ಮಂಗಳೂರು: ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 56 ಪೊಲೀಸ್ ಸಿಬ್ಬಂದಿಯನ್ನು ವರ್ಗಾವಣೆ ಮಾಡಿ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಆದೇಶ ಹೊರಡಿಸಿದ್ದಾರೆ. ಜಿಲ್ಲೆಗೆ ಹಿರಿ ಯ ಪೊಲೀಸ್ ಅಧಿಕಾರಿಗಳ ಆಗಮನದ ವೇಳೆ ಮಂಗಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಸಿಬ್ಬಂದಿ ಬದಲಾವಣೆಯ ಬಗ್ಗೆಯೂ ಸಾರ್ವಜನಿಕವಾಗಿ ಬೇಡಿಕೆ ವ್ಯಕ್ತ ವಾಗಿತ್ತು. ಇದೀಗ ಪೊಲೀಸ್ ಕಮಿಷನರ್ 56 ಸಿಬ್ಬಂದಿಯನ್ನು ವರ್ಗಾಯಿಸಿ ಆದೇಶಿಸಿದ್ದಾರೆ. ವರ್ಗಾವಣೆಗೊಂಡಿರುವವರಲ್ಲಿ ಸಿಸಿಬಿ, ಸೆನ್ ಸೇರಿದಂತೆ ಕಮಿಷನರೇಟ್ ವ್ಯಾಪ್ತಿಗೆ ಒಳಪಡುವ ಠಾಣೆಗಳ ಹಲವು ಪೊಲೀಸರು ಸೇರಿದ್ದಾರೆ.
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಸಂದರ್ಭದಲ್ಲಿ ಬಜ್ಪೆ ಠಾಣೆಯಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿದ್ದ ರಶೀದ್ ಶೇಖ್ ಆರೋಪಿಗಳಿಗೆ ಸಹಕಾರ ನೀಡಿದ್ದಾರೆಂದು ಬಿಜೆಪಿ ನಾಯಕರು ಆರೋಪ ಮಾಡಿದ್ದರು. ಇದೀಗ ವರ್ಗಾವಣೆಯಾದ ಪಟ್ಟಿಯಲ್ಲಿ ರಶೀದ್ ಅವರನ್ನು ಮಂಗಳೂರು ನಗರ ಮಹಿಳಾ ಠಾಣೆಗೆ ವರ್ಗಾಯಿಸಲಾಗಿದೆ. ಇದಲ್ಲದೆ, ಸಿಸಿಬಿ ತಂಡದಲ್ಲಿ ಹಲವು ವರ್ಷಗಳಿಂದ ಉಳಿದುಕೊಂಡಿದ್ದ ಕೆಲವು ಸಿಬಂದಿಯನ್ನು ಬೇರೆ ಬೇರೆ ಠಾಣೆಗಳಿಗೆ ವರ್ಗಾಯಿಸಲಾಗಿದೆ. ಈ ಕುರಿತು ಮಂಗಳೂರು ಕಮಿಷನರ್ ಮಾಡಿರುವ ಆದೇಶ ಪತ್ರದಲ್ಲಿ ಸಾರ್ವಜನಿಕ ಕೋರಿಕೆ ಮತ್ತು ಆಡಳಿತಾತ್ಮಕ ಕಾರಣಗಳ ಮೇರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಈ ವರ್ಗಾವಣೆ ಮಾಡಿರುವುದಾಗಿ ತಿಳಿಸಿದ್ದಾರೆ.
ಬಜ್ಪೆ, ಮೂಡುಬಿದ್ರೆ, ಕೊಣಾಜೆ, ಉಳ್ಳಾಲ, ಉರ್ವಾ, ಸಿಸಿಆರ್ ಬಿ, ಸಿಸಿಬಿ, ಸಂಚಾರಿ ಠಾಣೆ, ಸೆನ್ ಠಾಣೆಗಳಲ್ಲಿದ್ದ ಹತ್ತು ಜನ ಎಎಸ್ಐ, ಹೆಡ್ ಕಾನ್ಸ್ ಟೇಬಲ್ ಗಳನ್ನು ವಿವಿಧ ಠಾಣೆಗಳಿಗೆ ವರ್ಗಾವಣೆ ಮಾಡಲಾಗಿದೆ. ಈ ಪೈಕಿ ಕೆಲವು ಸಿಬಂದಿ ವಿವಿಧ ಕಾರಣಕ್ಕೆ ತಮ್ಮ ವರ್ಗಾವಣೆ ಕೇಳಿಕೊಂಡಿದ್ದವರೂ ಇದ್ದಾರೆ. ಇತ್ತೀಚೆಗೆ ಕೋಮು ದ್ವೇಷದ ಕೊಲೆಯಾದ ಸಂದರ್ಭದಲ್ಲಿ ಕಾಂಗ್ರೆಸಿನ ಅಲ್ಪಸಂಖ್ಯಾತ ಘಟಕದ ಮುಖಂಡರು, ಪೊಲೀಸ್ ಠಾಣೆಗಳಲ್ಲಿ ಕೆಲವು ಸಿಬಂದಿ ಹತ್ತು ವರ್ಷಗಳಿಗೂ ಹೆಚ್ಚು ಕಾಲದಿಂದ ಇದ್ದಾರೆ, ಅವರನ್ನು ಎತ್ತಂಗಡಿ ಮಾಡಬೇಕು. ಅಂಥವರು ಮಾಫಿಯಾಗಳ ಜೊತೆಗೆ ಶಾಮೀಲಾಗಿದ್ದಾರೆ ಎಂದು ಆಗ್ರಹ ಮಾಡಿದ್ದರು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೂ ಒತ್ತಾಯಿಸಿದ್ದರಿಂದ ಸಚಿವರು, ಪೊಲೀಸ್ ಕಮಿಷನರ್ ಅವರಿಗೆ ಸೂಚನೆ ನೀಡಿದ್ದರು. ಪೊಲೀಸರ ವರ್ಗಾವಣೆ ಪ್ರಕ್ರಿಯೆ ಇನ್ನೂ ಮುಂದುವರಿಯುವ ಸಾಧ್ಯತೆಯಿದ್ದು, ಎಲ್ಲ ಠಾಣೆಗಳಿಂದಲೂ ಪೊಲೀಸ್ ಕಮಿಷನರ್ ಈ ಬಗ್ಗೆ ಮಾಹಿತಿ ಕೇಳಿದ್ದಾರೆ ಎನ್ನಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post