲಿ ರೋಹಿತ್ ಮಥಾಯಿಸ್ ಆರೋಪಿಯಾಗಿದ್ದನು.
ಮಹಿಳೆಯನ್ನು ಕೊಲೆಗೈದು ಕಲ್ಯಾದ ಬಾವಿಯೊಂದರಲ್ಲಿ ಪ್ಲಾಸ್ಟಿಕ್‌ನಲ್ಲಿ ಸುತ್ತಿ ಎಸೆದಿದ್ದ ಪ್ರಕರಣಕ್ಕೆ ಸಂಬಂಧಿಸಿ ಮಥಾಯಿಸ್ ಬಂಧಿತನಾಗಿ ಜೈಲುವಾಸ ಅನುಭವಿಸಿ ಹೊರಬಂದಿದ್ದನು. ನಂತರ ಪ್ರಕರಣದ ವಿಚಾರಣೆಗೆ ಸಿಗದೇ 2 ವರ್ಷಗಳಿಂದ ತಲೆಮರೆಸಿಕೊಂಡಿದ್ದನು ಎನ್ನಲಾಗಿದೆ. ಆರೋಪಿ ರೋಹಿತ್ ಮಥಾಯಿಸ್ ತನ್ನ ಸಮುದಾಯಯ ಮಹಿಳೆಯರನ್ನು ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯಿಸಿ ಕೊಂಡು ಅವರ ವಿಶ್ವಾಸಗಳಿಸಿ, ನಂತರ ಅವರ ಹಣ ಹಾಗೂ ಚಿನ್ನಾಭರಣ ಕಳವುಗೈದು ಪರಾರಿಯಾಗುವ ಸ್ವಭಾವದವನಾಗಿರುತ್ತಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮತ್ತೊಂದು ಪ್ರಯತ್ನದಲ್ಲಿದ್ದಾಗ ಸಿಕ್ಕಿಬಿದ್ದ : ಆರೋಪಿ ರೋಹಿತ್ ಕಳವಿನ ಬಳಿಕ ಮುಂಬಯಿಗೆ ತೆರಳಿದ್ದ. ಇದೇ ರೀತಿ ಹಲವು ಮಹಿಳೆಯರನ್ನು ವಂಚಿಸಲು ಯೋಜನೆ ರೂಪಿಸಿಕೊಂಡಿದ್ದ. ಓರ್ವ ಮಹಿಳೆ ಈತನ ಬಲೆಗೆ ಬಿದ್ದಿದ್ದಳು. ಅನಂತರ ಆಕೆಗೆ ಸಂಶಯ ಬಂದಿತ್ತು. ಆಕೆಯ ಮೂಲಕವೇ ಉಪಾಯವಾಗಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯಿಂದ 7 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ನಿರ್ದೇಶನದಂತೆ ಉಪ ಪೊಲೀಸ್ ಆಯುಕ್ತ ಸಿದ್ದಾರ್ಥ ಗೋಯಲ್ ಮತ್ತು ದಿನೇಶ್ ಕುಮಾರ್ ಹಾಗೂ ಮಂಗಳೂರು ದಕ್ಷಿಣ ವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ಧನ್ಯಾ ನಾಯಕ್ ಮಾರ್ಗದರ್ಶನದಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣೆಯ ನಿರೀಕ್ಷಕ ನಾಗರಾಜ್ ಟಿ.ಡಿ ನೇತೃತ್ವದಲ್ಲಿ ಪಿಎಸ್‌ಐ ವಿನಾಯಕ ಭಾವಿಕಟ್ಟಿ, ಶಿವಕುಮಾರ್, ಯೋಗೀಶ್ವರನ್ ಹಾಗೂ ಎಚ್.ಸಿ ಜಯಾನಂದ ಮತ್ತು ಸಿಬ್ಬಂದಿ ರಾಘವೇಂದ್ರ, ಗಂಗಾಧರ್, ರಾಜೆಸಾಬ ಮುಲ್ಲಾ, ಚೇತನ್, ಮುತ್ತಣ್ಣ ಮತ್ತು ಪ್ರವೀಣ್ ಆರೋಪಿಯ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post