ಮಂಗಳೂರು: ಇಲ್ಲಿಯ ರಥಬೀದಿ ವೆಂಕಟರಮಣ ದೇವಸ್ಥಾನದ ಆಚಾರ್ಯ ಮಠದ ಶಾರದಾ ಮಹೋತ್ಸವಕ್ಕೆ ಶತಮಾನದ ಸಂಭ್ರಮ. ಶಾರದಾ ಮಾತೆ ಚಿನ್ನದ ಜರಿಯ ಬನಾರಸ್ ಸೀರೆಯಲ್ಲಿ ಕಂಗೊಳಿಸಲಿದ್ದಾಳೆ. ಸಾರ್ವಜನಿಕ ಮಂಗಳೂರು ಶ್ರೀ ಶಾರದಾ ಮಹೋತ್ಸವ ಸಮಿತಿ ನೇತೃತ್ವದಲ್ಲಿ ಸೆ.26ರಿಂದ ಅಕ್ಟೋಬರ್ 5ರವರೆಗೆ ನವರಾತ್ರಿ ಉತ್ಸವ ಜರುಗಲಿದೆ. ಆಚಾರ್ಯ ಮಠದ ಆವರಣದಲ್ಲಿ ಪ್ರತಿಷ್ಠಾಪಿಸುವ ಶಾರದೆಗೆ ಬೆಳ್ಳಿ ಜರಿಯಂಚಿನ ಕೈಮಗ್ಗದ ಬನಾರಸ್ ಸೀರೆ (ಅಂದಾಜು ರೂ. 2 ಲಕ್ಷ ಮೌಲ್ಯ) ತೊಡಿಸುವ ಪದ್ಧತಿ ನಡೆದುಕೊಂಡು ಬರುತ್ತಿದೆ. 1922ರಲ್ಲಿ ಪ್ರಾರಂಭವಾದ ಉತ್ಸವಕ್ಕೆ ಈ ಬಾರಿ 100 ವರ್ಷ ತುಂಬಿದ ಪ್ರಯುಕ್ತ ಸುಮಾರು ರೂ. 8 ಲಕ್ಷ ಮೌಲ್ಯದ ಬಂಗಾರದ ಝರಿಯ ಸೀರೆಯಿಂದ ಶಾರದೆ ವಿಗ್ರಹವನ್ನು ಅಲಂಕರಿಸಲು ಸಮಿತಿ ಮುಂದಾಗಿದೆ. ಈ ಬಾರಿಯೂ ಮಂಗಳೂರಿನ ಕುಲ್ಯಾಡಿಕಾರ್ ಸಿಲ್ಕ್ಸ್‌ನವರೇ ಈ ವೆಚ್ಚದ ಪ್ರಾಯೋಜಕತ್ವ ವಹಿಸಿಕೊಂಡಿದ್ದಾರೆ ಎಂದು ಶಾರದಾ ಮಹೋತ್ಸವ ಸಮಿತಿಯ ಮಾಧ್ಯಮ ಸಂಯೋಜಕ ಮಂಜು ನಿರೇಶ್ವಾಲ್ಯ ತಿಳಿಸಿದರು. ‘ವಾರಾಣಸಿಯ ಜ್ಞಾನವಾಪಿ ಮಸೀದಿ ಸಮೀಪ ನೆಲೆಸಿರುವ ಮುಸ್ಲಿಂ ಕುಟುಂಬವೊಂದು ಈ ಸೀರೆಯನ್ನು ಸಿದ್ಧಪಡಿಸುತ್ತಿದೆ. ಈ ನೇಕಾರರ ಕುಟುಂಬದ ಐದನೇ ತಲೆಮಾರಿನ ಸದಸ್ಯರು ಇದನ್ನು ತಯಾರಿಸುತ್ತಿದ್ದು, ನೇಕಾರಿಕೆಯಲ್ಲಿ ಪರಿಣತಿ ಹೊಂದಿರುವ ಕಾರಣ, ಸೀರೆಯ ಕಸೂತಿಯನ್ನು ಪ್ರತಿವರ್ಷ ಇವರಿಂದಲೇ ಮಾಡಿಸಲಾಗುತ್ತದೆ’ ಎಂದು ಅವರು ವಿವರಿಸಿದರು.
ಬಂಗಾರದ ವೀಣೆ : ‘ಪ್ರತಿವರ್ಷ ನಕ್ಷತ್ರದ ಆಧಾರದ ಮೇಲೆ ಐದು ಅಥವಾ ಆರು ದಿನ ಮಾತ್ರ ದೇವಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿತ್ತು. ಈ ಬಾರಿ ನವರಾತ್ರಿಯ ಮೊದಲ ದಿನದಿಂದ 10 ದಿನಗಳವರೆಗೆ ಉತ್ಸವ ನಡೆಯಲಿದೆ. ನಿತ್ಯ ದೇವಿಯ ಒಂದೊಂದು ಅವತಾರ ಬಿಂಬಿಸುವ ಅಲಂಕಾರ ಮಾಡಲಾ ಗುತ್ತದೆ. ಅ. 5ರಂದು ವಿಶೇಷ ದೀಪಾಲಂಕಾರ ನಡೆಯಲಿದೆ. ಭಕ್ತರು ನೀಡಿದ ನೆರವಿನಲ್ಲಿ ಬಂಗಾರದ ವೀಣೆ, ನವಿಲು ಸೇರಿದಂತೆ ಸುಮಾರು ರೂ. 200 ಕೆ.ಜಿ ಚಿನ್ನದ ಸಾಮಗ್ರಿಗಳು, ರಜತ ಪೀಠ, ಪ್ರಭಾವಳಿ, ರೂ. 10 ಲಕ್ಷ ವೆಚ್ಚದಲ್ಲಿ ಮರದಿಂದ ತಯಾರಿಸಿದ ಹೊಸ ಮಂಟಪವನ್ನು ದೇವಿಗೆ ಅರ್ಪಿಸಲಾಗುವುದು’ ಎಂದು ಶಾರದಾ ಮಹೋತ್ಸವ ಸಮಿತಿಯ ಕಾರ್ಯದರ್ಶಿ ಬಾಲಕೃಷ್ಣ ಶೆಣೈ ತಿಳಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post