ಬೆಂಗಳೂರು, ನ 20: ಎಟಿಎಂಗಳಿಗೆ ಹಣ ಪೂರೈಸುತ್ತಿದ್ದ ವಾಹನವನ್ನು ಆರ್‌ಬಿಐ ಅಧಿಕಾರಿಗಳ ಸೋಗಿನಲ್ಲಿ ಅಡ್ಡಗಟ್ಟಿ ಬರೋಬ್ಬರಿ 7 ಕೋಟಿ 11 ಲಕ್ಷ ರೂಪಾಯಿ ದೋಚಿದ್ದ ಪ್ರಕರಣ ವೆಬ್ ಸೀರೀಸ್ ಪ್ರೇರಿತವಾ ಎನ್ನುವ ಅನುಮಾನ ವ್ಯಕ್ತವಾಗಿದೆ. ಆರೋಪಿಗಳು ದರೋಡೆಗೆ ಪಕ್ಕಾ ಪ್ಲ್ಯಾನ್ ಮಾಡಿಯೇ ಬಂದಿದ್ದು, ಆ ಪ್ರೀ ಪ್ಲಾನ್ ಪ್ರಕಾರ ಮೂರು ಠಾಣೆಗೆ ಸೇರುವ ಸ್ಥಳದಲ್ಲಿ ವಾಹನ ಬಿಡುವುದು ಕೂಡ ಯೋಜನೆ ಆಗಿತ್ತು ಎಂಬ ಅನುಮಾನ ತನಿಖೆ ವೇಳೆ ವ್ಯಕ್ತವಾಗಿದೆ.
ಸರ್ಕಾರಿ ವಾಹನದಂತೆ ಸ್ಟಿಕ್ಕರ್ ಹಾಕಿದ್ದ ಇನ್ನೋವಾ ಕಾರಿನಲ್ಲಿ ಬಂದಿದ್ದ 5ರಿಂದ 6 ಜನರಿದ್ದ ದರೋಡೆಕೋರರ ಗುಂಪು ಸೌತ್ ಎಂಡ್ ಸರ್ಕಲ್ ಬಳಿ ಎಟಿಂಎಗೆ ಹಣ ತುಂಬಿಸಿ ಹೊರಟಿದ್ದ ಕಸ್ಟೋಡಿಯನ್ ವಾಹನವನ್ನು ತಡೆದಿದ್ದಾರೆ. ಬಳಿಕ ತಾವು ಕೇಂದ್ರ ತನಿಖಾ ಸಂಸ್ಥೆಯ ಅಧಿಕಾರಿಗಳು ಹಾಗೂ ಆರ್‌ಬಿಐ ಎನ್ನುತ್ತಾ ಕಸ್ಟೋಡಿಯನ್ ವಾಹನದಲ್ಲಿದ್ದ ಗನ್‌ಮ್ಯಾನ್ ಸಹಿತ ಎಲ್ಲ ಸಿಬ್ಬಂದಿಯನ್ನು ಕೆಳಗಿಳಿಸಿದ್ದಾರೆ. ಚಾಲಕನನ್ನು ಮಾತ್ರ ಕೂರಿಸಿಕೊಂಡು ಜಯದೇವ ಆಸ್ಪತ್ರೆ ಕಡೆಯಿಂದ ಡೈರಿ ಸರ್ಕಲ್ ಕಡೆಗೆ ವಾಹನವನ್ನು ಕರೆದೊಯ್ದಿದ್ದಾರೆ. ಫ್ಲೈ ಓವರ್ ಮೇಲೆ ಕಸ್ಟೋಡಿಯನ್ ವಾಹನವನ್ನು ನಿಲ್ಲಿಸಿ ಚಾಲಕನನ್ನು ಬೆದರಿಸಿ, 7.11 ಕೋಟಿ ರೂ ಹಣವಿದ್ದ ಪೆಟ್ಟಿಗೆಯನ್ನು ತಮ್ಮ ಕಾರಿಗೆ ಹಾಕಿಕೊಂಡು ಪರಾರಿಯಾಗಿದ್ದಾರೆ. ದರೋಡೆ ವರದಿಯಾಗುತ್ತಿದ್ದಂತೆ ಸ್ಥಳಕ್ಕೆ ಬೆಂಗಳೂರು ಆಗ್ನೇಯ ವಿಭಾಗದ ಪೊಲೀಸರು, ಸೋಕೋ ಟೀಂ ಅಧಿಕಾರಿಗಳು ಆಗಮಿಸಿದ್ದು, ತನಿಖೆ ಕೈಗೊಂಡಿದ್ದಾರೆ. ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತೀಮಾ ಭೇಟಿ ನೀಡಿದ್ದು ಮಾಹಿತಿ ಪಡೆದಿದ್ದಾರೆ. ಬೆಂಗಳೂರಿನ ಎಲ್ಲ ವಿಭಾಗಗಳ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು ಆರೋಪಿಗಳ ಪತ್ತೆ ಕಾರ್ಯ ತೀವ್ರಗೊಂಡಿದೆ.

