ವಾಷಿಂಗ್ಟನ್, ಫೆ 20: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಸೇರಿದಂತೆ ಅನೇಕ ದೇಶಗಳ ಮೇಲೆ ಮನಸಿಗೆ ಬಂದಂತೆ ಭಾರೀ ಸುಂಕ ಹೇರುತ್ತಿದ್ದರು. ರಷ್ಯಾದಿಂದ ತೈಲ ಖರೀದಿ ಮಾಡುತ್ತಿದೆ ಎಂಬ ಒಂದೇ ಕಾರಣಕ್ಕೆ ಭಾರತದ ಮೇಲೆ ಹೆಚ್ಚುವರಿ ಶೇ. 25ರಷ್ಟು ಸುಂಕ ವಿಧಿಸುವ ಮೂಲಕ ಭಾರತದ ಮೇಲಿನ ಆಮದು ಸುಂಕವನ್ನು ಶೇ. 50ಕ್ಕೆ ಏರಿಸಿದ್ದರು. ಆದರೆ, ಇತ್ತೀಚೆಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಮೂಲಕ ಆ ಸುಂಕವನ್ನು ಶೇ. 18ಕ್ಕೆ ಕಡಿತಗೊಳಿಸಿದ್ದರು. ಈ ರೀತಿ ತಮಗಿಷ್ಟ ಬಂದಂತೆ ಸುಂಕಗಳನ್ನು ಹಾಕುವ ಅಧಿಕಾರ ಡೊನಾಲ್ಡ್ ಟ್ರಂಪ್ಗಿಲ್ಲ ಎಂದು ಅಮೆರಿಕದ ಸುಪ್ರೀಂ ಕೋರ್ಟ್ ಆದೇಶ ನೀಡುವ ಮೂಲಕ ದೊಡ್ಡ ಹೊಡೆತ ನೀಡಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಕ್ಯಾಬಿನೆಟ್ ಒಪ್ಪಿಗೆಯಿಲ್ಲದೆ ಸರ್ವಾಧಿಕಾರದಿಂದ ಜಾಗತಿಕ ಸುಂಕಗಳನ್ನು ವಿಧಿಸುವ ಅಧಿಕಾರವಿಲ್ಲ ಎನ್ನುವ ಮೂಲಕ ಅಮೆರಿಕದ ಸುಪ್ರೀಂ ಕೋರ್ಟ್ ಟ್ರಂಪ್ಗೆ ದೊಡ್ಡ ಶಾಕ್ ನೀಡಿದೆ. ಅಲ್ಲದೆ, ಟ್ರಂಪ್ ಅವರ ಸುಂಕ ನೀತಿ ಕಾನೂನುಬಾಹಿರ ಎಂದು ಕೂಡ ಹೇಳಿದೆ. ಈ ಮೂಲಕ ಟ್ರಂಪ್ ಅವರ ಜಾಗತಿಕ ಸುಂಕಗಳನ್ನು ಅಮೆರಿಕದ ಸುಪ್ರೀಂ ಕೋರ್ಟ್ 6-3 ಅಂತರದಿಂದ ರದ್ದುಗೊಳಿಸಿದೆ. ಹೀಗಾಗಿ, ಟ್ರಂಪ್ ಅವರ ಮುಂದಿನ ಕಾನೂನು ನಡೆಯ ಬಗ್ಗೆ ಕುತೂಹಲ ಹೆಚ್ಚಾಗಿದೆ.
