ಬೆಳ್ತಂಗಡಿ: ತಾಲೂಕಿನ ಕುತ್ಲೂರು ಗ್ರಾಮದಲ್ಲಿ 2012ರಲ್ಲಿ ನಕ್ಸಲ್ ಪರವಾದ ಕರಪತ್ರ ಹಂಚಿದ ಪ್ರಕರಣಕ್ಕೆ ಸಂಬಂಧಿಸಿ ನಕ್ಸಲ್ ಮಹೇಶ್ ಅವರನ್ನು ಗುರುವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಕೇರಳದ ತ್ರಿಶೂರ್ ಜೈಲಿನಲ್ಲಿ ಬಂಧನದಲ್ಲಿದ್ದ ಮಹೇಶ್ ಅವರನ್ನು ಕೇರಳ ರಾಜ್ಯದ ಪೊಲೀಸರು ಬಿಗಿ ಭದ್ರತೆಯೊಂದಿಗೆ ಫೆ. 19ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಮೋಸ್ಟ್ ವಾಂಟೆಡ್ ನಕ್ಸಲ್ ಆಗಿದ್ದ ಮಹೇಶ್ ಮೂಲತಃ ರಾಯಚೂರು ಜಿಲ್ಲೆಯ ಅರೋಲಿ ಗ್ರಾಮದ ಕುಡುಡಿ ಮುಖ್ಯರಸ್ತೆಯ ಹನುವ್ವನ ದೂತರ ಮಠದ ಎದುರಿನ ಅಂಬೇಡ್ಕರ್ ಕಾಲನಿಯ ನಿವಾಸಿಯಾಗಿದ್ದು, ಮಹೇಶ್ ಅಲಿಯಾಸ್ ಜಯಣ್ಣ ಅಲಿಯಾಸ್ ಜಾನ್ ಅಲಿಯಾಸ್ ಮಾರಪ್ಪ ಎಂಬ ಹೆಸರಿನಿಂದಲೂ ಪರಿಚಿತರಾಗಿದ್ದಾರೆ. ಬೆಳ್ತಂಗಡಿಯ ಕುತ್ಲೂರು ಎಂಬಲ್ಲಿ 2012 ರಲ್ಲಿ ನಕ್ಸಲ್ ಕರಪತ್ರಗಳನ್ನು ಹಂಚಿದ್ದ ಪ್ರಕರಣ ಸಂಬಂಧಿಸಿ ಬೆಳ್ತಂಗಡಿ ಪೊಲೀಸರು ಬಾಡಿ ವಾರೆಂಟ್ ಪಡೆದು ಕೇರಳದ ಜೈಲಿನಿಂದ ಕರೆತಂದಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣ ಸಂಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇತ್ತಿಚೆಗೆ ಪ್ರಕರಣದ ಮರು ತನಿಖೆಗೆ ಬೆಳ್ತಂಗಡಿ ನ್ಯಾಯಾಲಯ ಆದೇಶ ಹೊರಡಿಸಿದ್ದರಿಂದ ತನಿಖೆ ಸಲುವಾಗಿ ಕೇರಳ ಪೊಲೀಸರು ಕರೆತಂದಿದ್ದಾರೆ. ಕಳೆದ ಆರು ತಿಂಗಳ ಹಿಂದೆ ಕೇರಳ ಸಿಎಂ ಪಿಣರಾಯಿ ಎದುರಲ್ಲಿ ಶರಣಾಗತಿಯಾಗಿದ್ದ ಜಯಣ್ಣನನ್ನು ವಿವಿಧ ಪ್ರಕರಣದಲ್ಲಿ ಪೊಲೀಸರು ವಿಚಾರಣೆ ನಡೆಯುತ್ತಿರುವುದರಿಂದ ತ್ರಿಶೂರ್ ಜೈಲಿನಲ್ಲಿ ಇರಿಸಲಾಗಿದೆ
Discover more from Coastal Times Kannada
Subscribe to get the latest posts sent to your email.







Discussion about this post