ಮಂಗಳೂರು: ‘ರೌಡಿಗಳ ಪಟ್ಟಿಯಲ್ಲಿ ಹೆಸರು ಹೊಂದಿರುವ ಆರೋಪಿಗಳಾದ ಅಳಪೆಯ ಧೀರಜ್ ಕುಮಾರ್ ಅಲಿಯಾಸ್ ಧೀರು (27) ಹಾಗೂ ಬಜಾಲ್ ಜಲ್ಲಿಗುಡ್ಡೆಯ ಪ್ರೀತಂ ಪೂಜಾರಿ ಅಲಿಯಾಸ್ ಪ್ರೀತೇಶ್ ಅಲಿಯಾಸ್ ಪ್ರೀತು (26) ವಿರುದ್ಧ ಕಂಕನಾಡಿ ನಗರ ಠಾಣೆಯ ಪೊಲೀಸರು ಗೂಂಡಾ ಕಾಯ್ದೆಯನ್ವಯ ಕ್ರಮಕೈಗೊಂಡಿದ್ದಾರೆ. ‘ನಗರದ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಇಬ್ಬರು ರೌಡಿ ಶೀಟರ್‌ಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮಕೈಗೊಂಡಿದ್ದೇವೆ’ ಎಂದು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದರು.
‘ಪ್ರೌಢಶಾಲೆವರೆಗೆ ಮಾತ್ರ ವಿದ್ಯಾಭ್ಯಾಸ ಪಡೆದ ಧೀರಜ್ ಬಳಿಕ ರಿಕ್ಷಾ ಚಾಲಕನಾಗಿದ್ದ. 2015ರಿಂದಲೇ ತನ್ನ 21ನೇ ವಯಸ್ಸಿನಿಂದಲೇ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ. ಗುಂಪು ಕಟ್ಟಿಕೊಂಡು ಅಪರಾಧ ಕೃತ್ಯ ನಡೆಸುತ್ತಿದ್ದ. ಅಕ್ರಮ ಪ್ರವೇಶ, ಜೀವ ಬೆದರಿಕೆ, ದರೋಡೆ, ಕೊಲೆ ಯತ್ನ, ಅಪಹರಣ ಮತ್ತು ಕೊಲೆ ಯತ್ನ, ಹಲ್ಲೆ ಮೊದಲಾದ ಪ್ರಕರಣಗಳು ಸೇರಿದಂತೆ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 9 ಪ್ರಕರಣಗಳು ದಾಖಲಾಗಿದೆ. ಮೂರು ಪ್ರಕರಣಗಳಲ್ಲಿ ಖುಲಾಸೆಯಾಗಿದ್ದ. ಐದು ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಅನೇಕ ಸಲ ಬಂಧಿತನಾಗಿರುವ ಈತ ಜೈಲಿನಿಂದ ಹೊರಗೆ ಬಂದ ಬಳಿಕವೂ ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿದ್ದ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ‘ಪ್ರೀತಂ 2016ರಿಂದಲೇ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ. ಈತನ ವಿರುದ್ಧ ಗಾಂಜಾ ಸೇವನೆ, ಜೀವ ಬೆದರಿಕೆ, ಕೊಲೆ ಯತ್ನ, ಅಪಹರಣ ಮತ್ತು ಬೆದರಿಕೆ, ಹಲ್ಲೆ, ಅಕ್ರಮ ಕೂಟ ಕಟ್ಟಿಕೊಂಡ ದರೋಡೆ ಸೇರಿದಂತೆ 12 ಪ್ರಕರಣಗಳು ದಾಖಲಾಗಿವೆ. ಎರಡು ಪ್ರಕರಣಗಳಲ್ಲಿ ಶಿಕ್ಷೆ ಆಗಿದೆ. 6 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ. ಈತನೂ ಗುಂಪುಕಟ್ಟಿಕೊಂಡು ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿದ್ದ. ಮಾರಕಾಯುಧ ಬಳಸಿ ಅಪರಾಧ ಕೃತ್ಯಗಳನ್ನು ನಡೆಸುತ್ತಿದ್ದ. ಜಾಮೀನಿನ ಮೇಲೆ ಜೈಲಿನಿಂದ ಹೊರ ಬಂದ ಬಳಿಕವೂ ಅಪರಾಧ ಕೃತ್ಯಗಳನ್ನು ನಡೆಸುತ್ತಿದ್ದ’ ಎಂದು ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post