ಅಂದಾಜು 7 ಕೋಟಿ ಹಣ ದರೋಡೆ- ಪೊಲೀಸ್ ಕಮೀಷನರ್: ಈ ಕುರಿತು ಮಾಹಿತಿ ನೀಡಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, “ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ದಕ್ಷಿಣ ಡಿಸಿಪಿ ಮತ್ತು ಪಶ್ಚಿಮ ವಿಭಾಗ ಜಂಟಿ ಪೊಲೀಸ್ ಆಯುಕ್ತರು ಸ್ಥಳದಲ್ಲಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಅಂದಾಜು 7 ಕೋಟಿ ಹಣ ದರೋಡೆಯಾಗಿದೆ. ಈ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಚಾಲಕನ ಹೇಳಿಕೆ ಕೂಡ ಪಡೆಯಲಾಗುತ್ತಿದೆ. ದರೋಡೆಕೋರರು ಶಸ್ತ್ರಾಸ್ತ್ರ ಹೊಂದಿದ್ದರಾ ಎಂಬ ಕುರಿತು ಕೂಡ ವಿಚಾರಣೆ ನಡೆಸಲಾಗುತ್ತಿದೆ. ನಗರದ ಸುತ್ತ ನಾಕಾಬಂದಿ ಹಾಕಿದ್ದು, ತಮ್ಮ ತಂಡ ಎಲ್ಲೆಡೆ ಕಾರ್ಯಪ್ರವೃತ್ತವಾಗಿದೆ. ಕಂಟ್ರೋಲ್ ರೂಮ್, ಬೇರೆ ಬೇರೆ ತಾಂತ್ರಿಕ ವಿಭಾಗ ಸೇರಿದಂತೆ ಎಲ್ಲರೂ ಆರೋಪಿಗಳನ್ನು ಪತ್ತೆ ಮಾಡುವ ಕಾರ್ಯದಲ್ಲಿ ನಿರತರಾಗಿದ್ದೇವೆ” ಎಂದು ಮಾಹಿತಿ ನೀಡಿದರು.
ಪರಪ್ಪನ ಅಗ್ರಹಾರ ಜೈಲಿಗೂ ತನಿಖಾ ತಂಡ ಭೇಟಿ : ಇನ್ನು ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ತನಿಖಾ ತಂಡ ಪರಪ್ಪನ ಅಗ್ರಹಾರ ಜೈಲಿಗೂ ಭೇಟಿ ನೀಡಿದೆ. ಜೈಲಿನಿಂದ ರಾಬರಿಗೆ ಸಂಚು ರೂಪಿಸಿರುವ ಅನುಮಾನ ವ್ಯಕ್ತವಾದ ಹಿನ್ನಲೆ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಜೈಲಿನಲ್ಲಿ ಪರಿಶೀಲನೆ ನಡೆಸಿ ಮಾಹಿತಿ ಕಲೆಹಾಕಲಾಗಿದೆ. ರಾಬರಿ ಗ್ಯಾಂಗ್ ಹಾಗೂ ಜೈಲಿನ ಒಳಗಿರುವ ಯಾರಿಗಾದರೂ ಲಿಂಕ್ ಇದೆಯಾ ಎಂಬ ಆಯಾಮದಲ್ಲಿ ವಿಚಾರಣೆ ನಡೆದಿದೆ.
20ಕ್ಕೂ ಹೆಚ್ಚು ಜನರ ವಿಚಾರಣೆ : ಪ್ರಕರಣ ಸಂಬಂಧ ಇದುವರೆಗೂ 20ಕ್ಕೂ ಹೆಚ್ಚು ಜನರನ್ನ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಬ್ಯಾಂಕ್ ಸಿಬ್ಬಂದಿ ಮತ್ತು ಸಿಎಂಎಸ್ ಸಿಬ್ಬಂದಿಗೆ ಡ್ರಿಲ್ ಮಾಡಲಾಗಿದ್ದು, ಘಟನೆಯ ಟೈಂ ಲೈನ್ ಮ್ಯಾಚ್ ಮಾಡಿ ಪ್ರಶ್ನೆ ಕೇಳಲಾಗುತ್ತಿದೆ. ಹೀಗಿದ್ದರೂ ಆರೋಪಿಗಳ ಸುಳಿವು ಮಾತ್ರ ಪತ್ತೆಯಾಗಿಲ್ಲ. ಇನ್ನೊಂದೆಡೆ ತಂಡಗಳಾಗಿ ಆರೋಪಿಗಳಿಗಾಗಿ ಹುಡುಕಾಟ ಮುಂದುವರಿದಿದ್ದು, ರಾಜ್ಯದ ಗಡಿಭಾಗಗಳಾದ ಹೊಸಕೋಟೆ, ತಮಿಳುನಾಡಲ್ಲಿ ಆರೋಪಿಗಳಿಗಾಗಿ ತಲಾಶ್ ಮುಂದುವರಿದಿದೆ. 50ಕ್ಕೂ ಹೆಚ್ಚು ಪೊಲೀಸರು ಈ ಕಾರ್ಯದಲ್ಲಿ ನಿರತರಾಗಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post