ನವದೆಹಲಿ: ಭಾರತದಲ್ಲಿ, ತನ್ನ ಪ್ರೇರೇಪಣೆಯಿಂದ ನಡೆದ ಭಯೋತ್ಪಾದನಾ ಕೃತ್ಯಗಳನ್ನು ಬಿಚ್ಚಿಡುವ ಧುರಂಧರ್ ಸಿನಿಮಾವನ್ನು ಪಾಕಿಸ್ತಾನ ನಿಷೇಧಿಸಿದೆ. ಆದರೆ, ಪಾಕಿಗಳು ಮಾತ್ರ ಇದಕ್ಕೆ ಕ್ಯಾರೇ ಎನ್ನದೇ, ಹಲವಾರು ಡಾರ್ಕ್ ವೆಬ್ಸೈಟ್ಗಳಿಂದ ಸಿನಿಮಾವನ್ನು ಡೌನ್‌ಲೋಡ್ ಮಾಡಿಕೊಂಡು ವೀಕ್ಷಿಸುತ್ತಿದ್ದಾರೆ. ಇದು ಪಾಕ್ ಸರ್ಕಾರ ಮತ್ತು ಐಎಸ್ಐಗೆ ತಲೆನೋವಾಗಿದೆ.
ಇಂದಿನ ಡಿಜಿಟಲ್ ಯುಗದಲ್ಲಿ ಥಿಯೇಟರ್ಗಳೇ ಸಿನಿಮಾದ ಮೂಲವಾಗಿ ಉಳಿದಿಲ್ಲ. ಹೀಗಾಗಿ, ಪಾಕಿಸ್ತಾನಿಗರು ಸಿನಿಮಾ ವೀಕ್ಷಿಸಲು ಶ್ರೀಲಂಕಾ, ನೇಪಾಳ ಮತ್ತು ಮಲೇಷ್ಯಾದ ಸರ್ವರ್ಗಳನ್ನು ಬಳಸುತ್ತಿದ್ದಾರೆ. ಜೊತೆಗೆ, ಟೆಲಿಗ್ರಾಮ್ ಚಾನೆಲ್‌ಗಳು, ಭೂಗತ ಸ್ಟ್ರೀಮ್‌ಗಳು ಮತ್ತು ವಿಪಿಎನ್ ಮೂಲಕ ಚಿತ್ರವನ್ನು ಡೌನ್‌ಲೋಡ್ ಮಾಡುತ್ತಿದ್ದಾರೆ. ಇದು ದೇಶದಲ್ಲಿಯೇ ಅತಿ ಹೆಚ್ಚು ವೀಕ್ಷಣೆ ಕಂಡ ನಿಷೇಧಿತ ಸಿನಿಮಾವಾಗಿದೆ ಎಂಬುದು ವಿಶೇಷ.
1999ರ ಕಂದಹಾರ್ ವಿಮಾನ ಅಪಹರಣ, 26/11ರ ಮುಂಬೈ ದಾಳಿ, ಸಂಸತ್ ಭವನ ಅಟ್ಯಾಕ್ ಮತ್ತು ಲಿಯಾರಿ ಗ್ಯಾಂಗ್ ವಾರ್‌ಗಳನ್ನು ಒಳಗೊಂಡ ಈ ಸಿನಿಮಾ ಕಳೆದ ಎರಡು ವಾರಗಳಲ್ಲಿ ಕನಿಷ್ಠ 2 ಮಿಲಿಯನ್ನಷ್ಟು ಡೌನ್‌ಲೋಡ್ ಕಂಡಿದೆ. ಇದು ಡಿಜಿಟಲ್ ವ್ಯವಸ್ಥೆಯ ಮೇಲೆ ಐಎಸ್‌ಐ ಹೊಂದಿರುವ ಕಳಪೆ ನಿಯಂತ್ರಣವನ್ನು ತೋರಿಸುತ್ತದೆ.

