ಮಂಗಳೂರು: ನಗರದ ಅತ್ತಾವರದ ಬಾಡಿಗೆ ಮನೆಯೊಂದರಲ್ಲಿ ಹತ್ತು ವರ್ಷಗಳ ಹಿಂದೆ ನಡೆದ ಅವಳಿ ಕೊ*ಲೆ ಪ್ರಕರಣದಲ್ಲಿ ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಶನಿವಾರ ಆದೇಶ ಹೊರಡಿಸಿದೆ.
ಕಾಸರಗೋಡು ಜಿಲ್ಲೆಯ ಚೆಂಗಳ ಗ್ರಾ.ಪಂ. ಚೆರ್ಕಳ ಮನೆ ನಿವಾಸಿ ಮೊಹಮ್ಮದ್ ಮುಹಜೀರ್ ಸನಾಫ್ (35), ವಿದ್ಯಾನಗರ ಅಣಂಗೂರು ಟಿ.ವಿ. ಸ್ಟೇಷನ್ ರಸ್ತೆ ನಿವಾಸಿ ಎ. ಮೊಹಮ್ಮದ್ ಇರ್ಷಾದ್ (34) ಮತ್ತು ಎ. ಮೊಹಮ್ಮದ್ ಸಫ್ವಾನ್ (34) ಜೀವಾವಧಿ ಶಿಕ್ಷೆಗೆ ಒಳಗಾದ ಅಪರಾಧಿಗಳು. ಕೇರಳದ ತಲಶ್ಶೇರಿಯ ನಾಫೀರ್ (24) ಮತ್ತು ಕೊಯಿಕೋಡ್‌ನ ಫಹೀಮ್ (25) ಕೊ*ಲೆಯಾದವರು.
ಪ್ರಕರಣದ ವಿವರ: ನಾಫೀರ್ ವಿದೇಶದಿಂದ ಚಿನ್ನದ ಗಟ್ಟಿಗಳನ್ನು ಕಳ್ಳ ಸಾಗಣೆಯ ಮೂಲಕ ತಂದಿದ್ದ. ಅದನ್ನು ಸಂಬಂಧಪಟ್ಟವರಿಗೆ ಹಸ್ತಾಂತರಿಸಿದ ಸ್ನೇಹಿತ ಫಹೀಮ್ ಮತ್ತು ಆತನ ಸ್ನೇಹಿತರಾದ ಮೂವರು ಅಪರಾಧಿಗಳ ಜತೆ ಸೇರಿ ಮಾರಾಟ ಮಾಡಿದ್ದಾನೆ. ಮಾರಾಟ ಮಾಡಿ ಬಂದ ಹಣದ ವಿಚಾರದಲ್ಲಿ ನಫೀರ್ ಮತ್ತು ಫಹೀಮ್ ತಕರಾರು ಮಾಡಿದ್ದಾರೆ ಎನ್ನುವ ದ್ವೇಷದಿಂದ ಸ್ನೇಹಿತರು ಈ ಇಬ್ಬರನ್ನು ಕೊ*ಲೆ ಮಾಡುವ ಒಳಸಂಚು ರೂಪಿಸಿದ್ದರು.
ಚಿನ್ನ ಮಾರಾಟ ಮಾಡಿ ಬಂದ ಹಣದಲ್ಲಿ 2014ರ ಮೇ 15ರಂದು ಕಾಸರಗೋಡು ಜಿಲ್ಲೆಯ ಬೇಡಡ್ಕ ಗ್ರಾಮದ ಎಳನೀರಡ್ಕ ಶಂಕರಂಕಾಡು ಎಂಬಲ್ಲಿ 10 ಸೆಂಟ್ಸ್ ಜಾಗ ಖರೀದಿಸಿ ಅಪರಾಧಿ ಸಫ್ವಾನ್ ಹೆಸರಿನಲ್ಲಿ ನೋಂದಣಿ ಮಾಡಿದ್ದರು. ಅಲ್ಲಿ ಯಾರಿಗೂ ಸಂಶಯ ಬಾರದಂತೆ ತೆಂಗಿನ ಸಸಿಗಳನ್ನು ನೆಡವುದಕ್ಕಾಗಿ ಹೊಂಡಗಳನ್ನು ತೆಗೆದಿದ್ದರು. ಅದರಲ್ಲಿ ಒಂದು ಹೊಂಡವನ್ನು ಸ್ವಲ್ಪ ದೊಡ್ಡದಾಗಿ ತೋಡಲಾಗಿತ್ತು. ಬಳಿಕ ಅತ್ತಾವರದ ಉಮಾಮಹೇಶ್ವರ ದೇವಸ್ಥಾನದ ಹಿಂಬದಿಯಲ್ಲಿ 2014ರ ಜೂ.16ರಂದು ಮನೆಯೊಂದನ್ನು ಬಾಡಿಗೆ ಪಡೆದುಕೊಂಡಿದ್ದರು. ಮರುದಿನ ಮೂವರು ಸೇರಿ ನಫೀರ್ ಮತ್ತು ಫಹೀಮ್‌ನನ್ನು ಅತ್ತಾವರದ ಮನೆಗೆ ಕರೆದುಕೊಂಡು ಬಂದು ಜತೆಯಾಗಿ ವಾಸವಾಗಿದ್ದರು. ಇಬ್ಬರಿಗೂ ಪ್ರತ್ಯೇಕ ಕೊಠಡಿಯೂ ಇತ್ತು. ಇನ್ನೊಂದು ಕೊಠಡಿಯಲ್ಲಿ ಉಳಿದ ಮೂವರು ಇದ್ದರು.
