ಮಂಗಳೂರು, ಜೂ.18: ಬಾವುಟಗುಡ್ಡೆ ಸಾರ್ವಜನಿಕ ಪ್ರದೇಶದಲ್ಲಿ ಚೂರಿಯಿಂದ ಇರಿದು ಯುವಕನ ಕೊಲೆಗೆ ಯತ್ನಿಸಿದ ಆರೋಪದ ಮೇಲೆ ನಾಲ್ವರನ್ನು ಮಂಗಳೂರು ಉತ್ತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಲ್ಲಿಕಟ್ಟೆಯ ಮಹಮ್ಮದ್ ತುಫೈಲ್ (20), ನೀರು ಮಾರ್ಗದ ಮೊಹಮ್ಮದ್ ಆಫ್ರಿದ್ (19), ನೀರು ಮಾರ್ಗದ ಮಕ್ಸೂದ್ ಸಾಗ್ (21), ಬೋಳಾರದ ಅಬ್ದುಲ್ ಸತ್ತಾರ್ (19) ಬಂಧಿತ ಆರೋಪಿಗಳು.
ಕಿನ್ನಿಗೋಳಿ ಏಳಿಂಜೆ ನಿವಾಸಿ ಪ್ರಿಯಾ ಪಿಂಟೊ ಎಂಬಾಕೆಗೆ ಇನ್‌ಸ್ಟಾಗ್ರಾಮ್ ಮೂಲಕ ನಿಧೀಶ್ ಪರಿಚಯ ಆಗಿದ್ದು ಇಬ್ಬರೂ ಪ್ರೀತಿಸುತ್ತಿದ್ದರು. ಈಚೆಗೆ ನಿಧೀಶ್ ಬೇರೊಬ್ಬಳನ್ನು ಪ್ರೀತಿಸುತ್ತಿದ್ದಾನೆ ಎಂದು ಪ್ರಿಯಾ ಪಿಂಟೊಗೆ ಸಂದೇಹ ಬಂದಿದ್ದು, ಸೇಡು ತೀರಿಸುವ ಉದ್ದೇಶದಿಂದ ಕರೆಸಿದ್ದಳು. ಆಕೆ ಸೂಚಿಸಿದ ಸ್ಥಳಕ್ಕೆ ರಾತ್ರಿ ಸುಮಾರು 9.45ಕ್ಕೆ ಇಬ್ಬರು ಗೆಳೆಯರ ಜೊತೆ ನಿಧೀಶ್ ಬಂದಿದ್ದಾನೆ. ಅಲ್ಲಿಗೆ ಕಾರ್‌ನಲ್ಲಿ ಬಂದ ಆಕೆ ಮತ್ತು ಇತರ ಆರೋಪಿಗಳು ನಿಧೀಶ್ ಜೊತೆ ವಾಗ್ವಾದ ನಡೆಸಿದ್ದಾರೆ. ಮಾತಿಗೆ ಮಾತು ಬೆಳೆದು ಹೊಡೆಯಲಾರಂಭಿಸಿದ ಆರೋಪಿಗಳು ನಂತರ ಎದೆಗೆ ಚೂರಿಯಿಂದ ಇರಿದು ಗಂಭೀರ ಗಾಯಗೊಳಿಸಿ ತೆರಳಿದ್ದಾರೆ. ನಿಧೀಶ್ ಗೆಳೆಯ ನೀಲೇಶ್ ನೀಡಿದ ದೂರು ದಾಖಲಿಸಿಕೊಂಡ ಮಂಗಳೂರು ಉತ್ತರ (ಬಂದರು) ಠಾಣೆ ಪೊಲೀಸರು ಆರೋಪಿಗಳನ್ನು ಕುಡುಪು ಬಳಿಯ ಫ್ಲ್ಯಾಟ್ ಒಂದರಿಂದ ಶನಿವಾರ ಬಂಧಿಸಿದ್ದಾರೆ. ನಿಧೀಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಬಂದರು ಠಾಣೆ ಇನ್‌ಸ್ಪೆಕ್ಟರ್ ರಾಘವೇಂದ್ರ ಎಂ. ತಿಳಿಸಿದರು.
ನಿಧೀಶ್ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ಪೈಕಿ ಮೂವರ ವಿರುದ್ಧ ಕೇರಳ ಮತ್ತು ಬೆಂಗಳೂರಿನ ಠಾಣೆಗಳಲ್ಲಿ ಅಪರಾಧ ಪ್ರಕರಣಗಳು ದಾಖಲಾಗಿವೆ. ಮೊಹಮ್ಮದ್ ತುಫೈಲ್ ಮತ್ತು ಮೊಹಮ್ಮದ್ ಅಫ್ರೀದ್ ವಿರುದ್ಧ ಸರ್ಕಾರಿ ನೌಕರರ ಕೆಲಸಕ್ಕೆ ಅಡ್ಡಿಪಡಿಸಿದ್ದಕ್ಕೆ ಸಂಬಂಧಿಸಿ ಬೆಂಗಳೂರಿನ ಮಡಿವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾದಕ ವಸ್ತು ಸಾಗಾಟಕ್ಕೆ ಸಂಬಂಧಿಸಿ ಕೇರಳದ ತ್ರಿಶೂರ್ ಜಿಲ್ಲೆಯ ಅರವೂರ್ ಠಾಣೆಯಲ್ಲಿ ಇವರಿಬ್ಬರ ಹೆಸರಿನಲ್ಲಿ ಪ್ರಕರಣ ದಾಖಲಾಗಿದೆ.
ಮಕ್ಷುದ್ ಸಾಗ್ ಮಂಗಳೂರಿನ ಪೂರ್ವ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪೋಕ್ಸೊ ಪ್ರಕರಣದ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ಬಂಧನದಲ್ಲಿ ಎಸ್‌ಐ ಮಂಜುಳಾ ಎಲ್, ನಾಗರಾಜ್ ಎಸ್, ಫೈಜುನ್ನಿಸಾ, ರಾಮಾ ನಾಯಕ್, ಎಎಸ್‌ಐ ದಾಮೋದರ್, ಎಚ್.ಸಿ ಮದನ್, ಕಾನ್‌ಸ್ಟೆಬಲ್‌ಗಳಾದ ತಿಪ್ಪರೆಡ್ಯಪ್ಪ, ಅಭಿಷೇಕ್, ಸಾಗರ್, ಸುನಿಲ್ ಮಧು, ಗುರು ಮತ್ತು ಅಮೀನ್ ಸಾಬ್ ಪಾಲ್ಗೊಂಡಿದ್ದರು ಎಂದು ತಿಳಿಸಲಾಗಿದೆ.
Discover more from Coastal Times Kannada
Subscribe to get the latest posts sent to your email.







Discussion about this post