ಉಳ್ಳಾಲ, ಆ.18: ಮುಡಾ ಪ್ರಕರಣದ ಬಗ್ಗೆ ಒಬ್ಬ ಸಾಮಾನ್ಯ ಬ್ಲ್ಯಾಕ್ ಮೇಲರ್ ವ್ಯಕ್ತಿ ಮುಖ್ಯಮಂತ್ರಿಗಳ ವಿರುದ್ಧ ದೂರು ನೀಡಿದ್ದಾನೆ. ಯಾವುದೇ ಎಫ್ಐಆರ್ ದಾಖಲಾಗದೆ ರಾಜ್ಯಪಾಲರು ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದು ಕಾನೂನು ಬಾಹಿರ. ಕೇಂದ್ರ ಸರಕಾರದ ಕೈಗೊಂಬೆಯಾಗಿರುವ ರಾಜ್ಯಪಾಲರು ಕೂಡಲೇ ರಾಜೀನಾಮೆ ಕೊಟ್ಟು ತೆರಳಬೇಕೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್.ಪೂಜಾರಿ ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯರವರ ಮೂಡ ವಿಚಾರವನ್ನು ಮುಂದಿಟ್ಟು ರಾಜ್ಯ ಪಾಲರು ಪ್ರಾಸಿಕ್ಯೂಷನ್ ಗೆ ಆದೇಶ ನೀಡಿದ ಬಗ್ಗೆ ರಾಜ್ಯಪಾಲರು ಮತ್ತು ವಿರೋಧ ಪಕ್ಷ ವಿರುದ್ಧ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಮತ್ತು ಮುಡಿಪು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ತೊಕ್ಕೊಟ್ಟು ಜಂಕ್ಷನ್ ನ ಫ್ಲೈ ಓವರ್ ಬಳಿ ರವಿವಾರ ಸಂಜೆ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ಬಿಜೆಪಿಗರೇ ನಿಮ್ಮ ಅನೈತಿಕ ರಾಜಕಾರಣ ಬಿಟ್ಟು ನೈತಿಕ ರಾಜಕಾರಣ ಮಾಡಿ. ಹಿಂದೆ ಯಡಿಯೂರಪ್ಪನವರು ಮುಖ್ಯ ಮಂತ್ರಿಯಾಗಿದ್ದ ವೇಳೆ ಭ್ರಷ್ಟಾಚಾರದ ಆರೋಪ ಬಂದಾಗ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಕೂಡಲೇ ರಾಜೀನಾಮೆ ಕೊಟ್ಟು ತೆರಳಿದ್ದರು ಅಂತ ಬಿಜೆಪಿಗರು ಸಬೂಬು ನೀಡುತ್ತಾರೆ. ಯಡಿಯೂರಪ್ಪನವರು ಭ್ರಷ್ಟಾಚಾರದಲ್ಲಿ ತೊಡಗಿಸಿದ ಕಾರಣದಿಂದ ಅವರು ಅಂದು ರಾಜೀನಾಮೆ ಕೊಟ್ಟು ತೆರಳಿದ್ದರು. ಆದರೆ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತವರಲ್ಲ. ಅವರು ಎಂದಿಗೂ ಶುದ್ಧ ಹಸ್ತದ ರಾಜಕಾರಣಿಯಾಗಿದ್ದು, ಅವರು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಅವರೊಂದಿಗೆ ಎಂದಿಗೂ ನಾವಿದ್ದೇವೆ ಎಂದರು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಮ್.ಎಸ್ ಮಹಮ್ಮದ್ , ಜಿ.ಎ.ಬಾವ, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್ ,ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ನಾಸಿರ್ ಅಹಮ್ಮದ್ ಸಾಮಾಣಿಗೆ, ಉಳ್ಳಾಲ ನಗರಸಭಾ ಸದಸ್ಯರಾದ ಸಪ್ನ ಹರೀಶ್, ವೀಣಾ ಶಾಂತಿ ಡಿಸೋಜ, ಬಾಝಿಲ್ ಡಿ ಸೋಜ, ತಾ.ಪಂ ಮಾಜಿ ಸದಸ್ಯರಾದ ಚಂದ್ರಹಾಸ್ ಕರ್ಕೇರ, ಸುರೇಖ ಚಂದ್ರಹಾಸ್, ಕ್ಲೇರಾ ಕುವೆಲ್ಲೊ, ಪ್ರಮುಖರಾದ ರಝಾಕ್ ಕುಕ್ಕಾಜೆ, ಹೈದರ್ ಕೈರಂಗಳ, ಮುಸ್ತಾಫ ಹರೇಕಳ, ದಿನೇಶ್ ಕುಂಪಲ, ದೀಪಕ್ ಪಿಲಾರ್, ಅಬ್ದುಲ್ ರಹಿಮಾನ್ ಕೋಡಿಜಾಲ್, ಚಂದ್ರಿಕಾ ರೈ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post