ಜು.1ರಂದು ಬೆಳಗ್ಗೆ ಕೋಣೆಯಲ್ಲಿ ಮಲಗಿದ್ದ ಫಹೀಮ್‌ನನ್ನು ಕುತ್ತಿಗೆಗೆ ಚೂರಿಯಿಂದ ಬಲವಾಗಿ ಇರಿದು ಕೊಲೆ ಮಾಡಿದ್ದಾರೆ. ಬಳಿಕ ಇನ್ನೊಂದು ಕೊಠಡಿಯಲ್ಲಿ ಮಲಗಿದ್ದ ನಫೀರ್‌ಗೂ ಕುತ್ತಿಗೆ, ಭುಜಕ್ಕೆ, ಎದೆಗೆ ಬಲವಾಗಿ ಚೂರಿಯಿಂದ ಇರಿದು ಕೊ*ಲೆ ಮಾಡಿದ್ದಾರೆ. ಆ ಬಳಿಕ ಇಬ್ಬರ ದೇಹದಿಂದಲೂ ರಕ್ತವನ್ನು “ಹಲಾಲ್ ಮಾದರಿ’ಯಲ್ಲಿ ಸಂಪೂರ್ಣವಾಗಿ ಹೊರ ತೆಗೆದಿದ್ದಾರೆ. ಬಳಿಕ ಇಬ್ಬರ ಮೃತದೇಹದ ಕೈಕಾಲುಗಳನ್ನು ಹಗ್ಗದಿಂದ ಮಡಚಿ ಕಟ್ಟಿ, ಪ್ಲಾಸ್ಟಿಕ್ ಗೋಣಿಯಲ್ಲಿ ತುಂಬಿಸಿ ಪ್ಯಾಕ್ ಮಾಡಿ ಬಾಡಿಗೆಗೆ ಪಡೆದುಕೊಂಡಿದ್ದ ಕಾರಿನಲ್ಲಿ ಕಾಸರಗೋಡಿಗೆ ಸಾಗಿಸಿ, ತಾವು ಖರೀದಿಸಿದ್ದ ಜಾಗದಲ್ಲಿ ಮೊದಲೇ ತೋಡಿ ಇಟ್ಟಿದ್ದ ಗುಂಡಿಗೆ ಹಾಕಿ ಮಣ್ಣು ಹಾಕಿ ಮುಚ್ಚಿದ್ದಾರೆ. ರಕ್ತ ಸಿಕ್ತ ಹಾಸಿಗೆಗಳಲ್ಲಿ ಒಂದನ್ನು ತುಂಡರಿಸಿ ಕಾಸರಗೋಡು ತಾಲೂಕಿನ ಚಂದ್ರಗಿರಿ ನದಿಯ ಸೇತುವೆಯ ಕೆಳಗೆ ಹರಿಯುವ ನೀರಿಗೆ ಹಾಕಿ ಸಾಕ್ಷ್ಯ ನಾಶ ಮಾಡಿದ್ದಾರೆ.
