ಮಂಗಳೂರು: ಅಪ್ರಾಪ್ತೆಗೆ ಶಾಲೆಯ ಶಿಕ್ಷಕನೇ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪ ಸಾಬೀತಾಗಿದ್ದು, ಶಿಕ್ಷಕನಿಗೆ 5 ವರ್ಷ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಪೋಕ್ಸೋ ಎಫ್‌ಟಿಎಸ್‌ಸಿ-1) ಆದೇಶ ನೀಡಿದೆ.
ಮೂಲತಃ ಹತ್ಯಡ್ಕ ಅರಸಿನಮಕ್ಕಿ ಪಡ್ಡಾಯಿಬೆಟ್ಟು, ಕಲ್ಲಮುಂಡ್ಕೂರಿನಲ್ಲಿ ವಾಸವಾಗಿದ್ದ ಗುರುವ ಮೊಗೇರ ಯಾನೆ ಗುರುವ ಎಂ.ಪಿ. (49) ಶಿಕ್ಷೆಗೆ ಒಳಗಾದ ಶಾಲಾ ಶಿಕ್ಷಕ. ಆತ ವಿದ್ಯಾರ್ಥಿನಿಯರಿಗೆ ರಜೆ ಬೇಕಿದ್ದರೆ, ಪಾಠಕ್ಕೆ ಸಂಬಂಧಪಟ್ಟ ಏನಾದರೂ ಸಂದೇಹಗಳ ಕೇಳಲು ಹೋದಾಗ ಶಾಲೆಯಯಲ್ಲಿರುವ ಪ್ರತ್ಯೇಕ ಕೊಠಡಿಗೆ ಬರಲು ಹೇಳುತ್ತಿದ್ದ. ಅಲ್ಲಿ ಆತ ಲೈಂಗಿಕ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ವಿದ್ಯಾರ್ಥಿನಿಯರು ಶಾಲೆಯ ಮುಖ್ಯ ಶಿಕ್ಷಕರಲ್ಲಿ ದೂರು ನೀಡಿದ್ದರು.
ವಿದ್ಯಾರ್ಥಿನಿಯೊಬ್ಬಳಿಗೆ ಎರಡು ಬಾರಿ ಲೈಂಗಿಕ ಕಿರುಕುಳ ನೀಡಿದ್ದು, ಆಕೆ ನೀಡಿದ ದೂರಿನಂತೆ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಪೋಕ್ಸೋ ಎಫ್‌ಟಿಎಸ್‌ಸಿ-1) ನ್ಯಾಯಾಧೀಶರಾದ ಡಿ.ವಿನಯ್ ಸಮಗ್ರ ವಿಚಾರಣೆ ನಡೆಸಿ ಆದೇಶ ನೀಡಿದ್ದಾರೆ. ಸಂತ್ರಸ್ತೆ ಪರವಾಗಿ ವಿಶೇಷ ಸರಕಾರಿ ಅಭಿಯೋಜಕರಾದ ಸಹನಾದೇವಿ ಬೋಳೂರು ವಾದ ಮಂಡಿಸಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post