ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 110 ವರ್ಷಗಳ ಇತಿಹಾಸವನ್ನು ಹೊಂದಿರುವ ಅತ್ಯುತ್ತಮ ಸಾರಿಗೆ ಸೇವೆಯನ್ನು ನೀಡಿಕೊಂಡು ಬಂದಿರುವ ದಕ್ಷಿಣ ಕನ್ನಡ ಜಿಲ್ಲಾ ಬಸ್ಸು ಮಾಲಕರ ಸಂಘದ ವತಿಯಿಂದ ಹತ್ತು ಹಲವು ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರಲಾಗಿದೆ. ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಇದುವರೆಗೆ ಕೋಟಿಗಟ್ಟಲೆ ರೂಪಾಯಿಗಳ ರಿಯಾಯಿತಿ ದರದ ಬಸ್ಸು ಪಾಸುಗಳನ್ನು ನೀಡುವ ಮೂಲಕ ಬಡ ವಿದ್ಯಾರ್ಥಿಗಳಿಗೆ ನೆರವಾಗಿದ್ದೇವೆ. ಪ್ರಸ್ತುತ ಮಂಗಳೂರು ನಗರವನ್ನು ಡ್ರಗ್ಸ್ ಮುಕ್ತಗೊಳಿಸುವ ನಿಟ್ಟಿನಲ್ಲಿ ಪಣ ತೊಟ್ಟಿರುವ ನಗರ ಪೊಲೀಸ್ ಕಮಿಷನರ್ ಅವರ ಜೊತೆಗೆ ಜಿಲ್ಲಾ ಬಸ್ಸು ಮಾಲಕರ ಸಂಘವೂ ಕೈಜೋಡಿಸಿ ಡ್ರಗ್ ನಿರ್ಮೂಲನೆ ಮಾಡಲು ಬೀದಿ ನಾಟಕ ಪ್ರದರ್ಶನ ಮಾಡಲಿದ್ದೇವೆ ಎಂದು ಜಿಲ್ಲಾ ಬಸ್ಸು ಮಾಲಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪಾಡಿ ಹೇಳಿದ್ದಾರೆ.
ನಗರದ ಖಾಸಗಿ ಹೋಟೆಲ್ ಒಂದರಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಸಾರಿಗೆ ವ್ಯವಸ್ಥೆಯಲ್ಲಿ ನಮಗೆ ಎದುರಾಗುವ ನಾನಾ ರೀತಿಯ ಸಮಸ್ಯೆಗಳನ್ನು ಸಂಘಟಿತವಾಗಿ ನಿವಾರಿಸಲು ಹಾಗೂ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಸುರಕ್ಷಿತ ಸುಗಮ ಸಾರಿಗೆ ಸೇವೆಯನ್ನು ಸಂಘಟಿತವಾಗಿ ನೀಡುವ ಉದ್ದೇಶದೊಂದಿಗೆ ದಕ್ಷಿಣ ಕನ್ನಡ ಬಸ್ಸು ಮಾಲಕರ ಸಂಘವು 01/07/1981 ರಲ್ಲಿ ಹುಟ್ಟಿಕೊಂಡಿತು. ವಿದ್ಯಾರ್ಥಿ ಸಮುದಾಯದ ಏಳಿಗೆಗಾಗಿ, ವಿದ್ಯಾರ್ಜನೆಗೆ ಪ್ರೋತ್ಸಾಹ ನೀಡುವ ಏಕಮೇವ ಉದ್ದೇಶದಿಂದ ಶಾಲಾ ವಿದ್ಯಾರ್ಥಿಗಳಿಗೆ 75% ರಷ್ಟು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ 60% ರಷ್ಟು ರಿಯಾಯತಿ ದರದ ಪಾಸುಗಳನ್ನು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಕೊಡಲಾಗುತ್ತದೆ. ಈ ತನಕ ಸುಮಾರು 6,10,354 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಿಟಿ ಬಸ್ಸುಗಳಲ್ಲಿ ಈ ಸವಲತ್ತು ಪಡೆದಿದ್ದು, ಬಸ್ಸು ಮಾಲಕರು ವಿದ್ಯಾರ್ಥಿಗಳಿಗೆ 60% ಹಾಗೂ 75% ರಿಯಾಯತಿ ರೂಪದಲ್ಲಿ ಸುಮಾರು ರೂಪಾಯಿ ಹದಿನಾಲ್ಕು ಕೋಟಿ ಅರುವತ್ತೈದು ಲಕ್ಷ ತೊಂಬತ್ತೆರಡು ಸಾವಿರದ ನೂರ ಐವತ್ತೈದು (14,65,92,155) ಮಿಕ್ಕಿ ತಮ್ಮ ಆದಾಯವನ್ನು ತ್ಯಾಗ ರೂಪದಲ್ಲಿ ಕೊಡ ಮಾಡಿದ್ದಾರೆ.
ಸುಮಾರು 40 ವರ್ಷಗಳಿಂದ ಅಂಗವಿಕಲಕರಿಗೆ ಹಾಗೂ ಬುದ್ಧಿಮಾಂದ್ಯರಿಗೆ ಅವರವರ ಅಂಗ ನ್ಯೂನತೆಯನ್ನು ಆಧಾರವಾಗಿರಿಸಿ ಬಸ್ಸಿನಲ್ಲಿ ಉಚಿತ ಪ್ರಯಾಣದ ಪಾಸುಗಳನ್ನು ನೀಡುತ್ತಿದ್ದೇವೆ. ಇದರಿಂದ ಬಸ್ಸು ಮಾಲಕರಿಗೆ ಸಾವಿರಾರು ರೂಪಾಯಿಗಳ ಖರ್ಚು ಬಂದರೂ ಸರಕಾರದ ವತಿಯಿಂದ ಖಾಸಗಿ ಬಸ್ಸಿನವರು ಯಾವುದೇ ಸಹಾಯವನ್ನು ಅಪೇಕ್ಷಿಸದೆ ಸಾಮಾಜಿಕ ಕಳಕಳಿಯಿಂದ ಈ ಅಮೂಲ್ಯ ಕೊಡುಗೆಯನ್ನು ನೀಡುತ್ತಿದ್ದೇವೆ.
