ಉಡುಪಿ: ಮೀನು ಕದ್ದಿದ್ದಾರೆ ಎಂಬ ಆರೋಪದಲ್ಲಿ ಮಲ್ಪೆ ಮೀನು ಮಾರುಕಟ್ಟೆಯಲ್ಲಿ ಕಾರ್ಮಿಕ ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಕರಣ ಸಂಬಂಧಿಸಿ ಮೂವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಲಕ್ಷ್ಮೀ, ಶಿಲ್ಪಾ ಮತ್ತು ಸುಂದರ ಬಂಧಿತ ಆರೋಪಿಗಳಾಗಿದ್ದಾರೆ. ಈ ಪ್ರಕರಣದಲ್ಲಿ ಇನ್ನೋರ್ವ ಶಂಕಿತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ವಿಡಿಯೋ ಹಾಗೂ ಇತರ ಸಾಕ್ಷಿಗಳನ್ನು ಪರಿಶೀಲಿಸಿ ಮುಂದೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ. ಅರುಣ್ ತಿಳಿಸಿದ್ದಾರೆ.
ವಿಜಯ ನಗರ ಜಿಲ್ಲೆಯ ಹೂವಿನಹಡಗಲಿ ನಿವಾಸಿಯಾಗಿರುವ ಸಂತ್ರಸ್ತೆ ಕಳೆದ 5 ವರ್ಷಗಳಿಂದ ಮಲ್ಪೆ ಬಂದರಿನಲ್ಲಿ ಬೋಟಿನಲ್ಲಿರುವ ಮೀನನ್ನು ಬುಟ್ಟಿಯಲ್ಲಿ ತುಂಬಿಸಿ ಹೊರುವ ಕೆಲಸ ಮಾಡಿಕೊಂಡಿದ್ದರು. ಮಾರ್ಚ್ 18, ಬೆಳಗ್ಗೆ 6 ಗಂಟೆಗೆ ಮಲ್ಪೆ ಬಂದರಿನಲ್ಲಿ ಶ್ರೀಆರಾಧನಾ ಬೋಟ್‌ನಿಂದ ಮೀನು ಖಾಲಿ ಮಾಡಿ ಒಂದು ಬುಟ್ಟಿಯಲ್ಲಿ ಸಿಗಡಿ (ಚಟ್ಲಿ) ಮೀನನ್ನು ತಲೆಯ ಮೇಲೆ ಹೊತ್ತುಕೊಂಡು ಪದಾರ್ಥಕ್ಕೆಂದು ಕೊಂಡು ಹೋಗಿದ್ದರು.
ಇದರಿಂದ ಕೋಪಗೊಂಡ ಬಂದರಿನಲ್ಲಿ ಮೀನು ಮಾರಾಟ ಮಾಡುವ ಲಕ್ಷ್ಮೀ, ಶಿಲ್ಪಾ, ಆರಾಧನ ಬೋಟ್‌ನ ಚಂದ್ರ, ಸುಂದರ ಮತ್ತು ಇತರರು ಅಕ್ರಮವಾಗಿ ಸೇರಿಕೊಂಡು ಸಂತ್ರಸ್ತೆ ಮಹಿಳೆಯನ್ನು ತಡೆದು ನಿಲ್ಲಿಸಿ, ನಮ್ಮ ಊರು ಮಲ್ಪೆಗೆ ಎಲ್ಲಿಂದಲೋ ಬಂದು ನಮ್ಮ ಮೀನು ಕೊಂಡು ಹೋಗುತ್ತೀಯಾ ಎಂದು ಅವಾಚ್ಯವಾಗಿ ಬೈದಿದ್ದಾರೆ. ನಂತರ ಮೈ ಮೇಲೆ ಕೈ ಹಾಕಿ ಎಳೆದಾಡಿ, ಬಳಿಕ ಅಲ್ಲಿನ ಒಂದು ಮರಕ್ಕೆ ಹಗ್ಗದಿಂದ ಕಟ್ಟಿ ಹಾಕಿ ಲಕ್ಷ್ಮೀ ಮತ್ತು ಸುಂದರ ಅವರು ಕೈ ಯಿಂದ ಕೆನ್ನೆಗೆ, ಮೈಗೆ ಹೊಡೆದು ನೋವುಂಟು ಮಾಡಿರುವುದಾಗಿದೆ ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ : 32/25ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಮೇಲೆ ಬಿಎನ್‌ಎಸ್ ಕಲಂ 189(2), 191(2), 126(2), 127(2), 74, 115(2), 352, 351(2), 190 ಹಾಗೂ ಎಸ್‌ಸಿ ಮತ್ತು ಎಸ್‌ಟಿ ಕಾಯಿದೆ 1989ರ 3(1)(ಆರ್), 3(1)(ಎಸ್), 3(2)(ವಿ-ಎ)ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಮೂವರು ಆರೋಪಿಗಳ ಬಂಧನ, ಇನ್ನೋರ್ವ ಶಂಕಿತನ ವಿಚಾರಣೆ ನಡೆಯುತ್ತಿದ್ದು, ತನಿಖೆ ಮುಂದುವರಿದಿದೆ ಎಂದು ಉಡುಪಿ ಎಸ್ಪಿ ಡಾ.ಕೆ. ಅರುಣ್ ತಿಳಿಸಿದ್ದಾರೆ.
ಕಾನೂನು ಕೈಗೆತ್ತಿಕೊಳ್ಳುವುದು ಸಹಿಸಲ್ಲ ಎಂದ ಸಿಎಂ ಸಿದ್ದರಾಮಯ್ಯ : ಘಟನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿದ್ದು ಮೀನು ಕಳ್ಳತನ ಮಾಡಿದ್ದಾರೆಂದು ಆರೋಪಿಸಿ ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿ ಅಮಾನುಷವಾಗಿ ಥಳಿಸಿದ ವೀಡಿಯೋ ಕಂಡು ದಿಗ್ಭ್ರಮೆಯಾಯಿತು. ಕಾರಣವೇನೇ ಇರಲಿ, ಒಬ್ಬ ಮಹಿಳೆಯನ್ನು ಈ ರೀತಿ ಕೈಕಾಲು ಕಟ್ಟಿ ಹಲ್ಲೆ ಮಾಡುವುದು ಅಮಾನವೀಯ ಮಾತ್ರವಲ್ಲ, ಗಂಭೀರ ಅಪರಾಧವೂ ಹೌದು. ಇಂತಹ ಅನಾಗರೀಕ ವರ್ತನೆ ಕರ್ನಾಟಕದಂತಹ ಸುಸಂಸ್ಕೃತ ನಾಡಿಗೆ ತಕ್ಕುದಾದುದ್ದಲ್ಲ.
ಕಳ್ಳತನ, ಮೋಸ, ವಂಚನೆಯಲ್ಲಿ ತೊಡಗಿರುವವರ ವಿರುದ್ಧ ಕ್ರಮಕ್ಕೆ ನಮ್ಮಲ್ಲಿ ಪೊಲೀಸ್ ಇಲಾಖೆ, ಕಾನೂನು ವ್ಯವಸ್ಥೆ ಎಲ್ಲವೂ ಇದೆ, ದೂರು ದಾಖಲಿಸಿದರೆ ಪೊಲೀಸರು ತನಿಖೆ ನಡೆಸಿ, ಕಾನೂನಿನಡಿಯಲ್ಲಿ ಶಿಕ್ಷಿಸಲು ಸಮರ್ಥರಿರುವಾಗ ಹೀಗೆ ಸಾರ್ವಜನಿಕರು ಕಾನೂನು ಕೈಗೆತ್ತಿಕೊಳ್ಳುವುದನ್ನು ಸರ್ಕಾರ ಸಹಿಸುವುದಿಲ್ಲ. ಈ ಘಟನೆಯ ಕುರಿತು ಸೂಕ್ತ ತನಿಖೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post