ಉಳ್ಳಾಲ: ಸೋಮೇಶ್ವರ ಪುರಸಭಾ ವ್ಯಾಪ್ತಿಯಲ್ಲಿ ಅಪಾಯ ದಲ್ಲಿರುವ ಮರಗಳ ರೆಂಬೆಯನ್ನು ತೆಗೆಯಲು ಸೋಮೇಶ್ವರ ಪುರಸಭೆ ಅರಣ್ಯ ಇಲಾಖೆಗೆ ಪಟ್ಟಿ ನೀಡಿದರೆ, ಅವುಗಳ ಬದಲಿಗೆ ಸೋಮೇಶ್ವರ ಕಡಲ ತೀರ ಬದಿಯಲ್ಲಿದ್ದ ಬೆಲೆ ಬಾಳುವ ಗಾಳಿ ಮರಗಳನ್ನು ಕಡಿದು ಸಾಗಿಸಿದ್ದರ ಬಗ್ಗೆ ಸ್ಥಳೀಯವಾಗಿ ಆಕ್ರೋಶ ವ್ಯಕ್ತವಾಗಿದೆ.
ಕಡಲ ತೀರದಲ್ಲಿ ಅಪಾಯದಲ್ಲಿದ್ದ ಎರಡು ಗಾಳಿ ಮರ ಸೇರಿದಂತೆ ಉಚ್ಚಿಲ ಭಗವತಿ ಶಾಲೆ, ಪುರಸಭೆ ಬಳಿ ಇರುವ ಬಸ್ ನಿಲ್ದಾಣದಲ್ಲಿ ಅಪಾಯಕಾರಿಯಾದ ಮರಗಳ ಪಟ್ಟಿ ಮಾಡಿ ರೆಂಬೆ ತೆಗೆಯಲು ಅರಣ್ಯ ಇಲಾಖೆಗೆ ಸೂಚಿಸಿತ್ತು. ಆದರೆ ವಿದ್ಯಾರ್ಥಿಗಳೇ ಹೆಚ್ಚು ನಿಲ್ಲುವ ಸೋಮೇಶ್ವರ ಬಸ್ ನಿಲ್ದಾಣದ ಬಳಿಯ ಅಪಾಯಕಾರಿ ಮರ ಮತ್ತು ಉಚ್ಚಿಲ ಸಂಕೊಳಿಗೆ ಭಗವತಿ ದೇವಸ್ಥಾನ ಬಳಿಯ ಮರಗಳ ರೆಂಬೆ ತೆಗೆಯಬೇಕಿತ್ತು. ಅದರ ಬದಲಾಗಿ ಕಡಲ ತೀರದ ಐದು ಗಾಳಿ ಮರಗಳನ್ನು ಬುಡ ಸಮೇತ ಕಡಿದು, ಸಾಗಿಸಿರುವುದು ಹಲವು ಸಂಶಯಕ್ಕೆ ಕಾರಣವಾಗಿದೆ.
ಸೋಮೇಶ್ವರ ಬೀಚ್ ನಲ್ಲಿರುವ ಅನಧಿಕೃತ ಗೂಡಂಗಡಿ ಮಾಲೀಕನು ತನ್ನ ಅಂಗಡಿಗೆ ಅಪಾಯಕಾರಿ ಆಗಬಹುದಾದ ಗಾಳಿ ಮರಗಳನ್ನೆಲ್ಲವನ್ನು ಕಡಿಸಿಯೇ ಬಿಡಬೇಕೆಂದು ಪಕ್ಷದ ನಾಯಕರ ಹಿಂದೆ ದುಂಬಾಲು ಬಿದ್ದಿದ್ದನಂತೆ. ಸೋಮೇಶ್ವರ ಪುರಸಭೆ ಆಡಳಿತವು ಪುರಸಭಾ ವ್ಯಾಪ್ತಿಯಲ್ಲಿರುವ ಅಪಾಯಕಾರಿ ಕೆಲ ಆಲದ ಮರಗಳ ರೆಂಬೆಗಳು ಮತ್ತು ಸಮುದ್ರ ತೀರದ ಗೂಡಂಗಡಿ ಬಳಿ ಮುರಿದು ನಿಂತಿರುವ ಒಂದು ಗಾಳಿ ಮರವನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆಗೆ ಈ ಹಿಂದೆ ಮನವಿ ಮಾಡಿತ್ತು. ಅರಣ್ಯಾಧಿಕಾರಿಗಳು ಮಾತ್ರ ಜನ ನಿಬಿಡ ಪ್ರದೇಶದಲ್ಲಿ ಅಪಾಯಕಾರಿಯಾಗಿರುವ ಆಳದ ಮರಗಳನ್ನ ಹಾಗೆಯೇ ಬಿಟ್ಟು ಸಮುದ್ರ ತೀರದ ಐದು ಬೆಳೆದು ನಿಂತ ಗಾಳಿ ಮರಗಳನ್ನ ಬುಧವಾರ ಕಡಿದು ರಾತ್ರೋರಾತ್ರಿ ವಾಹನದಲ್ಲಿ ಸಾಗಿಸಿದ್ದಾರೆ.
ಗುರುವಾರವೂ ಕಡಿದ ಮರಗಳನ್ನ ಸಾಗಾಟ ನಡೆಸಲು ಬಂದಾಗ ಸ್ಥಳೀಯರು ತಡೆದಿದ್ದಾರೆ. ಸಮುದ್ರ ತೀರದ ಬಳಿ ಈ ಹಿಂದೆಯೂ ಚರುಮುರಿ ಸ್ಟಾಲ್ ಗೂಡಂಗಡಿಯೊಂದು ಅನೇಕ ವರ್ಷಗಳಿಂದ ವ್ಯಾಪಾರ ನಡೆಸುತ್ತಿದ್ದು, ಅವರಿಗೆ ಗಾಳಿ ಮರಗಳು ಎಂದಿಗೂ ಕಂಟಕವಾಗಿರಲಿಲ್ಲ. ಕೆಲವೇ ತಿಂಗಳ ಹಿಂದೆ ಇಲ್ಲಿ ಗೂಡಂಗಡಿ ನಿರ್ಮಿಸಿದ್ದ ಕಾಂಗ್ರೆಸ್ ಪುಡಾರಿಯೇ ತನ್ನ ಪ್ರಭಾವ ಬಳಸಿ ಗಾಳಿ ಮರಗಳ ಮಾರಣಹೋಮ ನಡೆಸಿರೋದಾಗಿ ಸ್ಥಳೀಯರು ಆರೋಪಿಸಿದ್ದಾರೆ.
ಈ ಕುರಿತು ಪುರಸಭಾ ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿ ಅಪಾಯದಲ್ಲಿರುವ ಮರಗಳ ಪಟ್ಟಿಯನ್ನು ಅರಣ್ಯ ಇಲಾಖೆಗೆ ನೀಡಿದ್ದೆವು. ಆದರೆ ಅವುಗಳನ್ನು ಇದುವರೆಗೂ ತೆರವುಗೊಳಿಸಿಲ್ಲ. ಆದರೆ ಕಡಲ ತೀರದ ಗಾಳಿಮರಗಳನ್ನು ಕಡಿದು ಸಾಗಿಸಲಾಗಿದೆ. ಈ ಸಂಬಂಧ ಪುರಸಭೆಗೂ ಮಾಹಿತಿ ನೀಡಿಲ್ಲ ಹಾಗಾಗಿ ಅರಣ್ಯ ಇಲಾಖೆಗೆ ಸ್ಪಷ್ಟನೆ ಕೋರಲಾಗುವುದು ಎಂದು ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post