ಕೊಲೆ ಮಾಡಿದ ಬಳಿಕ ಮೂವರೂ ಆಗಾಗ್ಗೆ ರೂಮಿನಿಂದ ಕಾರಿನಲ್ಲಿ ಕೆಲವೊಂದು ವಸ್ತುಗಳನ್ನು ಸಾಗಿಸುತ್ತಿದ್ದುದನ್ನು ಅಕ್ಕಪಕ್ಕದ ಮನೆಯವರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗಾಂಜಾ ಅಥವಾ ಇನ್ಯಾವುದಾದರೂ ಕಳ್ಳ ವ್ಯವಹಾರ ನಡೆಸುತ್ತಿರುವ ಬಗ್ಗೆ ಸ್ಥಳೀಯರು ಅನುಮಾನಪಟ್ಟಿದ್ದರು. ಜು. 6ರಂದು ಪಹೀಮ್ ಮಲಗಿದ್ದ ಕೋಣೆಯಲ್ಲಿದ್ದ ಹಾಸಿಗೆ, ತಲೆದಿಂಬು ಇತ್ಯಾದಿಗಳನ್ನು ತುಂಡರಿಸಿ ಕಪ್ಪು ಬಣ್ಣದ ಪ್ಲಾಸ್ಟಿಕ್ ಕಸದ ಚೀಲದಲ್ಲಿ ತುಂಬಿಸಿ ಸಾಕ್ಷ್ಯ ನಾಶಪಡಿಸಲು ಕೊಂಡೊಯ್ಯುತ್ತಿದ್ದಾಗ ಸಂಜೆ 6.35ರ ವೇಳೆಗೆ ಆಗಿನ ಸಿಸಿಬಿ ಪೊಲೀಸ್ ನಿರೀಕ್ಷಕರಾಗಿದ್ದ ವೆಲೆಂಟೈನ್ ಡಿ’ಸೋಜಾ ಅವರು ತಡೆದು ನಿಲ್ಲಿಸಿ ಸೊತ್ತುಗಳನ್ನು ವಶಪಡಿಸಿಕೊಂಡಿದ್ದರು. ಆರೋಪಿಗಳ ಸಹಿತ ಕಾರು ಮತ್ತು ಸೊತ್ತುಗಳನ್ನು ಪಾಂಡೇಶ್ವರ ಠಾಣೆಗೆ ಒಪ್ಪಿಸಿದ್ದರು. ಠಾಣಾಧಿಕಾರಿ ದಿಕನರ ಶೆಟ್ಟಿ ಅವರು ದಸ್ತಗಿರಿ ಮಾಡಿದ್ದರು.
ಠಾಣಾಧಿಕಾರಿ ದಿನಕರ್ ಶೆಟ್ಟಿ ತನಿಖೆ ಪೂರ್ಣಗೊಳಿಸಿ ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯವು ಮೂವರೂ ಆರೋಪಿಗಳನ್ನು ದೋಷಿಗಳೆಂದು ತಿಳಿಸಿತ್ತು. ಶನಿವಾರ ಆರೋಪಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ. ಇಬ್ಬರನ್ನು ಕೊಂದದಕ್ಕಾಗಿ ಮೂವರಿಗೂ ಜೀವಾವಧಿ ಶಿಕ್ಷೆ ಮತ್ತು ತಲಾ 25,000 ರೂ. ದಂಡ, ದಂಡ ಪಾವತಿಸಲು ವಿಫಲರಾದರೆ 6 ತಿಂಗಳ ಸಾದಾ ಸಜೆ, ಕಲಂ 120(ಬಿ) ಭಾ.ದಂ.ಸಂ. ಅಡಿಯಲ್ಲಿ ಜೀವಾವಧಿ ಶಿಕ್ಷೆ ಮತ್ತು ತಲಾ 10,000 ರೂ. ದಂಡ, ದಂಡ ಪಾವತಿಸಲು ವಿಫಲರಾದರೆ 3 ತಿಂಗಳ ಸಾದಾ ಸಜೆ, ಕಲಂ 201 ಭಾ.ದಂ.ಸಂ. ಅಡಿಯಲ್ಲಿ 3 ವರ್ಷ ಸಾದಾಸಜೆ ಮತ್ತು ತಲಾ 5,000 ರೂ. ದಂಡ, ದಂಡ ಪಾವತಿಸಲು ವಿಫಲರಾದರೆ 2 ತಿಂಗಳ ಸಾದಾಸಜೆ ವಿಧಿಸಿ ನ್ಯಾಯಾಲಯವು ತೀರ್ಪು ನೀಡಿದೆ.
ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ದೋಷಿಗಳೆಂದು ತೀರ್ಮಾನಿಸಿ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಸ್ವಾಮಿ ಎಚ್.ಎಸ್.ಅವರು ಎ. 19ರಂದು ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ರಾಜು ಪೂಜಾರಿ ಮತ್ತು ಜುಡಿತ್ ಓಲ್ಲಾ ಮಾರ್ಗರೇಟ್ ಕ್ರಾಸ್ತಾ ವಾದ ಮಂಡಿಸಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post