ಉಳ್ಳಾಲ: ಇಲ್ಲಿನ ಠಾಣಾ ವ್ಯಾಪ್ತಿಯ ಕೆ.ಸಿ ರೋಡ್ ಅಜ್ಜಿನಡ್ಕ ಎಂಬಲ್ಲಿ ಮೀನಿನ ವ್ಯಾಪಾರಿ ರೌಡಿಶೀಟರ್ ಆರಿಫ್ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಫೈಸಲ್ ನಗರ ನಿವಾಸಿ ತಲ್ಲಾತ್ ಯಾನೆ ಫೈಸಲ್ ನಗರ ತಲ್ಲಾತ್ (35) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿ ತಲ್ಲಾತ್ ಮಂಗಳೂರು ಕಮೀಷನರೇಟ್ ವ್ಯಾಪ್ತಿಯ ಕುಖ್ಯಾತ ರೌಡಿ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಒಟ್ಟು ಏಳು ಆರೋಪಿಗಳನ್ನು ಬಂಧಿಸಲಾಗಿದೆ. ಈ ಹಿಂದೆ ಆಚಿ, ನೌಫಾಲ್, ಅಷ್ಫಾಕ್, ನಿಸಾಕ್, ರಿಫತ್ ಆಲಿ, ರಹೀಮ್ ಎಂಬವರನ್ನು ಬಂಧಿಸಲಾಗಿತ್ತು. ಕೆ.ಸಿ.ರೋಡ್ ಅಜ್ಜಿನಡ್ಕ ಬಳಿ ನೆಲೆಸಿದ್ದ ಕುದ್ರೋಳಿ ನಿವಾಸಿ ಆರೀಫ್ ಮೇಲೆ ಮೇ.26 ರಂದು ದಾಳಿ ನಡೆಸಲಾಗಿತ್ತು. ಮಂಗಳೂರು ಮೀನಿನ ಧಕ್ಕೆಗೆ ಕೆಲಸಕ್ಕೆಂದು ತೆರಳುವ ಸಂದರ್ಭದಲ್ಲಿ ತಲ್ಲಾತ್ ನೇತೃತ್ವದ ಏಳು ಮಂದಿಯ ತಂಡ ತಲವಾರಿನಿಂದ ಕಡಿದು ಕೊಲೆ ಮಾಡಲು ಯತ್ನಿಸಿತ್ತು. ಮೀನಿನ ವ್ಯಾಪಾರ ಸಂಬಂಧಿಸಿದ ಹಣಕಾಸಿನ ವಿಚಾರಕ್ಕೆ ಉಂಟಾದ ವೈಮನಸ್ಸಿನಿಂದ ಆತನ ಮೇಲೆ ದಾಳಿ ನಡೆಸಲಾಗಿತ್ತು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿತ್ತು. ಹಲ್ಲೆಗೊಳಗಾದ ಆರಿಫ್ ವಿರುದ್ಧವೂ ಮಂಗಳೂರಿನ ಕಂಕನಾಡಿ, ಬಂದರು ಪೊಲೀಸ್ ಠಾಣೆಗಳಲ್ಲಿ 11 ಪ್ರಕರಣಗಳಿದ್ದು, ಆತನೂ ರೌಡಿಶೀಟರ್ ಆಗಿದ್ದಾನೆ. ರೌಡಿ ಶೀಟರ್ ತಲ್ಲಾತ್ ಈ ಹಿಂದೆ ಫರಂಗಿಪೇಟೆಯಲ್ಲಿ ನಡೆದಿದ್ದ ಅವಳಿ ಕೊಲೆ ಪ್ರಕರಣದಲ್ಲೂ ಪ್ರಮುಖ ಆರೋಪಿಯಾಗಿದ್ದ. ಈತನ ಸಹಚರ ನೌಫಾಲ್ ಯಾನೆ ಟೊಪ್ಪಿ ನೌಫಾಲ್ ಕೂಡಾ ಫರಂಗಿಪೇಟೆ ಅವಳಿ ಕೊಲೆ ಪ್ರಕರಣದ ಆರೋಪಿ. ನೌಫಾಲ್ ಚಿಕ್ಕಪ್ಪನಿಗೆ ತಲವಾರು ದಾಳಿಗೊಳಗಾದ ಆರೀಫ್ ಮೀನಿನ ಏಲಂ ವ್ಯವಹಾರಕ್ಕೆ ಸಂಬಂಧಿಸಿ ₹ 68,000 ಹಣ ನೀಡಲು ಬಾಕಿ ಇತ್ತು. ನೌಫಾಲ್ ದೂರವಾಣಿ ಕರೆ ಮಾಡಿ ಹಣ ಕೇಳಿದ್ದಾಗ, ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದೇ ವೈಷಮ್ಯಕ್ಕೆ ಸಂಬಂಧಿಸಿ ತಲ್ಲಾತ್, ನೌಫಾಲ್ ಸಹಿತ ಏಳುಮಂದಿಯ ತಂಡ ಸೇರಿಕೊಂಡು ಆರಿಫ್ ಕೊಲೆಗೆ ಯತ್ನಿಸಿದೆ. ತಲ್ಲಾತ್ ವಿರುದ್ಧ ಕೊಲೆ, ಕೊಲೆಯತ್ನ, ದರೋಡೆ ಸಹಿತ ಹಲವು ಪ್ರಕರಣಗಳಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Discover more from Coastal Times Kannada
Subscribe to get the latest posts sent to your email.
Discussion about this post