ಮಂಗಳೂರು, ಅ.20 : ಕೇಂದ್ರ ಸರಕಾರದ ಸಾಲದ ಯೋಜನೆಗಳಿಗೆ ಕನ್ನ ಹಾಕಿ ಬ್ಯಾಂಕ್ ಅಧಿಕಾರಿಗಳೊಂದಿಗೆ ಸೇರಿ ಹಣ ಗುಳುಂ ಮಾಡುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಸುರತ್ಕಲ್ ನಲ್ಲಿ ಕಾರ್ಯಾಚರಿಸುತ್ತಿದ್ದ ಇಲೆಕ್ಟ್ರಾನಿಕ್ ಶಾಪ್ ಒಂದನ್ನು ಖರೀದಿಸುವ ನೆಪದಲ್ಲಿ ಸ್ವೋದ್ಯೋಗಕ್ಕಾಗಿ ಸಾಲದ ಯೋಜನೆಯಡಿ ಬರೋಬ್ಬರಿ 1.20 ಕೋಟಿ ಸಾಲ ಪಡೆದು ವಂಚಿಸಿರುವ ಬಗ್ಗೆ ಕದ್ರಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಸುರತ್ಕಲ್ ಬಳಿಯ ತಡಂಬೈಲ್ ನಲ್ಲಿ ನೂರ್ ಅಹ್ಮದ್ ಎಂಬವರ ಹೆಸರಲ್ಲಿದ್ದ ಇಲೆಕ್ಟ್ರೋ ವರ್ಲ್ಡ್ ಎನ್ನುವ ಹೆಸರಿನ ಶಾಪ್ ಒಂದನ್ನು ಖರೀದಿಸಲು ನಗರದ ಮಲ್ಲಿಕಟ್ಟೆಯ ಎಸ್ ಬಿಐ ಬ್ಯಾಂಕ್ ಶಾಖೆಯಿಂದ ಸಾಲ ಪಡೆಯಲಾಗಿದೆ. 2023ರ ಅಕ್ಟೋಬರ್ ತಿಂಗಳಲ್ಲಿ ಬೇನಾಮಿ ಕಂಪನಿಯೊಂದನ್ನು ಸೃಷ್ಟಿಸಿ, ವಿಟ್ಲ ಮೂಲದ ಹಮೀದ್ ಎಂಬವರ ಹೆಸರಿನಲ್ಲಿ ಹಳೆ ಶಾಪ್ ಖರೀದಿಸಲು 1.20 ಕೋಟಿ ಸಾಲ ಪಡೆಯಲಾಗಿತ್ತು.
ಆದರೆ ಶಾಪ್ ಖರೀದಿಸಿದ್ದಾಗಿ ತೋರಿಸಿ ಆನಂತರ ಅದನ್ನು ಪಂಪ್ವೆಲ್ ಪ್ರದೇಶಕ್ಕೆ ಶಿಫ್ಟ್ ಮಾಡಿದ್ದಾಗಿ ದಾಖಲೆಯಲ್ಲಿ ತೋರಿಸಲಾಗಿದೆ. ಆದರೆ ಪಂಪ್ವೆಲ್ ನಲ್ಲಿ ದಾಖಲೆಯಲ್ಲಿ ತೋರಿಸಿದ ಯಾವುದೇ ಇಲೆಕ್ಟ್ರಾನಿಕ್ ಶಾಪ್ ಹೊಂದಿಲ್ಲ ಎಂಬುದನ್ನು ಬ್ಯಾಂಕ್ ಅಧಿಕಾರಿಗಳು ಆಂತರಿಕ ತನಿಖೆಯಲ್ಲಿ ಪತ್ತೆ ಮಾಡಿದ್ದಾರೆ. ಅಲ್ಲದೆ, ಸಾಲ ಪಡೆದ ಹಣವನ್ನು ಹಮೀದ್, ಆತನ ಸೋದರ ಹುಸೇನ್, ಮುನೀರ್ ಕಡಮನ್ ಮತ್ತು ಮುನೀರ್ ಪತ್ನಿ ಅಸ್ಮಾ ಖಾತೆಗೆ ವರ್ಗಾಯಿಸಲಾಗಿದೆ. ಇದಲ್ಲದೆ, ವಿಟ್ಲ ಮೂಲದ ಅವಿನಾಶ್ ಎಂಬಾತನ ಖಾತೆಗೂ ಹಣ ವರ್ಗಾಯಿಸಿದ್ದು ಆತನನ್ನೂ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿಯೂ ಆಶಿಕ್ ಪಾತ್ರದ ಬಗ್ಗೆ ಬಂಧಿತ ಆರೋಪಿಗಳು ಮಾಹಿತಿ ನೀಡಿದ್ದು, ಆತನ ಸೂಚನೆಯಂತೆ ಕೃತ್ಯ ಎಸಗಿದ್ದಾಗಿ ಹೇಳಿಕೆ ನೀಡಿದ್ದಾರೆ.
