ಮಂಗಳೂರು, ಸೆ 20: ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಗುರುತಿಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ಮಂಗಳೂರು ನಗರ ಪೊಲೀಸ್ ಇಲಾಖೆಗೆ ಎರಡು ಸ್ಕಾರ್ಪಿಯೋ ವಾಹನವನ್ನು ನೀಡಲಾಗಿದ್ದು, ಅವುಗಳ ಹಸ್ತಾಂತರ ಸಮಾರಂಭ ಬ್ಯಾಂಕಿನ ಆವರಣದಲ್ಲಿ ಶನಿವಾರ ನಡೆಯಿತು.
ವಾಹನಗಳನ್ನು ಸ್ವೀಕರಿಸಿದ ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಇಲಾಖೆ ಪರವಾಗಿ ಬ್ಯಾಂಕಿನ ಅಧ್ಯಕ್ಷರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಸದ್ಯಕ್ಕೆ ನಮ್ಮ ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಸೂಕ್ತ ವಾಹನಗಳು ಇದ್ದು ನಮ್ಮ ಕಾರ್ಯಾಚರಣೆಗೆ ಬಳಸಿಕೊಳ್ಳುತ್ತಿದ್ದೇವೆ. ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಪ್ರಗತಿ ಹೊಂದಿದೆ. ಸಾರ್ವಜನಿಕರಿಗೆ ಇನ್ನಷ್ಟು ಉತ್ತಮವಾಗಿ ಕೆಲಸ ಮಾಡಲು ಸಾರ್ವಜನಿಕ ಸಹಭಾಗಿತ್ವದಿಂದ ಸಿಗುವ ಇಂತಹ ವಾಹನಗಳ ಸವಲತ್ತುಗಳನ್ನು ಬಳಸಿಕೊಂಡು ಕೆಲಸ ಮಾಡುತ್ತೇವೆ ಎಂದರು.
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ಇದರ ಮುಖ್ಯ ಮಹಾಪ್ರಬಂಧಕರಾದ ಡಾ.ಸುರೇಂದ್ರ ಬಾಬು ಮಾತನಾಡಿ ಸಹಕಾರಿ ಕ್ಷೇತ್ರದಲ್ಲಿ ಇಷ್ಟೊಂದು ಪ್ರಗತಿ ದಾಖಲಿಸಿರುವ ಕ್ಷೇತ್ರ ಇದಾಗಿದೆ ಎಂದು ಬಣ್ಣಿಸಿದರು. ಇಂತಹ ಕೆಲಸಗಳನ್ನು ಮಾಡಲು ಬ್ಯಾಂಕು ಕೂಡಾ ಪ್ರಗತಿ ಹೊಂದಿರಬೇಕು, ಜೊತೆಗೆ ಸಾಮಾಜಿಕ ಕಳಕಳಿ ಹೊಂದಿರುವ ಅದರ ಬದ್ಧತೆ ಶ್ಲಾಘನೀಯವಾಗಿದೆ ಎಂದರು. ಡಾ ಎಂ ಎನ್ ರಾಜೇಂದ್ರಕುಮಾರ್ ಅವರು ಸದಾ ಬಡವರ ಬಗ್ಗೆ, ಪ್ರಗತಿ ಬಗ್ಗೆ ಯೋಚನೆ ಮಾಡುತ್ತಿರುತ್ತಾರೆ ಎಂದರು. ಸಹಕಾರಿ ಕ್ಷೇತ್ರದ ಪ್ರಗತಿಯಲ್ಲಿ ಕರ್ನಾಟಕದ ಬ್ಯಾಂಕುಗಳು ದೇಶದಲ್ಲೇ ಅತ್ಯುತ್ತಮವಾಗಿವೆ ಎಂದು ನುಡಿದರು.
ಇದೇ ವೇಳೆ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮತ್ತು ಮಹಾಪ್ರಬಂಧಕ ಡಾ ಸುರೇಂದ್ರ ಬಾಬು ಅವರನ್ನು ಗೌರವಿಸಲಾಯಿತು. ಅಧ್ಯಕ್ಷತೆಯನ್ನು ವಹಿಸಿದ್ದ ಎಸ್‌ಸಿಡಿಸಿಸಿ ಬ್ಯಾಂಕ್ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ, ಇದೊಂದು ಅರ್ಥಪೂರ್ಣವಾದ ಕಾರ್ಯಕ್ರಮ. ದಕ್ಷಿಣ ಕನ್ನಡ ಜಿಲ್ಲೆ ಬ್ಯಾಂಕಿಂಗ್ ತವರೂರು ಆಗಿದ್ದು, ಎಲ್ಲಾ ಬ್ಯಾಂಕುಗಳು ವಿಲಿನೀಖರಣ ಆದ ಬಳಿಕ ಮೂಲ ಸ್ವರೂಪ ಹಾಳಾಗಿದೆ. ಆದರೆ ಸಹಕಾರಿ ಬ್ಯಾಂಕುಗಳು ಜನರ ನಾಡಿಮಿಡಿತವನ್ನು ಅರಿತುಕೊಂಡು ಕೆಲಸ ಮಾಡುತ್ತಿವೆ. ದೇಶದ ಭದ್ರತೆಗಾಗಿ ಸೈನಿಕರಿದ್ದಾರೆ. ಆದರೆ ನಾಗರಿಕರ ಸುರಕ್ಷತೆಗೆ ಪೊಲೀಸರು ಇದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಡಿಸಿಸಿ ಮಿಥುನ್, ನವೋದಯ ಚಾರಿಟೇಬಲ್ ಟ್ರಸ್ಟ್‌ನ ಸದಸ್ಯರು, ಎಸ್‌ಸಿಡಿಸಿಸಿ ಬ್ಯಾಂಕಿನ ಹಿರಿಯ ಅಧಿಕಾರಿಗಳು, ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post