ಮಂಗಳೂರು, ಅ 18: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಪಾವೂರು ಬಳಿಯ ನೇತ್ರಾವತಿ ನದಿಯ ಉಳಿಯ ದ್ವೀಪ ಹಚ್ಚ ಹಸಿರು ಜನವಸತಿ ಪ್ರದೇಶದಿಂದ ಕೂಡಿದೆ. ಈ ದ್ವೀಪ ವಿನಾಶದ ಅಂಚಿಗೆ ತಲುಪಿತ್ತು. ಮರಳು ದಂಧೆಕೋರರ ಅಟ್ಟಹಾಸಕ್ಕೆ ಸುಮಾರು 80 ಎಕರೆ ಇದ್ದ ದ್ವೀಪ ಪ್ರದೇಶ ಇದೀಗ 40 ಎಕರೆಗೆ ಬಂದು ತಲುಪಿದೆ. ಈ ಅಕ್ರಮ ಮರಳುಗಾರಿಕೆಯ ವಿರುದ್ಧ ಇಲ್ಲಿನ 25ಕ್ಕೂ ಹೆಚ್ಚು ಕುಟುಂಬಗಳು ನಿರಂತರ ಹೋರಾಟ ಮಾಡುತ್ತಾ ಬಂದಿದ್ದರು.
ಪ್ರತಿಭಟನೆಗೂ ಬಗ್ಗದಿದ್ದಾಗ ದ್ವೀಪ ನಿವಾಸಿಗಳು ನದಿಯಲ್ಲಿ ಮುಳುಗಿ ಆಡಳಿತ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೂ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಉಳಿಯ ದ್ವೀಪದ ಸುತ್ತಮುತ್ತಲಿನ ಎರಡು ಕಿ.ಮೀ ವ್ಯಾಪ್ತಿಯ ಪ್ರದೇಶದಲ್ಲಿ ಎಲ್ಲ ರೀತಿಯ ಮರಳುಗಾರಿಕೆಯನ್ನು ನಿಷೇಧಿಸಿ ಆದೇಶಿಸಿದೆ.
ನಿಷೇಧಿತ ಪ್ರದೇಶದ ವ್ಯಾಪ್ತಿಯಲ್ಲಿ ಸಂಚಾರ ದೋಣಿಗಳ ಹೊರತಾಗಿ ಇತರೆ ಎಲ್ಲ ದೋಣಿ ಅಥವಾ ಯಂತ್ರಗಳ ಮೂಲಕ ಮರಳು ಉತ್ಪನ್ನದ ಸಾಗಾಟ ಮಾಡುವುದನ್ನು ನಿಷೇಧಿಸಲಾಗಿದೆ. ಇದು ಇಲ್ಲಿನ ದ್ವೀಪ ನಿವಾಸಿಗಳ ಹೋರಾಟಕ್ಕೆ ಜಯಸಿಕ್ಕಂತಾಗಿದೆ.
ಇತ್ತಿಚೇಗೆ ಯಾರ ಭಯವೂ ಇಲ್ಲದೆ ಮರಳು ದಂಧೆಕೋರರು ಮರಳು ಅಗೆಯುತ್ತಿದ್ದ ದೃಶ್ಯಗಳು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದ ಕೆಡಿಪಿ ಸಭೆಯಲ್ಲೂ ಈ ವಿಚಾರ ಚರ್ಚೆಗೆ ಬಂದು ತೀವ್ರ ಚರ್ಚೆಗೆ ಕಾರಣವಾಗಿತ್ತು. ಅಕ್ರಮಕ್ಕೆ ಕಡಿವಾಣ ಹಾಕಿ ಎಂದು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದರು.
ಕೊನೆಗೂ ಮರಳುಗಾರಿಕೆಗೆ ಬ್ರೇಕ್ ಬಿದ್ದಿದೆ. ಅನಧಿಕೃತ ದಕ್ಕೆಗಳಲ್ಲಿ ಮರಳು ಶೇಖರಿಸಿರುವುದನ್ನು ಮತ್ತು ವಾಹನಗಳಿಗೆ ಮರಳು ಹಂಚುವುದನ್ನು ಕೂಡ ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸಿದ್ರೆ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ. ಈ ದ್ವೀಪದಲ್ಲಿ ಸುಮಾರು 25ಕ್ಕೂ ಹೆಚ್ಚು ಕುಟುಂಬಗಳು ನೂರಾರು ವರ್ಷದಿಂದ ವಾಸವಾಗಿದ್ದು ಅಕ್ರಮ ಮರಳುಗಾರಿಕೆಯಿಂದ ಇವರುಗಳ ಮನೆ ಅಪಾಯದಲ್ಲಿತ್ತು. ಹೀಗಾಗಿ ಈ ದ್ವೀಪವನ್ನು ಉಳಿಸಲು ಇಲ್ಲಿನ ಜನ ಬೀದಿಗಿಳಿದು ಪ್ರತಿಭಟಿಸಿದ್ದರು. ಇದೀಗ ಇಲ್ಲಿನ ನಿವಾಸಿಗಳ ಕೂಗು ಆಡಳಿತ ವ್ಯವಸ್ಥೆಗೆ ತಲುಪಿದ್ದು ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post