ಇದರಂತೆ ಸದ್ಯಕ್ಕೆ ತನಿಖೆ ನಡೆಸುತ್ತಿರುವ ಮಂಗಳೂರು ಸಿಸಿಬಿ ಪೊಲೀಸರು ಆಶಿಕ್ ಬಂಧನಕ್ಕಾಗಿ ಕೋರ್ಟಿನಿಂದ ವಾರೆಂಟ್ ಪಡೆದಿದ್ದಾರೆ. ಆದರೆ ಆಶಿಕ್ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದಾನೆ. ಮಲ್ಲಿಕಟ್ಟೆ ಎಸ್ ಬಿಐ ಶಾಖೆಯಲ್ಲಿ 1.30 ಕೋಟಿ ಮತ್ತು 1.20 ಕೋಟಿ ಸಾಲ ಪಡೆದು ವಂಚಿಸಿರುವ ಬಗ್ಗೆ ಪ್ರತ್ಯೇಕ ಎರಡು ಪ್ರಕರಣ ದಾಖಲಾಗಿದೆ. ಎರಡು ಪ್ರಕರಣದಲ್ಲೂ ಬ್ಯಾಂಕಿನಲ್ಲಿ ರಿಲೇಶನ್ ಶಿಪ್ ಮ್ಯಾನೇಜರ್ ಆಗಿದ್ದ ಅಭಿಷೇಕ್ ನಂದಾ ಆರೋಪಿಗಳಿಗೆ ಸಹಕರಿಸಿದ್ದು, ಆಶಿಕ್ ಸೂಚನೆಯಂತೆ ಈ ಕೃತ್ಯ ನಡೆಸಿದ್ದಾನೆ ಎನ್ನಲಾಗುತ್ತಿದೆ.
ಸದ್ಯಕ್ಕೆ ಮುನೀರ್ ಕಡಮನ್, ಹುಸೇನ್, ಆಸ್ಮಾ, ಅವಿನಾಶ್, ಅಭಿಷೇಕ್ ನಂದಾ ಬಂಧಿತರಾಗಿದ್ದಾರೆ. ಪ್ರಮುಖ ಆರೋಪಿ ಹಮೀದ್ ಬೆಂಗಳೂರಿನಲ್ಲಿದ್ದು ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದಾನೆ. ಆಶಿಕ್ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಒಂದೇ ಬ್ಯಾಂಕಿನಲ್ಲಿ ಎಸಗಿರುವ ಎರಡು ಸಾಲದ ಪ್ರಕರಣಗಳನ್ನು ಸಿಸಿಬಿ ಪೊಲೀಸರ ಪ್ರತ್ಯೇಕ ತಂಡಗಳು ತನಿಖೆ ನಡೆಸುತ್ತಿದ್ದು ಮಹತ್ತರ ಮಾಹಿತಿಗಳನ್ನು ಕಲೆಹಾಕಿದೆ.
Discover more from Coastal Times Kannada
Subscribe to get the latest posts sent to your email.








Discussion about this post