ಬಿಸಿ ಬಿಸಿ ಹಾಲಿಗೆ ಕಾಫಿ ಪುಡಿ ಹಾಕಿ, ಸ್ವಲ್ಪ ಸಕ್ಕರೆ ಹಾಕಿಕೊಂಡು ಕುಡಿತಾ ಇದ್ರೆ ಸ್ವರ್ಗ ಅಂತ ಹೇಳೋ ಮಂದಿ ನಮ್ಮ ನಡುವೆ ಹಲವರಿದ್ದಾರೆ. ಕಚೇರಿ ತಲೆಬಿಸಿ, ಒತ್ತಡ, ಭಯ ಹೀಗೆ ನಾನಾ ಭಾವನೆಗಳು ನಮ್ಮನ್ನು ಆವರಿಸಿದಾಗ ಅದರಿಂದ ಹೊರಬರಲು ಮೊದಲು ಹೊಳೆಯುವ ಪರಿಹಾರವೇ ಕಾಫಿ ಕುಡಿಯುವುದು. ಲಾಕ್‌ಡೌನ್ ಅವಧಿಯಿಂದೀಚೆಗೆ ಕಾಫಿ ಕುಡಿಯುವವರ ಸಂಖ್ಯೆ ಹೆಚ್ಚಾಗಿದೆ ಅಂತ ಕೆಲವು ಅಧ್ಯಯನಗಳು ಹೇಳಿವೆ. ಅದು ನಿಜವೂ ಹೌದು. ಕೆಲವೊಮ್ಮೆ ಏನೂ ಕೆಲಸ ಇಲ್ಲ ಇಲ್ಲದಾಗಲೂ ಕಾಫಿ ಕುಡಿಯುವವರಿದ್ದಾರೆ. ಒಟ್ಟಿನಲ್ಲಿ ಹವ್ಯಾಸವೋ, ಚಟವೋ ಕಾಫಿ ಮತ್ತು ಟೀ ನಮ್ಮನ್ನು ಆವರಿಸಿಕೊಂಡುಬಿಟ್ಟಿವೆ.
ಈಗಂತೂ ಬಿಡಿ, ಮಳೆಗಾಲ ಶುರುವಾಗಿದೆ. ಜೋರು ಮಳೆ, ಒಂದು ಕೈಯಲ್ಲಿ ಕಾಫಿ ಇನ್ನೊಂದು ಕೈಯಲ್ಲಿ ಏನಾದರು ಕುರುಕಲು ತಿಂಡಿ; ಮನೆಯ ಹೊರಗೆ ಬಂದು ಕುರ್ಚಿ ಹಾಕಿಕೊಂಡು ಮಳೆ ನೋಡುತ್ತಾ ಕಾಫಿ ಸವಿಯುವ ಆನಂದವೇ ಬೇರೆ! ನಮ್ಮ ಮೈ ಮನಸ್ಸನ್ನು ಇಷ್ಟೊಂದು ಆವರಿಸಿರುವ ಕಾಫಿ ನಮ್ಮ ಆರೋಗ್ಯಕ್ಕೆ ಒಳ್ಳೆಯದೇ ಅಥವಾ ಕೆಟ್ಟದ್ದೆ; ಎಲ್ಲರೂ ಕುಡಿಯಬಹುದೇ ಅಥವಾ ಕೆಲವರು ಕೆಲವು ಸಮಯದಲ್ಲಿ ಕಾಫಿಯನ್ನು ಬಿಡುವುದೇ ಒಳ್ಳೆಯದೇ.. ಕಾಫಿಪ್ರಿಯರು ಇಂಥದ್ದರ ಕಡೆ ಕೂಡ ಗಮನಹರಿಸಬೇಕಾಗಿದೆ. ಕಾಫಿಯಲ್ಲಿ ಕೆಫಿನ್ ಅಂಶ ಪ್ರಧಾನವಾಗಿದ್ದು ಇದರ ಸೇವನೆ ಕೆಲವು ಆರೋಗ್ಯದ ಸಮಸ್ಯೆಗಳನ್ನು ಉಲ್ಬಣಗೊಳಿಸುತ್ತದೆ. ಕೆಲವು ಅಧ್ಯಯನಗಳು ಕೆಲವರು ಕಾಫಿಯ ಅಭ್ಯಾಸವನ್ನು ಬಿಡುವುದು ಅಥವಾ ಕಡಿಮೆ ಕುಡಿಯುವುದು ಒಳ್ಳೆಯದು ಎಂದು ಹೇಳುತ್ತವೆ. ಹಾಗಾದರೆ ತಜ್ಞರ ಪ್ರಕಾರ ಯಾರು ಕಾಫಿ ಸೇವನೆ ತ್ಯಜಿಸುವುದು ಒಳ್ಳೆಯದು ಎಂದು ನೋಡೋಣ.
1. ಇರಿಟೇಬಲ್ ಬೋವೆಲ್ ಸಿಂಡ್ರೋಮ್ ಇರುವವರು.
