ಉಡುಪಿ : ಹೆಬ್ರಿ ತಾಲೂಕಿನ ಕಬ್ಬಿನಾಲೆ ಸಮೀಪದ ಪೀತಬೈಲು ಎಂಬಲ್ಲಿ ನಡೆಸಿದ ಎನ್‌ಕೌಂಟರ್‌ನಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ವಿಕ್ರಂ ಗೌಡ(46) ಮೃತಪಟ್ಟಿದ್ದಾರೆ ಎಂದು ರಾಜ್ಯ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ರೂಪಾ ಡಿ ತಿಳಿಸಿದ್ದಾರೆ.
ಮಂಗಳವಾರ ಎನ್‌ಕೌಂಟರ್ ನಡೆದ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಪೊಲೀಸರು ಹಾಗೂ ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಇದರಲ್ಲಿ ವಿಕ್ರಂ ಗೌಡ ಎನ್‌ಕೌಂಟರ್‌ನಲ್ಲಿ ಹತರಾಗಿದ್ದಾರೆ. ವಿಕ್ರಂ ಗೌಡ ವಿರುದ್ದ ಕೇರಳದಲ್ಲಿ 19 ಸೇರಿದಂತೆ, ಕೊಲೆ, ಸುಲಿಗೆ ಸಂಬಂಧ ಒಟ್ಟು 61 ಪ್ರಕರಣಗಳು ದಾಖಲಾಗಿವೆ. ನಕ್ಸಲ್ ನಿಗ್ರಹ ಪಡೆ ಈ ಕಾರ್ಯಾಚರಣೆ ನಡೆಸಿದೆ ಎಂದಿದ್ದಾರೆ.
ನಕ್ಸಲ್ ನಿಗ್ರಹ ಪಡೆಯ ಪೊಲೀಸ್ ಅಧೀಕ್ಷಕ ಜಿತೇಂದ್ರ ದಯಾಮಾ ನೇತೃತ್ವದಲ್ಲಿ ಅರಣ್ಯದಲ್ಲಿ ಸತತ 10 ದಿನಗಳಿಂದ ನಿರಂತರ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗಿದೆ. ಈ ಸಂಬಂಧ ನ. 10 ರಿಂದ ನಿರಂತರ ಪ್ರಯತ್ನ ಜಾರಿಯಲ್ಲಿತ್ತು. ನಕ್ಸಲರ ಬಗ್ಗೆ ಮಾಹಿತಿ ಕಲೆ ಹಾಕಿ ಯಶಸ್ವಿ ಕಾರ್ಯಾಚರಣೆ ನಡೆಸಿದ್ದೇವೆ ಎಂದು ಹೇಳಿದ್ದಾರೆ.
ಕಪ್ಪು ಶರ್ಟ್, ಬರ್ಮುಡಾ ಧರಿಸಿದ್ದ : ಸ್ಥಳದಲ್ಲಿ ನಿನ್ನೆ ರಾತ್ರಿಯಿಂದಲೂ ಹೆಬ್ರಿ, ಅಜೆಕಾರು, ಕಾರ್ಕಳ ಠಾಣೆಯ ಪೊಲೀಸರು ಬೀಡು ಬಿಟ್ಟಿದ್ದಾರೆ. ಭಾರೀ ಭದ್ರತೆಯೊಂದಿಗೆ ನಕ್ಸಲ್ ನಾಯಕನ ಶವವನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಒಯ್ದಿದ್ದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ವಿಕ್ರಂ ಗೌಡ ಕಪ್ಪು ಶರ್ಟ್ ಮತ್ತು ಬರ್ಮುಡಾ ಧರಿಸಿದ್ದ. ಕಟ್ಟುಮಸ್ತಾದ ದೇಹ ಇತ್ತು. ದೇಹದ ಯಾವ ಭಾಗಕ್ಕೆ ಗುಂಡು ತಗಲಿದೆ ಎನ್ನುವುದು ಗೊತ್ತಾಗಿಲ್ಲ, ರಾತ್ರಿ ವೇಳೆ ಗುಂಡಿನ ಚಕಮಕಿ ಆಗಿದ್ದು ಎಷ್ಟು ಗುಂಡು ಹೊಕ್ಕಿದೆ ಎನ್ನುವ ಬಗ್ಗೆ ಪತ್ತೆ ಆಗಬೇಕಷ್ಟೆ. ಆತನ ಜೊತೆಗೆ ಯಾರಿದ್ದರು ಎನ್ನುವುದು ತಿಳಿದುಬಂದಿಲ್ಲ. ಜೊತೆಗೆ ನಾಲ್ವರು ಇದ್ದರು ಎನ್ನುವ ಮಾಹಿತಿ ಇದೆ. ಶವ ಒಯ್ದ ಸಂದರ್ಭದಲ್ಲಿ ಮರದಿಂದ ತಯಾರಿಸಿದ್ದ ತಾತ್ಕಾಲಿಕ ಸ್ಟ್ರಚರ್ ನಲ್ಲಿ ದೇಹವನ್ನು ಕಟ್ಟಿದ್ದು, ದಪ್ಪ ಕಂಬಳಿಯಿಂದ ಸುತ್ತಿಡಲಾಗಿತ್ತು.
ಕಬಾನಿ ದಳಂ 2 ತಂಡ ಮುನ್ನಡೆಸುತ್ತಿದ್ದರು: ಈ ಕಾರ್ಯಾಚರಣೆಗೆ ಬೆಂಗಳೂರಿನ ಕೆಎಸ್ಐಎಸ್ಎಫ್ನ 75 ಮತ್ತು ಶಿವಮೊಗ್ಗದಿಂದ 25 ಮಂದಿ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ಈ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ವಿಕ್ರಂ ಗೌಡ ನಕ್ಸಲರ ಕಬಾನಿ ದಳಂ 2 ಎಂಬ ತಂಡವನ್ನು ಮುನ್ನಡೆಸುತ್ತಿದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post