ಮಂಗಳೂರು, ಫೆ.20: ಬಿಎಸ್ಸೆನ್ನೆಲ್ ಸಂಸ್ಥೆಯ ವತಿಯಿಂದ ಸುಮಾರು 30-40 ವರ್ಷಗಳ ಹಿಂದೆ ಹಾಕಲಾಗಿದ್ದ ತಾಮ್ರದ ವೈರ್ ಗಳನ್ನು ಹೊಂದಿರುವ ಕೇಬಲನ್ನು ಮಣ್ಣಿನಡಿಯಿಂದ ತೆಗೆದು ಅಕ್ರಮವಾಗಿ ಮಾರಾಟ ಮಾಡಿದ ಕೃತ್ಯ ಬೆಳಕಿಗೆ ಬಂದಿದ್ದು, ಬಿಎಸ್ಸೆನ್ನೆಲ್ ಸಂಸ್ಥೆಗೆ ಸೇರಿದ ಮೂವರನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಮೂಡಿಗೆರೆ ತಾಲೂಕಿನ ಪ್ರಸಕ್ತ ಎಕ್ಕೂರಿನಲ್ಲಿ ವಾಸವಾಗಿರುವ ಕೇಬಲ್ ಜಾಯಿಂಟರ್ ಕೆಲಸ ಮಾಡುತ್ತಿರುವ ಮಂಜುನಾಥ ಡಿ. (29) ಮತ್ತು ಮೂಲತಃ ಕೇರಳ ಕಣ್ಣೂರಿನ ಪ್ರಸಕ್ತ ಮಾರ್ನಮಿಕಟ್ಟೆಯಲ್ಲಿ ವಾಸವಾಗಿರುವ ಟೆಲಿಕಾಂ ಟೆಕ್ನಿಶಿಯನ್ ಕೆಲಸ ಮಾಡುತ್ತಿರುವ ಕೆ.ಕೆ.ಚಾಮಿ (59) ಹಾಗೂ ಮೂಲತಃ ಹಾಸನ ಜಿಲ್ಲೆಯ ಪ್ರಸಕ್ತ ಪಂಪ್‌ವೆಲ್‌ನಲ್ಲಿ ವಾಸವಾಗಿರುವ ಅಸಿಸ್ಟೆಂಟ್ ಆಫೀಸ್ ಸುಪರ್‌ವೈಸರ್ ಆಗಿರುವ ತನ್ವೀರ್ ಪಾಷಾ (50) ಬಂಧಿತ ಆರೋಪಿಗಳಾಗಿದ್ದಾರೆ.
ಇದರ ಬಗ್ಗೆ ಮಾಹಿತಿಯಿದ್ದ ಬಿಎಸ್ಸೆನ್ನೆಲ್ ಸಂಸ್ಥೆಯ ಟೆಕ್ನೀಶಿಯನ್ ಕೆಕೆ ಚಾಮಿ ಮತ್ತು ಕಚೇರಿ ಅಧೀಕ್ಷಕ ತನ್ವೀರ್ ಪಾಷಾ, ಮಂಜುನಾಥ್ ಜೊತೆಗೂಡಿ ಹಳೆ ಕಾಲದ ತಾಮ್ರದ ಕೇಬಲನ್ನು ತೆಗೆದು ಮಾರಾಟ ಮಾಡುತ್ತಿದ್ದರು. ನೆಹರು ಮೈದಾನ ಆಸುಪಾಸಿನಲ್ಲಿ ಸೇರಿದಂತೆ ಹಲವೆಡೆ ಹಾಕಿದ್ದ ಕೇಬಲನ್ನು ಒಂದೂವರೆ ವರ್ಷಗಳಿಂದ ತೆಗೆದು ಮಾರಾಟ ಮಾಡಿದ್ದು, ಇದರ ಈಗಿನ ಮಾರುಕಟ್ಟೆ ಮೌಲ್ಯ 70 ಲಕ್ಷ ಆಗಬಹುದೆಂದು ಅಂದಾಜಿಸಲಾಗಿದೆ. ಈ ಬಗ್ಗೆ ಪಾಂಡೇಶ್ವರ ಬಿಎಸ್ಸೆನ್ನೆಲ್ ಕಚೇರಿಯ ಜೂನಿಯರ್ ಟೆಲಿಕಾಂ ಆಫೀಸರ್ ವಿನೋದ್ ಶೇಖರ್ ನಾಯ್ಕ್ ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ.
ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, ಅವರ ಬಳಿಯಿದ್ದ 45 ಕೇಜಿ ತಾಮ್ರದ ಕೇಬಲ್ ಮತ್ತು ಕೇಬಲ್ ಮಾರಾಟ ಮಾಡಿ ಬಂದಿದ್ದ 10 ಲಕ್ಷ ರೂ. ಹಣವನ್ನು ವಶಕ್ಕೆ ಪಡೆದಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post