ಮಂಗಳೂರು, ಜ.20: ಮುಂಬರುವ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಚುನಾವಣಾ ‘ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಉಪಾಧ್ಯಕ್ಷರಾದ ಮಧು ಬಂಗಾರಪ್ಪ ಹಾಗೂ ಪ್ರೊ.ಕೆ.ಈ.ರಾಧಾಕೃಷ್ಣ ಇದೇ 21 ಹಾಗೂ 22ರಂದು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ನಗರದ ಸರ್ಕಿಟ್ ಹೌಸ್‌ನಲ್ಲಿ ಶನಿವಾರ ಬೆಳಿಗ್ಗೆ 10.30ರಿಂದ ವಿವಿಧ ಸಂಘ ಸಂಸ್ಥೆಗಳ ಪ್ರಮುಖರ ಜೊತೆ ಚರ್ಚಿಸಲಿದ್ದಾರೆ’ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
‘ಮೀನುಗಾರರ ಮುಖಂಡರು, ಬಸ್ ಚಾಲಕರು ಮತ್ತು ಮಾಲೀಕರು, ಆಟೋರಿಕ್ಷಾ ಚಾಲಕರು ಹಾಗೂ ಬೀಡಿ ಕಾರ್ಮಿಕರ ಸಂಘಗಳ ಪ್ರತಿನಿಧಿಗಳು, ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ಪ್ರಮುಖರು, ಜಾನಪದ ಕಲಾವಿದರು, ಯಕ್ಷಗಾನ, ತುಳು ಹಾಗೂ ಕಲಾ ಸಂಘಟನೆಗಳ ಪ್ರಮುಖರು ಸರ್ಕಾರೇತರ ಸಂಸ್ಥೆಗಳು, ಕೈಗಾರಿಕೆಗಳ ಪ್ರತಿನಿಧಿಗಳು, ಪ್ರವಾಸೋದ್ಯಮ ಚಟುವಟಿಕೆ ನಿರತ ಉದ್ದಿಮೆಗಳ ಪ್ರಮುಖರ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ಅಡಿಕೆ ಬೆಳೆಗಾರರ ನಿಯೋಗದ ಜೊತೆ ಮಧ್ಯಾಹ್ನ ಚರ್ಚಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು. ‘ಇದೇ 22ರಂದು ಸಮಿತಿಯು ಜಿಲ್ಲೆಯಲ್ಲಿ ಅಡಿಕೆ ಬೆಳೆಯುವ ಪ್ರದೇಶ, ಬಂದರು, ಪ್ರವಾಸೋದ್ಯಮ ಚಟುವಟಿಕೆಯ ಸ್ಥಳಗಳಿಗೆ ಭೇಟಿ ನಿಡಲಿದೆ. ಕಸ್ತೂರಿ ರಂಗನ್ ವರದಿ ಜಾರಿಯಾಗುವ ಪ್ರದೇಶದ ನಿವಾಸಿಗಳ ಅಭಿಪ್ರಾಯ ಸಂಗ್ರಹಿಸಲಿದೆ’ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು, ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆ, ಜಿಲ್ಲೆಯಲ್ಲಿರುವ ಬೀಡಿ ಕಾರ್ಮಿಕರಿಗ ಪುನರ್ವಸತಿ ಕಲ್ಪಿಸುವ ಕುರಿತು ಪಕ್ಷದ ಜಿಲ್ಲಾ ಸಮಿತಿಯಿಂದಲೂ ಶಿಫಾರಸು ಮಾಡಲಿದ್ದೇವೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪದಾಧಿಕಾರಿಗಳಾದ ಶಾಹುಲ್ ಹಮೀದ್, ನವೀನ್ ಡಿ ಸೋಜ, ಕವಿತಾ ಸನಿಲ್, ಚಿತ್ತರಂಜನ್ ಶೆಟ್ಟಿ, ಶುಭೋದಯ ಆಳ್ವ, ಮುಸ್ತಾಫ, ಮುಸ್ತಾಫ ಸುಳ್ಯ, ಸಲೀಂ, ಅಲಿಸ್ಪರ್ ಡಿ ಕುನ್ಹಾ, ಸತೀಶ್ ಪೆಂಗಲ್, ಹಬೀಬುಲ್ಲಾ ಕಣ್ಣೂರು, ಫಿಯೂಸ್ ಮೊಂತೆರೋ ಮೊದಲಾದವರು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.








Discussion about this post