ಈ ಸಮಸ್ಯೆ ಇದ್ದವರು ಕಾಫಿಯನ್ನು ಸೇವಿಸುವುದರಿಂದ, ಹೊಟ್ಟೆ ತೊಳಸುವುದು ಜಾಸ್ತಿಯಾಗುತ್ತದೆ. ಪದೇ ಪದೇ ಬಹಿರ್ದೆಸೆಗೆ ಹೋಗುವ ಅನಿವಾರ್ಯತೆ ಉಂಟಾಗುತ್ತದೆ. ಹೀಗಾಗಿ ಈ ಸಮಸ್ಯೆ ಇದ್ದವರು ಕಾಫಿ ಸೇವನೆಯನ್ನು ಕಡಿಮೆ ಮಾಡುವುದು ಒಳ್ಳೆಯದು.
2. ಮೂತ್ರಕೋಶ ಹೆಚ್ಚು ಕ್ರಿಯಾಶೀಲವಾಗಿದ್ದರೆ.
ಪದೇ ಪದೇ ಮೂತ್ರ ವಿಸರ್ಜನೆ ಮಾಡುವವರು ಪದೇ ಪದೇ ಕಾಫಿ ಸೇವಿಸುವುದನ್ನು ನಿಲ್ಲಿಸುವುದು ಒಳ್ಳೆಯದು. ಕಾಫಿ ಸೇವಿಸುವುದರಿಂದ ಮೂತ್ರಕೋಶಗಳು ಹೆಚ್ಚು ಸಕ್ರಿಯವಾಗುತ್ತವೆ, ಪದೇ ಪದೇ ಮೂತ್ರವಿಸರ್ಜನೆಗೆ ಹೋಗಬೇಕಾಗುತ್ತದೆ. ಈ ಸಮಸ್ಯೆ ಇದ್ದವರು ದೂರದ ಪ್ರಯಾಣದ ವೇಳೆ ಕಾಫಿಯನ್ನು ಮುಟ್ಟದೇ ಇರುವುದೇ ಒಳ್ಳೆಯದು.
3. ಗರ್ಭಿಣಿಯರು.
ಗರ್ಭಿಣಿಯರು ಸಂಪೂರ್ಣವಾಗಿ ಕಾಫಿಯನ್ನು ವ್ಯರ್ಜಿಸಬೇಕೆಂದೇನೂ ಇಲ್ಲ. ಗರ್ಭಿಣಿಯರು ಪ್ರತಿದಿನ 200 ಎಂ.ಜಿ. ಪ್ರಮಾಣದಷ್ಟು ಕೆಫಿನ್ ಸೇವಿಸಬಹುದು ಎಂದು ವೈದ್ಯರು ಹೇಳುತ್ತಾರೆ. ಒಂದು ಕಪ್ ಕಾಫಿಯಲ್ಲಿ ಎಷ್ಟು ಮಿಲಿಗ್ರಾಂ ಕೆಫಿನ್ ಇದೆ ಎಂಬುದರ ಆಧಾರದ ಮೇಲೆ ಎಷ್ಟು ಕಾಫಿ ಸೇವಿಸಬಹುದು ಎಂಬುದನ್ನು ವೈದ್ಯರು ಸೂಚಿಸುತ್ತಾರೆ.
4. ಹೃದಯ ಸಂಬಂಧಿ ಕಾಯಿಲೆ ಇರುವವರು.
ಕಾಫಿಯು ಹೃದಯಬಡಿತದ ವೇಗ ಮತ್ತು ರಕ್ತದ ಒತ್ತಡವನ್ನು ಹೆಚ್ಚಿಸುತ್ತದೆ. ಹೃದಯ ಸಂಬಂಧಿ ಕಾಯಿಲೆ ಇರುವವರು ಕಾಫಿಯನ್ನು ಸೇವಿಸಿದರೆ, ಹೃದಯದ ಮೇಲೆ ಒತ್ತಡ ಹೆಚ್ಚಾಗುವ ಅಪಾಯವಿರುತ್ತದೆ. ಹೀಗಾಗಿ ಅಂತಹವರು ಕಾಫಿಯನ್ನು ವ್ಯರ್ಜಿಸುವುದು ಒಳಿತು.
5. ನಿದ್ದೆಯ ಸಮಸ್ಯೆ ಇರುವವರು.
ಕಾಫಿ ಸೇವನೆಯು ನಮ್ಮನ್ನು ಹೆಚ್ಚು ಜಾಗೃತರಾಗಿ ಇರುವಂತೆ ಮಾಡುತ್ತದೆ. ನಿದ್ದೆಯ ಸಮಸ್ಯೆ ಇರುವವರು ಕಾಫಿ ಸೇವಿಸಿದರೆ ನಿದ್ದೆ ಮತ್ತಷ್ಟು ಕಡಿಮೆಯಾಗುತ್ತದೆ. ಹೀಗಾಗಿ ನಿದ್ದೆಗೆ ಹೋಗುವ ಮುನ್ನ ಕನಿಷ್ಠ ಎಂಟು ತಾಸಿನ ಅವಧಿಯಲ್ಲಿ ಕಾಫಿ ಸೇವಿಸದೇ ಇರುವುದು ಒಳ್ಳೆಯದು.
Discover more from Coastal Times Kannada
Subscribe to get the latest posts sent to your email.
Discussion about this post