ಮಂಗಳೂರು, ಆ.20: ಜೆಪ್ಪು ಮಹಾಕಾಳಿಪಡ್ಪು ರೈಲ್ವೆ ಅಂಡರ್ ಪಾಸ್ ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಹಾಗೂ ವಾಹನ ಸಂಚಾರಕ್ಕೆ ಅಯೋಗ್ಯವಾಗಿರುವ ಪರ್ಯಾಯ ಒಳರಸ್ತೆಯನ್ನು ಕೂಡಲೇ ಸರಿಪಡಿಸುವಂತೆ ಒತ್ತಾಯಿಸಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಮಂಗಳವಾರ ಸಾಮೂಹಿಕ ಧರಣಿ ಸತ್ಯಾಗ್ರಹ ನಡೆಯಿತು.
ಧರಣಿಯನ್ನು ಉದ್ಘಾಟಿಸಿ ಮಾತನಾಡಿದ ಹೋರಾಟ ಸಮಿತಿಯ ಗೌರವಾಧ್ಯಕ್ಷ ದಿಲ್ ರಾಜ್ ಆಳ್ವ, ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಜನತೆಗೆ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುವುದಾಗಿ ವಾಗ್ದಾನವಿತ್ತ ರೈಲ್ವೆ ಇಲಾಖೆ ಮತ್ತು ಮಂಗಳೂರು ಮಹಾನಗರ ಪಾಲಿಕೆಯು, ಮೂರು ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಳಿಸದೆ ಜನಸಾಮಾನ್ಯರಿಗೆ ಮೋಸ ಮಾಡಿದೆ. ಸಾಮಾನ್ಯ ಮೇಸ್ತ್ರಿಗೆ ಇರುವಷ್ಟು ಜ್ಞಾನ ಮಂಗಳೂರಿನ ಅಧಿಕಾರಿಗಳಿಗೆ ಇಲ್ಲವಾಗಿದೆ. ರೈಲ್ವೆ ಇಲಾಖೆಯಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿರುವ ಸಾಮಾನ್ಯ ಜನತೆಯ ಸಂಕಷ್ಟವನ್ನು ಕೇಳುವವರೇ ಇಲ್ಲವಾಗಿದೆ. ಈ ಮೂಲಕ ರೈಲ್ವೆ ಇಲಾಖೆಯ ಸರ್ವಾಧಿಕಾರಿ ವರ್ತನೆಯನ್ನು ಜನತೆ ಒಕ್ಕೊರಲಿನಿಂದ ಖಂಡಿಸಬೇಕಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹೋರಾಟ ಸಮಿತಿಯ ಮುಖಂಡ ಸುನೀಲ್ ಕುಮಾರ್ ಬಜಾಲ್, ಕೂಡಲೇ ಮನಪಾ ಹಾಗೂ ರೈಲ್ವೆ ಇಲಾಖೆ ಸ್ಪಂದಿಸದಿದ್ದಲ್ಲಿ ರೈಲು ರೋಕೋ, ಶಾಸಕರಿಗೆ ಘೆರಾವ್, ಮನಪಾ ಕಚೇರಿಗೆ ಮುತ್ತಿಗೆಯಂತಹ ತೀವ್ರ ರೀತಿಯ ಹೋರಾಟವನ್ನು ನಡೆಸುವುದಾಗಿ ಹೇಳಿದರು.
ಧರಣಿಯನ್ನು ಉದ್ದೇಶಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನಾಯಕ ಕೆ.ಯಾದವ ಶೆಟ್ಟಿ, ಕಾರ್ಪೊರೇಟರ್ ಅಬ್ದುಲ್ ಲತೀಫ್,ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು, ಕಾರ್ಮಿಕ ಮುಖಂಡರಾದ ಜೆ.ಬಾಲಕ್ರಷ್ಣ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ಸೀತಾರಾಮ ಬೇರಿಂಜ, ಸುಕುಮಾರ್ ತೊಕ್ಕೊಟು, ಪ್ರಗತಿಪರ ಚಿಂತಕ ಪ್ರೊ.ಶಿವರಾಮ ಶೆಟ್ಟಿ, ಹೋರಾಟ ಸಮಿತಿಯ ಅಧ್ಯಕ್ಷರಾದ ಜೆ ಇಬ್ರಾಹೀಂ ಜೆಪ್ಪು, ಡಿವೈಎಫ್ಐ ಜಿಲ್ಲಾ ನಾಯಕರಾದ ಸಂತೋಷ್ ಬಜಾಲ್ ಮಾತನಾಡಿದರು.
ಸಾಮೂಹಿಕ ಧರಣಿ ಸತ್ಯಾಗ್ರಹದಲ್ಲಿ ಹೋರಾಟ ಸಮಿತಿಯ ನಾಯಕರಾದ ನಾಗೇಶ್ ಕೋಟ್ಯಾನ್, ಅಸುಂತ ಡಿಸೋಜ, ಭಾರತಿ ಬೋಳಾರ, ಅಶೋಕನ್ ಬೋಳಾರ, ಬಾಬು ಪೂಜಾರಿ, ಕಾರ್ಮಿಕ ಮುಖಂಡರಾದ ಪದ್ಮಾವತಿ ಶೆಟ್ಟಿ, ಜಯಲಕ್ಶ್ಮಿ ಜಪ್ಪಿನಮೊಗರು, ಮಹಿಳಾ ಮುಖಂಡರಾದ ಪ್ರಮೀಳಾ ದೇವಾಡಿಗ, ಯೋಗಿತಾ ಉಳ್ಳಾಲ, ಪ್ರಮೋದಿನಿ ಕಲ್ಲಾಪು, ತುಳುನಾಡ ರಕ್ಷಣಾ ವೇದಿಕೆಯ ಜ್ಯೋತಿಕಾ ಜೈನ್, ಪ್ರಶಾಂತ್ ಕಡಬ, ಸುಕೇಶ್ ಉಚ್ಚಿಲ್, ದಲಿತ ನಾಯಕರಾದ ತಿಮ್ಮಯ್ಯ ಕೊಂಚಾಡಿ, ಮುಂತಾದವರು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post