ಮಂಗಳೂರು, ಜುಲೈ.19: ಶಿರಾಡಿ ಘಾಟ್ ಮತ್ತು ಸಂಪಾಜೆ ಘಾಟ್ ಹೆದ್ದಾರಿಯಲ್ಲಿ ಭೂಕುಸಿತದ ಕಾರಣ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು- ಬೆಂಗಳೂರು ಮಧ್ಯೆ ಸಂಚಾರಕ್ಕೆ ಜನಸಾಮಾನ್ಯರಿಗೆ ತೊಂದರೆ ಆಗಿರುವ ಬಗ್ಗೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮೈಸೂರು ವಿಭಾಗದ ರೈಲ್ವೇ ಅಧಿಕಾರಿಗಳಿಗೆ ಪತ್ರ ಬರೆದು ತುರ್ತಾಗಿ ಹೆಚ್ಚುವರಿ ರೈಲು ಒದಗಿಸುವಂತೆ ಮನವಿ ಮಾಡಿದ್ದಾರೆ. ಸಂಸದರ ಪತ್ರಕ್ಕೆ ಸ್ಪಂದಿಸಿರುವ ರೈಲ್ವೇ ಅಧಿಕಾರಿಗಳು ಜುಲೈ 19ರಿಂದಲೇ ನಾಲ್ಕು ದಿನಗಳ ಕಾಲ ಹೆಚ್ಚುವರಿ ಆರು ಟ್ರಿಪ್ ರೈಲುಗಳನ್ನು ಒದಗಿಸಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಕರಾವಳಿಯ ಜನರು ಬೆಂಗಳೂರಿಗೆ ತೆರಳುವುದರಿಂದ ಹೆದ್ದಾರಿ ತಡೆಯಿಂದಾಗಿ ತೊಂದರೆ ಅನುಭವಿಸುತ್ತಿರುವ ಬಗ್ಗೆ ಸಂಸದ ಬ್ರಿಜೇಶ್ ಚೌಟ ಅವರು ಮೈಸೂರು ರೈಲ್ವೇ ವಿಭಾಗದ ಜನರಲ್ ಮ್ಯಾನೇಜರ್ ಗೆ ಪತ್ರ ಬರೆದು ಹೆಚ್ಚುವರಿ ರೈಲು ನೀಡುವಂತೆ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಅಷ್ಟೇ ವೇಗದಲ್ಲಿ ರೈಲ್ವೇ ಇಲಾಖೆಯ ಅಧಿಕಾರಿಗಳು ಸ್ಪಂದನೆ ನೀಡಿದ್ದಾರೆ. ಅಲ್ಲದೆ, ಸೌತ್ ವೆಸ್ಟರ್ನ್ ರೈಲ್ವೇ ಇಲಾಖೆಯ ಅಧಿಕಾರಿಗಳು ಜುಲೈ 19ರಂದು ಮತ್ತು 22ರ ಮಧ್ಯೆ ರಾತ್ರಿ ವೇಳೆ ಹೆಚ್ಚುವರಿ ರೈಲನ್ನು ಒದಗಿಸಿದ್ದಾರೆ.
ರೈಲು ಸಂಖ್ಯೆ 06549 ಯಶವಂತಪುರ- ಮಂಗಳೂರು ಜಂಕ್ಷನ್ ಗೆ ಹಾಗೂ ರೈಲು ಸಂಖ್ಯೆ 06550 ಮಂಗಳೂರು ಜಂಕ್ಷನ್ನಿಂದ ಯಶವಂತಪುರಕ್ಕೆ ಜು.21 ಮತ್ತು 22ರಂದು 2 ಟ್ರಿಪ್ ಗಳಲ್ಲಿ ಸಂಚರಿಸಲಿವೆ ಎಂದು ರೈಲ್ವೆ ಇಲಾಖೆಯ ಪ್ರಕಟನೆ ತಿಳಿಸಿದೆ.
ರೈಲು ಸಂಖ್ಯೆ 06547 ಬೆಂಗಳೂರು ನಗರ ಜಂಕ್ಷನ್ (ಎಸ್ಬಿಸಿ)ನಿಂದ ರಾತ್ರಿ 11 ಗಂಟೆಗೆ ಹೊರಟು ಮರುದಿನ ಮಧ್ಯಾಹ್ನ 11:40ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ರೈಲು ಸಂಖ್ಯೆ 06548 ಮಂಗಳೂರು ಜಂಕ್ಷನ್ ನಿಂದ ಮಧ್ಯಾಹ್ನ 1:40ಕ್ಕೆ ಹೊರಟು ರಾತ್ರಿ 11:15ಕ್ಕೆ ಯಶವಂತಪುರ ತಲುಪಲಿದೆ.
Discover more from Coastal Times Kannada
Subscribe to get the latest posts sent to your email.
Discussion about this post