ವಾಷಿಂಗ್ಟನ್ ಪೋಸ್ಟ್ ವರದಿ ಪ್ರಕಾರ, ಅಮೆರಿಕದ ಬಹುತೇಕ ಎಲ್ಲಾ ವ್ಯಾಪಾರ ಪಾಲುದಾರರಿಂದ ಸರಕುಗಳ ಮೇಲೆ ವ್ಯಾಪಕ ಆಮದು ಸುಂಕಗಳನ್ನು ವಿಧಿಸಲು 1977 ರ ಅಂತಾರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆ -IEEPA ಅಡಿ ಅಮೆರಿಕ ಅಧ್ಯಕ್ಷರು ಅಧಿಕಾರ ಹೊಂದಿಲ್ಲ ಎಂದು ಅಮೆರಿಕದ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಈ ತೀರ್ಪು ಜಾಗತಿಕ ವ್ಯಾಪಾರ, ವ್ಯವಹಾರಗಳು, ಗ್ರಾಹಕರು, ಹಣದುಬ್ಬರ ಪ್ರವೃತ್ತಿಗಳು ಮತ್ತು ದೇಶಾದ್ಯಂತದ ಗೃಹ ಹಣಕಾಸುಗಳ ಮೇಲೆ ವ್ಯಾಪಕ ಪರಿಣಾಮಗಳನ್ನು ಬೀರುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ತೀರ್ಪಿನಿಂದ ದೇಶದಲ್ಲಿ ಭಾರಿ ಆರ್ಥಿಕ ಪರಿಣಾಮಗಳು ಉಂಟಾಗುವ ಸಾಧ್ಯತೆಗಳಿವೆ. ಇದು ಟ್ರಿಲಿಯನ್ ಗಟ್ಟಲೇ ವ್ಯವಹಾರವಾಗಿದ್ದು, ಇದು ದೊಡ್ಡ ಪೆಟ್ಟು ನೀಡುವ ಸಾಧ್ಯತೆಗಳಿವೆ. ಡಿಸೆಂಬರ್ 14ರವರೆಗೆ ಅಮೆರಿಕ ಸರ್ಕಾರವು ವಿವಾದಿತ ಪ್ರಾಧಿಕಾರದ ಅಡಿ ಸುಮಾರು 134 ಶತಕೋಟಿ ಡಾಲರ್‌ಗಳಷ್ಟು ಮೊತ್ತದ ಸುಂಕ ಸಂಗ್ರಹಿಸಿದೆ ಎಂದು ದಿ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಟ್ಯಾಕ್ಸ್ ಫೌಂಡೇಶನ್‌ನ ಅಂದಾಜಿನ ಪ್ರಕಾರ, ಟ್ರಂಪ್‌ರ ವ್ಯಾಪಾರ ಯುದ್ಧವು 2025ರಲ್ಲಿ ಅಮೆರಿಕನ್ ಕುಟುಂಬಗಳಿಗೆ ತಲಾ ಸುಮಾರು 1,100 ಡಾಲರ್‌ಗಳಷ್ಟು ನಷ್ಟವನ್ನುಂಟು ಮಾಡುತ್ತದೆ ಎಂದು ದಿ ಪೋಸ್ಟ್ ತನ್ನ ವರದಿಯಲ್ಲಿ ಹೇಳಿದೆ. ಪರಸ್ಪರ ಪ್ರಯೋಜನಕಾರಿ ವ್ಯಾಪಾರಕ್ಕೆ ಸಂಬಂಧಿಸಿದಂತೆ ಮಧ್ಯಂತರ ಒಪ್ಪಂದಕ್ಕಾಗಿ ಒಂದು ಚೌಕಟ್ಟನ್ನು ರೂಪಿಸಿದ್ದೇವೆ ಎಂದು ಅಮೆರಿಕ ಮತ್ತು ಭಾರತ ಘೋಷಿಸಿದ ಕೆಲವು ದಿನಗಳ ನಂತರ ಈ ಮಹತ್ವದ ತೀರ್ಪು ಬಂದಿದೆ.
ಫೆಬ್ರವರಿ 13, 2025 ರಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ ಭಾರತ -ಅಮೆರಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ (ಬಿಟಿಎ) ಮಾತುಕತೆಗಳಿಗೆ ದೇಶಗಳ ಬದ್ಧತೆಯನ್ನು ಈ ಮಧ್ಯಂತರ ಒಪ್ಪಂದ ಚೌಕಟ್ಟಿನಲ್ಲಿ ಪುನರುಚ್ಚರಿಸಲಾಗಿತ್ತು.
ಯುನೈಟೆಡ್ ಸ್ಟೇಟ್ಸ್ ಮತ್ತು ಭಾರತದ ನಡುವಿನ ಮಧ್ಯಂತರ ಒಪ್ಪಂದವು ನಮ್ಮ ದೇಶಗಳ ಪಾಲುದಾರಿಕೆಯಲ್ಲಿ ಐತಿಹಾಸಿಕ ಮೈಲಿಗಲ್ಲು ಎಂದು ಬಣ್ಣಿಸಲಾಗಿತ್ತು. ಪರಸ್ಪರ ಆಸಕ್ತಿಗಳು ಮತ್ತು ಕಾಂಕ್ರೀಟ್ ಫಲಿತಾಂಶಗಳ ಆಧಾರದ ಮೇಲೆ ಪರಸ್ಪರ ಮತ್ತು ಸಮತೋಲಿತ ವ್ಯಾಪಾರಕ್ಕೆ ಸಾಮಾನ್ಯ ಬದ್ಧತೆಯನ್ನು ಪ್ರದರ್ಶಿಸುತ್ತದೆ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
Discover more from Coastal Times Kannada
Subscribe to get the latest posts sent to your email.







Discussion about this post