ಮಂಗಳೂರು, ಮಾರ್ಚ್ 21: ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ಎರಡು ವರ್ಷಗಳಿಂದ ತಲೆಮರೆಸಿದ್ದ ಆರೋಪಿಯನ್ನು ಮಂಗಳೂರು ನಗರದ ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿರುತ್ತಾರೆ.
ದೇರಳಕಟ್ಟೆ ಮದನಿನಗರ ನಿವಾಸಿ ಫರಾಜ್ @ ಮೊಹಮ್ಮದ್ ಫರಾಜ್ (32) ಬಂಧಿತ ವ್ಯಕ್ತಿ. ಈತನ ವಿರುದ್ಧ ಮಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದರೋಡೆ, ಕೊಲೆಯತ್ನ, ಮಾದಕ ವಸ್ತು ಮಾರಾಟ, ಕಳವು ಹಾಗೂ ಕಾರಾಗೃಹದಲ್ಲಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ನಡೆಸಿದ ಪ್ರಕರಣಗಳು ಸೇರಿ ಒಟ್ಟು ಸುಮಾರು 10 ಪ್ರಕರಣಗಳು ದಾಖಲಾಗಿವೆ.
ನ್ಯಾಯಾಲಯದಿಂದ ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ವಿಚಾರಣೆಗೆ ಹಾಜರಾಗದೆ ಈತ ತಲೆಮರೆಸಿಕೊಂಡಿದ್ದ. ಆರೋಪಿ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ, ದರೋಡೆ, ಹಲ್ಲೆ, ಕಳವು ಸೇರಿದಂತೆ 4 ಪ್ರಕರಣಗಳು ದಾಖಲಾಗಿವೆ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಹಲ್ಲೆ, ಬೆದರಿಕೆ ಮತ್ತು ಕಳವು ಸಂಬಂಧಿಸಿ 02 ಪ್ರಕರಣಗಳು, ಉತ್ತರ ಪೊಲೀಸ್ ಠಾಣೆಯಲ್ಲಿ ಹಲ್ಲೆ, ಬೆದರಿಕೆ, ಅಪಹರಣ ಹಾಗೂ ದರೋಡೆಗೆ ಸಂಬಂಧಿಸಿದ 2 ಪ್ರಕರಣ ದಾಖಲಾಗಿವೆ.
ಬರ್ಕೆ ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೊಲೆಯತ್ನ ನಡೆಸಿದ 01 ಪ್ರಕರಣ ಹಾಗೂ ಉರ್ವಾ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಮಾರಾಟಕ್ಕೆ ಸಂಬಂಧಿಸಿ 01 ಪ್ರಕರಣ ದಾಖಲಾಗಿದೆ. ಉಳ್ಳಾಲ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದು, ಪ್ರಸ್ತುತ ಈತನ ವಿರುದ್ಧ 06 ವಾರಂಟ್ ಹಾಗೂ 01 ಪ್ರೊಕ್ಲಮೇಶನ್ ಜಾರಿಯಲ್ಲಿದೆ. ಬಂಧಿತ ಆರೋಪಿಯನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಉರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಆರೋಪಿ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.
Discover more from Coastal Times Kannada
Subscribe to get the latest posts sent to your email.







Discussion about this post