ಪುತ್ತೂರು: ಪುತ್ತೂರು ಶಾಸಕ ಅಶೋಕ್ ರೈ ನೇತೃತ್ವದಲ್ಲಿ ನಡೆದ ”ಅಶೋಕ ಜನಮನ -2025” ಎಂಬ ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ, 11ಕ್ಕೂ ಅಧಿಕ ಮಂದಿ ಮಹಿಳೆಯರು ಹಾಗೂ ಮಕ್ಕಳು ಅಸ್ವಸ್ಥಗೊಂಡ ಘಟನೆ ಪುತ್ತೂರಿನ ಕೊಂಬೆಟ್ಟಿನ ತಾಲೂಕು ಕ್ರೀಡಾಂಗಣದಲ್ಲಿ ನಡೆದಿದೆ.
ಕ್ರೀಡಾಂಗಣದ ಸಾಮರ್ಥ್ಯಕ್ಕಿಂತ ಅಧಿಕ ಮಂದಿ ಭಾಗಿಯಾಗಿದ್ದರಿಂದ ನೂಕುನುಗ್ಗಲು ಉಂಟಾಗಿ ಆಮ್ಲಜನಕ ಕೊರತೆಯಿಂದ ಕೆಲವರು ಅಸ್ವಸ್ಥರಾಗಿದ್ದಾರೆ. ಸಿಎಂ ಕಾರ್ಯಕ್ರಮವಾಗಿದ್ದರಿಂದ ಪೊಲೀಸ್ ಪ್ರೊಟೋಕಾಲ್ ಪ್ರಕಾರ ನೀರಿನ ಬಾಟಲಿಗಳನ್ನು ವಿತರಣೆ ಮಾಡಿರಲಿಲ್ಲ. ಆದ್ದರಿಂದ, ಬಿಸಿಲಿನ ಧಗೆಗೆ ಜನರು ಕುಡಿಯಲು ನೀರೂ ಸಿಗದೇ ಪರದಾಟ ನಡೆಸಿದ್ದರು.
ದೂರ ದೂರದಿಂದ ಬಂದಿದ್ದ ಜನರನ್ನು ಸಭಾಂಗಣ ಪ್ರವೇಶ ಸಂದರ್ಭದಲ್ಲಿ ಜೊತೆಗೆ ನೀರಿನ ಬಾಟಲ್ ಒಯ್ಯುವುದಕ್ಕೂ ಪೊಲೀಸರು ಬಿಟ್ಟಿರಲಿಲ್ಲ. ಹೀಗಾಗಿ ಶುಗರ್, ಬಿಪಿ ತೊಂದರೆ ಇದ್ದವರು ಮಧ್ಯಾಹ್ನ ಕಳೆದಾಗ ಅಸ್ವಸ್ಥರಾಗಿದ್ದು, 8-10 ಮಹಿಳೆಯರನ್ನು ಪೊಲೀಸರು ಆಂಬುಲೆನ್ಸ್ ನಲ್ಲಿ ಸರಕಾರಿ ಆಸ್ಪತ್ರೆಗೆ ರವಾನಿಸಿದರು. ಮೂರು ಗಂಟೆಯ ನಂತರ ಊಟ, ಗಿಫ್ಟ್ ಕೊಡಲು ಆರಂಭಿಸಿದಾಗ ಮತ್ತೆ ನೂಕುನುಗ್ಗಲು ಉಂಟಾಯಿತು. ಹಸಿದಿದ್ದವರು ತಾಮುಂದು, ನಾಮುಂದು ಎನ್ನುವಂತೆ ನುಗ್ಗತೊಡಗಿದ್ದು ಪೊಲೀಸರಿಗೂ ನಿಯಂತ್ರಣ ಮಾಡಲಾಗದ ಸ್ಥಿತಿಯಾಗಿತ್ತು.

ಅಸ್ವಸ್ಥಗೊಂಡವರು ಯೋಗಿತ(20), ಸಭಾ ಮಾಡಾವು(20), ಆಮೀನಾ ಪಾಟ್ರಕೋಡಿ(56), ನೇತ್ರಾವತಿ ಇರ್ದೆ(37), ಲೀಲಾವತಿ ಕಡಬ(50), ವಸಂತಿ ಬಲ್ನಾಡ್ (53), ಕುಸುಮ( 62), ರತ್ನವತಿ ಪೆರಿಗೇರಿ (67), ಅಫೀಲಾ ಪಾಟ್ರಕೋಡಿ (20), ಸ್ನೇಹಪ್ರಭಾ (41) ಹಾಗೂ ಜಸೀಲಾ(30)

ಇದೇ ವೇಳೆ, ಮಕ್ಕಳನ್ನು ಕರೆತಂದವರು ದಿಕ್ಕಾಪಾಲಾಗಿದ್ದರು. ಹಲವು ತಾಯಂದಿರು ಮಕ್ಕಳು ಕಾಣದೆ ಪ್ರಯಾಸಪಟ್ಟರು. ವೇದಿಕೆಯಲ್ಲಿದ್ದವರು ಮಕ್ಕಳು ಕಾಣೆಯಾಗಿ ಬಂದವರ ಅಳಲು ಕೇಳುತ್ತ ಗೊಂದಲದ ಸ್ಥಿತಿಯಾಗಿತ್ತು. ಮುಖ್ಯಮಂತ್ರಿ ಸ್ಥಳದಿಂದ ನಿರ್ಗಮಿಸುತ್ತಲೇ 3.30ರ ಸುಮಾರಿಗೆ ಎಲ್ಲಿಂದಲೋ ಆವರಿಸಿಕೊಂಡ ರೀತಿ ಮಳೆರಾಯ ನುಗ್ಗಿ ಬಂದಿದ್ದ. ಭಾರೀ ಮಳೆಯಾಗಿದ್ದರಿಂದ ಜನರು ಶೀಟ್ ಹಾಕಿದ್ದ ಸಭಾಂಗಣದಿಂದ ಹೊರಕ್ಕೆ ಹೋಗಲಾಗದೆ ಪರದಾಡಿದರು.
ಶಾಸಕ ಅಶೋಕ್ ರೈ ಮಾಲೀಕತ್ವದ ರೈ ಎಸ್ಟೇಟ್ ಮತ್ತು ಚಾರಿಟಬಲ್ ಟ್ರಸ್ಟ್ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ದೀಪಾವಳಿ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತಟ್ಟೆ, ವಸ್ತ್ರ ಹಂಚುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಿಎಂ ಸಿದ್ದರಾಮಯ್ಯ ಈ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದರು.
Discover more from Coastal Times Kannada
Subscribe to get the latest posts sent to your email.








Discussion about this post