ಈ ಹಿಂದೆ ಬೀಟಿಂಗ್ 2.0 ಮತ್ತು ರಯೀಸ್ ಸಿನಿಮಾ ಅತಿ ಹೆಚ್ಚು ಅಕ್ರಮ ಡೌನ್‌ಲೋಡ್ ಕಂಡಿದ್ದವು. ಈ ದಾಖಲೆಯನ್ನು ಧುರಂಧರ್ ಮುರಿದಿದೆ. ಪಾಕಿಸ್ತಾನದಲ್ಲಿ ಸಿನಿಮಾ ನಿಷೇಧಿಸಿದ್ದರಿಂದ ಚಲನಚಿತ್ರ ನಿರ್ಮಾಪಕರಿಗೆ 50-60 ಕೋಟಿ ರೂಪಾಯಿ ನಷ್ಟವಾಗಿರಬಹುದು. ಆದರೆ ಪಾಕಿಸ್ತಾನವು ಭಯೋತ್ಪಾದಕ ರಾಷ್ಟ್ರ ಎಂಬ ಸಂದೇಶವನ್ನು ಆ ದೇಶದಲ್ಲಿಯೇ ಪಸರಿಸುವಲ್ಲಿ ಮಾತ್ರ ಯಶಸ್ವಿಯಾಗಿದೆ.
ನಿಷೇಧದ ನಡುವೆಯೂ ಡೌನ್‌ಲೋಡ್‌ಗಳ ಸಂಖ್ಯೆ ಏರುತ್ತಿರುವುದು ಪಾಕಿಸ್ತಾನದ ಜನರು ಸಿನಿಮಾದ ಬಗ್ಗೆ ಹೊಂದಿರುವ ಕುತೂಹಲವನ್ನು ಸೂಚಿಸುತ್ತದೆ. ಕೆಲವರು ಚಿತ್ರದ ನಿರೂಪಣೆಯನ್ನು ಒಪ್ಪದಿದ್ದರೂ, ಅನೇಕರು ಚಿತ್ರದಲ್ಲಿನ ನಟನೆಯನ್ನು ಮೆಚ್ಚಿದ್ದಾರೆ. ಈ ಕುರಿತು ಅನೇಕ ಪಾಕಿಸ್ತಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ರೀಲ್‌ಗಳು ಮತ್ತು ಮೀಮ್‌ಗಳನ್ನು ಹರಿಬಿಡುತ್ತಿರುವುದು ಕಂಡುಬಂದಿದೆ.

ಇನ್ನೂ, ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ (ಪಿಪಿಪಿ) ದಿವಂಗತ ನಾಯಕಿ ಬೆನಜೀರ್ ಭುಟ್ಟೋ ಅವರ ಚಿತ್ರಗಳನ್ನು ಸಿನಿಮಾದಲ್ಲಿ ಬಳಸಿದ್ದನ್ನು ಪ್ರಶ್ನಿಸಿ ಕರಾಚಿ ನ್ಯಾಯಾಲಯದಲ್ಲಿ ಕಾನೂನು ದಾವೆ ಹೂಡಲಾಗಿದೆ. ಧುರಂಧರ್ ಚಿತ್ರದ ನಟರು ಮತ್ತು ತಂಡದ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.
ಸಿನಿಮಾದ ಬಗ್ಗೆ ಹೇಳುವುದಾದರೆ, ರಣವೀರ್ ಸಿಂಗ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅವರು ಐಎಸ್‌ಐ ಬೆಂಬಲಿತ ಭಯೋತ್ಪಾದಕ ಜಾಲಗಳನ್ನು ನಾಶಮಾಡಲು ಪಾಕಿಸ್ತಾನದ ಲಿಯಾರಿಗೆ ನುಸುಳುವ ಭಾರತೀಯ ಗೂಢಚಾರಿ ಹಮ್ಜಾ ಪಾತ್ರದಲ್ಲಿ ಮಿಂಚಿದ್ದಾರೆ. ಅಕ್ಷಯ್ ಖನ್ನಾ ಲಿಯಾರಿಯ ರೌಡಿಶೀಟರ್, ಸಂಜಯ್ ದತ್ ಪೊಲೀಸ್ ಅಧಿಕಾರಿ, ಆರ್.ಮಾಧವನ್ ಭಾರತದ ಬೇಹುಗಾರಿಕಾ ಸಂಸ್ಥೆ ರಾ ಮುಖ್ಯಸ್ಥರಾಗಿದ್ದರೆ, ಅರ್ಜುನ್ ರಾಂಪಾಲ್ ಮತ್ತು ರಾಕೇಶ್ ಬೇಡಿ ಕೂಡ ಇದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post