ಕಡಬ: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಐತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲ್ಲಿಕಟ್ಟೆಯಿಂದ ಓಟಗಜ್ಜೆಗೆ ಹೋಗುವ ರಸ್ತೆಯನ್ನು ಅಗೆದು ಹಾಕಲಾಗಿದೆ. ಹೀಗಾಗಿ ರಸ್ತೆ ಸಂಪೂರ್ಣ ಕೆಸರುಮಯವಾಗಿದೆ. ಸ್ಥಳೀಯರು ಹಾಗೂ ಶಾಲಾ ಮಕ್ಕಳು ಪಕ್ಕದ ರೈಲ್ವೆ ಹಳಿಗಳ ಮೇಲೆ ಮತ್ತು ರಬ್ಬರ್ ಪ್ಲಾಂಟೇಷನ್ಗೆ ಅಳವಡಿಸಿರುವ ವಿದ್ಯುತ್ ತಡೆಬೇಲಿ ಮಧ್ಯದಲ್ಲಿ ನುಸುಳಿಕೊಂಡು ಅಪಾಯಕಾರಿ ರೀತಿಯಲ್ಲಿ ಮನೆಗೆ ಹೋಗುವ ಸನ್ನಿವೇಶ ಎದುರಾಗಿದೆ. ಈ ಸಮಸ್ಯೆಗಳ ಬಗ್ಗೆ ಕಡಬ ತಹಶೀಲ್ದಾರ್ ಸೇರಿದಂತೆ ಸ್ಥಳೀಯ ಅಧಿಕಾರಿಗಳಿಗೆ ತಿಳಿಸಿದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಪ್ರಸ್ತುತ ರಸ್ತೆ ಹದಗೆಟ್ಟಿರುವ ಹಿನ್ನೆಲೆ ಸಂಚರಿಸುವ ರಸ್ತೆಯಲ್ಲಿ ಸುಮಾರು 2 ಕಿ. ಮೀ ರೈಲ್ವೆ ಟ್ರ್ಯಾಕ್ ಮತ್ತು ಅಪಾಯಕಾರಿ ರೈಲ್ವೆ ಬ್ರಿಡ್ಜ್ ಇದ್ದು, ಪುಟ್ಟ ಮಕ್ಕಳ ಸಹಿತ ಸ್ಥಳೀಯರು ಜೀವವನ್ನು ಕೈಯಲ್ಲಿ ಹಿಡಿದು ಓಡಾಡುತ್ತಿದ್ದಾರೆ. ಇಷ್ಟು ಮಾತ್ರವಲ್ಲದೇ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ರಬ್ಬರ್ ಪ್ಲಾಂಟೇಷನ್ ಜಾಗ ಇದೆ. ಇಲ್ಲಿ ಸುರಕ್ಷತೆ ದೃಷ್ಟಿಯಿಂದ ಸೋಲಾರ್ ವಿದ್ಯುತ್ ತಂತಿ ಬೇಲಿ ಅಳವಡಿಸಲಾಗಿದೆ. ಇದರ ನಡುವೆಯೂ ಮಕ್ಕಳು ನುಸುಳಿಕೊಂಡು ಹೋಗುತ್ತಿದ್ದಾರೆ. ಮಕ್ಕಳು ಸಂಚರಿಸುವ ವೇಳೆ ಇದನ್ನು ಆಫ್ ಮಾಡಲಾಗುತ್ತಿದೆ ಎನ್ನಲಾಗುತ್ತಿದ್ದರೂ, ಏನಾದರೂ ಆಚಾತುರ್ಯ ಆದರೆ ಅಪಾಯ ಎದುರಾಗುವುದಂತೂ ಖಂಡಿತ. ಒಟ್ಟಿನಲ್ಲಿ ಕೂಡಲೇ ಈ ರಸ್ತೆಯನ್ನು ಸರಿಪಡಿಸಿ ಜನರು ಭಯರಹಿತರಾಗಿ ಓಡಾಡಲು ಅವಕಾಶ ಮಾಡಿ ಕೊಡಬೇಕೆಂದು, ನೀತಿ ಸಾಮಾಜಿಕ ಸಂಘಟನೆ ರಾಜ್ಯಾಧ್ಯಕ್ಷ ಜಯಂತ್ ಅವರು ಆಗ್ರಹಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post