ಮನುಷ್ಯನ ಜೀವನಕ್ಕೆ ಮಾರಕವಾದ ಆರೋಗ್ಯಕರ ಜೀವನ ಶೈಲಿಗೆ ಮಾದಕ ವ್ಯಸನ ಅಡ್ಡಿಯಾಗಿದ್ದು ನಮ್ಮ ಜಿಲ್ಲೆಯಲ್ಲಿ ಈ ಡ್ರಗ್ಸ್ ಮಾಫಿಯಾವನ್ನು ಬಹುಮಟ್ಟಿಗೆ ಹತೋಟಿಗೆ ತಂದಂತಹ ನಮ್ಮ ಮಂಗಳೂರಿನ ಪೊಲೀಸ್ ಕಮಿಷನರ್ ಆದಂತಹ ಶ್ರೀ ಸುಧೀರ್ ಕುಮಾರ್ ರೆಡ್ಡಿಯವರನ್ನು ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಬಸ್ಸು ಮಾಲಕರ ಸಂಘವು ಅಭಿನಂದಿಸುತ್ತದೆ. ಹಾಗೂ ಅವರನ್ನು ತುಂಬು ಹೃದಯದಿಂದ ಪ್ರಶಂಸಿಸುತ್ತದೆ. ಜಿಲ್ಲೆಯಲ್ಲಿ ಡ್ರಗ್ಸ್ ವಿರುದ್ಧ ಪೊಲೀಸ್ ಇಲಾಖೆ ಸಮರ ಸಾರಿರುವುದರಿಂದ ಸಾರ್ವಜನಿಕರು ಹೆಮ್ಮೆ ಪಡುವಂತಾಗಿದೆ. ಇಂತಹ ದಕ್ಷ ಅಧಿಕಾರಿಗಳು ಜಿಲ್ಲೆಯಲ್ಲಿ ಇರಬೇಕು, ಪೊಲೀಸ್ ಇಲಾಖೆಗೆ ದಕ್ಷಿಣ ಕನ್ನಡ ಬಸ್ಸು ಮಾಲಕರ ಸಂಘವು ಎಲ್ಲಾ ರೀತಿಯ ಸಹಕಾರವನ್ನು ನೀಡಲಿದೆ. ಮಾತ್ರವಲ್ಲದೆ ತಾರೀಕು 27.01.2026ರ ಮಂಗಳವಾರದದು ದಕ್ಷಿಣ ಕನ್ನಡ ಬಸ್ಸು ಮಾಲಕರ ಸಂಘವು ಪೊಲೀಸ್ ಇಲಾಖೆ ಹಾಗೂ ರೋಶನಿ ನಿಲಯ ವಿದ್ಯಾಸಂಸ್ಥೆಯ ಅಪರಾಧಶಾಸ್ತ್ರ ವಿಭಾಗದ ಮುಖ್ಯಸ್ಥ ಸಾರಿಕ್ ಅಂಕಿತ ಹಾಗೂ ಅವರ ವಿದ್ಯಾರ್ಥಿಗಳ ಸಹಯೋಗದೊಂದಿಗೆ ಮಂಗಳೂರು ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರಾರಂಭಗೊಂಡು ಲಾಲ್‌ಬಾಗ್, ತೊಕ್ಕೊಟ್ಟು, ಉಳ್ಳಾಲ, ತಲಪಾಡಿ ನಿಲ್ದಾಣಗಳಲ್ಲಿ ಮಾದಕ ದ್ರವ್ಯ ವಿರುದ್ಧ ಜನ ಜಾಗೃತಿ (ಬೀದಿ ನಾಟಕ) ಕಾರ್ಯಕ್ರಮವನ್ನು ಹಮ್ಮಿಕೊಂಡು ಎಲ್ಲಾ ಬಸ್ಸುಗಳಲ್ಲಿಯೂ ಸ್ಟಿಕ್ಕರ್ ಹಾಕಿಕೊಂಡು ಜಿಲ್ಲೆಯ ಪ್ರಮುಖ ಕೇಂದ್ರಗಳಲ್ಲಿ ಪ್ಲೆಕ್ಸ್ ಹಾಕಿ ದಕ್ಷಿಣ ಕನ್ನಡ ಬಸ್ಸು ಮಾಲಕರ ಸಂಘವು ಕಾರ್ಯಕ್ರಮವನ್ನು ಸಂಯೋಜಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದವರು ಶ್ರೀ ಕೆ ರಾಮಚಂದ್ರ ನಾಯ್ಕ ಉಪಾಧ್ಯಕ್ಷರು, ಶ್ರೀ ಜೊಯೆಲ್ ದಿಲ್ ರಾಜ್ ಫೆರ್ನಾಂಡಿಸ್ ಕೋಚಧಿಕಾರಿ, ಶ್ರೀ ರಾಜೇಶ್ ಟಿ ಜೊತೆ ಕಾರ್ಯದರ್ಶಿ.
Discover more from Coastal Times Kannada
Subscribe to get the latest posts sent to your email.







Discussion about this post