ಉಳ್ಳಾಲ, ಅ.20 : ಕುಂಪಲದ ಬಾಡಿಗೆ ಮನೆಯೊಂದರಲ್ಲಿ ಹದಿನೇಳರ ಅಪ್ರಾಪ್ತೆಯ ಮೇಲೆ ಆಕೆಯ ಮಲ ತಂದೆಯೇ ನಿರಂತರ ಅತ್ಯಾಚಾರವೆಸಗಿರುವ ಹೇಯ ಕೃತ್ಯವು ತಡವಾಗಿ ಬೆಳಕಿಗೆ ಬಂದಿದ್ದು, ಉಳ್ಳಾಲ ಪೊಲೀಸರು ಕಾಮುಕ ತಂದೆಯನ್ನ ಪೋಕ್ಸೊ ಕಾಯ್ದೆಯಡಿ ಬಂಧಿಸಿದ್ದಾರೆ.
ಪ್ರಸ್ತುತ ಉಳ್ಳಾಲ ಮಾಸ್ತಿಕಟ್ಟೆಯ ಬಾಡಿಗೆ ಮನೆಯಲ್ಲಿ ನೆಲೆಸಿರುವ ಅಮೀರ್(40) ಎಂಬಾತನೇ ಮಗಳ ಮೇಲೆ ಅತ್ಯಾಚಾರವೆಸಗಿದ ಆರೋಪಿಯಾಗಿದ್ದಾನೆ. ಸಂತ್ರಸ್ತೆ ಮೂರು ವರ್ಷದವಳಾಗಿದ್ದಾಗಳೇ ಆಕೆಯ ತಂದೆ ಅಪಘಾತವೊಂದರಲ್ಲಿ ಮೃತಪಟ್ಟಿದ್ದರು. ಸಂತ್ರಸ್ತೆಗೆ ಆರು ವರ್ಷ ತುಂಬಿದಾಗ ಆಕೆಯ ತಾಯಿ ಪಾವೂರಿನ ಅಮೀರ್ ಎಂಬಾತನನ್ನ ಮದುವೆಯಾಗಿ ಆರಂಭದಲ್ಲಿ ಕೆ.ಸಿ ರೋಡ್ ನ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ಬಳಿಕ ಕುಂಪಲ ಪ್ರದೇಶದ ಬಾಡಿಗೆ ಮನೆಯೊಂದರಲ್ಲಿ ಸಂತ್ರಸ್ತೆಯ ಕುಟುಂಬ ನೆಲೆಸಿತ್ತು.
ಸಂತ್ರಸ್ತೆ ಏಳು ವರ್ಷದ ಬಾಲಕಿಯಾಗಿದ್ದಾಗಲೇ ರಾತ್ರಿ ವೇಳೆ ತಾಯಿ ಜೊತೆ ಮಲಗಿದ್ದ ಸಂದರ್ಭದಲ್ಲಿ ಮಲ ತಂದೆ ಅಮೀರ್ ಮಗಳ ಮೇಲೆರಗಿದ್ದ. ಈ ಸಂದರ್ಭ ಅಪ್ರಾಪ್ತೆಯು ಕಿರುಚಾಡಿದಾಗ ಆಕೆಯ ಬಾಯಿಗೆ ತಲೆದಿಂಬು ಇಟ್ಟು ಬಲತ್ಕಾರದಿಂದ ಅತ್ಯಾಚಾರವೆಸಗಿದ್ದ. ಅಕ್ಕರೆಯಿಂದ ಮುದ್ದಾಡಬೇಕಿದ್ದ ತಂದೆಯೇ ತನ್ನ ಮೇಲೆ ಅತ್ಯಾಚಾರವೆಸಗಿದ ಕಹಿ ಘಟನೆಯ ಬಳಿಕ ಸಂತ್ರಸ್ತೆಯು ಉಳ್ಳಾಲದ ಮುಕ್ಕಚ್ಚೇರಿಯಲ್ಲಿರುವ ಅಜ್ಜಿ ಮನೆಯಲ್ಲೇ ನೆಲೆಸಿ ಅಲ್ಲಿಂದಲೇ ಶಾಲೆಗೆ ಹೋಗುತ್ತಿದ್ದಳು. ಕೆಲ ಸಮಯದ ಬಳಿಕ ಅಪ್ರಾಪ್ತೆಯು ತಾಯಿಯ ಒತ್ತಾಸೆ ಮೇರೆಗೆ ಮಲತಂದೆ ಇರುವಾಗಲೇ ಕುಂಪಲದ ಬಾಡಿಗೆ ಮನೆಗೆ ಬಂದು ತಾಯಿಯ ಯೋಗ ಕ್ಷೇಮ ವಿಚಾರಿಸುತ್ತಿದ್ದಳು. ಈ ವೇಳೆ ಕಾಮುಕ ಅಮೀರ್ ಸಮಯ ಸಾಧಿಸಿ ಮಗಳಿಗೆ ಹನ್ನೆರಡು ವರುಷ ತುಂಬುವವರೆಗೂ ನಿರಂತರ ಅತ್ಯಾಚಾರ ಎಸಗಿದ್ದನೆನ್ನಲಾಗಿದೆ.
ಅಪ್ರಾಪ್ತೆಯು ತನಗೆ ಹನ್ನೆರಡು ವರುಷ ತುಂಬಿದಾಗ ಅಪ್ಪ ತನ್ನ ಮೇಲೆ ನಿರಂತರ ಅತ್ಯಾಚಾರವೆಸಗಿದ ವಿಚಾರವನ್ನ ತಾಯಿಯಲ್ಲಿ ತಿಳಿಸಿದ್ದಳು. ತಾಯಿಯು ಮನೆಯ ಮರ್ಯಾದಿ ಹರಾಜಾಗುತ್ತದೆಂದು ಹೇಳಿ ಮಗಳನ್ನ ಸುಮ್ಮನಾಗಿಸಿದ್ದಳು. ಕಳೆದ ಅಕ್ಟೋಬರ್ 18ರ ಶನಿವಾರ ಅಪ್ರಾಪ್ತೆಯು ಮಾನಸಿಕವಾಗಿ ನೊಂದುಕೊಂಡಿದ್ದು, ಆಕೆಯನ್ನ ಮನೆಯವರು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಈ ವೇಳೆ ಬಾಲಕಿಯನ್ನ ಕೌನ್ಸೆಲಿಂಗ್ ನಡೆಸಿದ ವೈದ್ಯರಲ್ಲಿ ತನ್ನ ಮೇಲೆ ಮಲ ತಂದೆ ನಡೆಸಿರುವ ನಿರಂತರ ಅತ್ಯಾಚಾರದ ಬಗ್ಗೆ ಬಾಲಕಿ ಹೇಳಿಕೊಂಡಿದ್ದಾಳೆ. ವೈದ್ಯಕೀಯ ದಾಖಲೆ ಆಧರಿಸಿ ಕಾರ್ಯ ಪೃವೃತ್ತರಾದ ಉಳ್ಳಾಲ ಪೊಲೀಸರು ಭಾನುವಾರ ಆರೋಪಿ ಅಮೀರ್ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post