ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ 25 ನೇ ಅವಧಿಯ ಮೇಯರ್, ಉಪಮೇಯರ್ ಹಾಗೂ 4 ಸ್ಥಾಯೀ ಸಮಿತಿ ಸದಸ್ಯರ ಚುನಾವಣೆ ಸೆ.19ರಂದು ಮಧ್ಯಾಹ್ನ 12 ಗಂಟೆಗೆ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಜರಗಲಿದೆ.
ಪಾಲಿಕೆಯ ಮುಂದಿನ ಅವಧಿಗೆ ಮೇಯರ್ ಅಭ್ಯರ್ಥಿಯಾಗಿ ದೇರೆಬೈಲ್ ಉತ್ತರ ವಾರ್ಡ್ನ ಮನೋಜ್ ಕುಮಾರ್ ಹಾಗೂ ಉಪಮೇಯರ್ ಅಭ್ಯರ್ಥಿಯಾಗಿ ಬೋಳಾರ ವಾರ್ಡ್ನ ಭಾನುಮತಿ ಪಿ.ಎಸ್. ಅವರನ್ನು ಬಿಜೆಪಿಯಿಂದ ಆಯ್ಕೆ ಮಾಡಲಾಗಿದೆ. ಈ ಆಯ್ಕೆ ಪ್ರಕ್ರಿಯೆಯು ದ.ಕ. ಜಿಲ್ಲಾ ಕಚೇರಿಯ ಸಭೆಯಲ್ಲಿ ನಡೆಯಿತು.
ಉತ್ತರ ವಿಧಾನಸಭೆ ಕ್ಷೇತ್ರದ 17ನೇ ವಾರ್ಡ್ ಸದಸ್ಯ ಮನೋಜ್ ದೇರೆಬೈಲ್ ಅವರನ್ನು ಮೇಯರ್ ಸ್ಥಾನಕ್ಕೆ ಅಭ್ಯರ್ಥಿಯಾಗಿಸಿದೆ. ಮೇಯರ್ ಸ್ಥಾನ ಈ ಬಾರಿ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಕಾಂಗ್ರೆಸಿನಲ್ಲಿ ಅಭ್ಯರ್ಥಿ ಇಲ್ಲದಿರುವುದರಿಂದ ಬಹುತೇಕ ಅವಿರೋಧ ಆಯ್ಕೆಯಾಗಲಿದೆ.
ಉಪ ಮೇಯರ್ ಸ್ಥಾನಕ್ಕೆ ದಕ್ಷಿಣ ವಿಧಾನಸಭೆ ಕ್ಷೇತ್ರದ ವಾರ್ಡ್ ನಂಬರ್ 58ರ ಬೋಳಾರದ ಬಿಜೆಪಿ ಸದಸ್ಯೆ ಭಾನುಮತಿ ಪಿ.ಎಸ್ ಅವರ ಹೆಸರನ್ನು ಆಯ್ಕೆ ಮಾಡಲಾಗಿದೆ. ಉಪ ಮೇಯರ್ ಸ್ಥಾನ ಸಾಮಾನ್ಯ ಮೀಸಲಾತಿಗೆ ಒಳಪಟ್ಟಿದ್ದು, ಯಾರಿಗೂ ಈ ಸ್ಥಾನಕ್ಕೆ ಸ್ಪರ್ಧಿಸಬಹುದು. ಕಾಂಗ್ರೆಸಿನಿಂದ ಉಪ ಮೇಯರ್ ಸ್ಥಾನಕ್ಕೆ ಅಭ್ಯರ್ಥಿ ಇಳಿಸುವ ಸಾಧ್ಯತೆಯಿದೆ. ಆದರೆ ಬಿಜೆಪಿ 33 ಸದಸ್ಯರೊಂದಿಗೆ ಪೂರ್ಣ ಬಹುಮತ ಹೊಂದಿರುವುದು ಮತ್ತು ಕಾಂಗ್ರೆಸ್ ಕೇವಲ 14 ಸದಸ್ಯರನ್ನು ಹೊಂದಿರುವುದರಿಂದ ಫಲಿತಾಂಶ ಬದಲಾಗಲ್ಲ.
Discussion about this post