ಮಂಗಳೂರು: ನಗರದ ಗರೋಡಿಯಲ್ಲಿ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸಾಗಿಸುತ್ತಿದ್ದಾಗ ನಡೆದ ಸ್ಪೋಟದಲ್ಲಿ ಗಾಯಗೊಂಡು ನಗರದ ಫಾದರ್ ಮಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿ ಶಾರೀಕ್ ಎಂಬುದನ್ನು ಆತನ ಕುಟುಂಬದವರು ಖಚಿತ ಪಡಿಸಿದ್ದಾರೆ ಎಂದು ಹೇಳಿ ಅಲೋಕ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.
ತೀರ್ಥಹಳ್ಳಿಯಿಂದ ಶಾರೀಕ್ ಕುಟುಂಬಸ್ಥರನ್ನು ಪೊಲೀಸರು ಮಂಗಳೂರಿಗೆ ಕರೆಸಿದ್ದು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾರೀಕ್ ನನ್ನು ಕುಟುಂಬಸ್ಥರು ಗುರುತು ಹಚ್ಚಿದ್ದಾರೆ. ಆಬಳಿಕ ಕುಟುಂಬಸ್ಥರನ್ನು ಮಂಗಳೂರು ಪೊಲೀಸರು ಕಮಿಷನರ್ ಕಚೇರಿಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಆಟೋ ಬ್ಲಾಸ್ಟ್ ಪ್ರಕರಣದಲ್ಲಿ ತೀವ್ರ ಸುಟ್ಟ ಗಾಯಗೊಂಡಿದ್ದ ವ್ಯಕ್ತಿಯನ್ನು ಮೇಲ್ನೋಟಕ್ಕೆ ಪೊಲೀಸರು ಮೊಹಮ್ಮದ್ ಶಾರೀಕ್ ಎಂದು ಗುರುತಿಸಿದ್ದರು. ಇದೀಗ ಆತನ ಕುಟುಂಬಸ್ಥರು ಆಗಮಿಸಿ, ದೃಢ ಮಾಡಿದ್ದಾರೆ.

ನಗರದಲ್ಲಿ ಬಾಂಬ್ ಸ್ಪೋಟ ನಡೆಸುವ ಉದ್ದೇಶದಿಂದ ಕುಕ್ಕರ್ ಬಾಂಬ್ ಸಾಗಿಸಿದ್ದ. ಮೈಸೂರಿನಲ್ಲಿ ಬಾಂಬ್ ತಯಾರಿಸಿ ತಂದಿದ್ದ. ನ.10ರಂದು ಮಂಗಳೂರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೈಸೂರಿಗೆ ಮರಳಿದ್ದ ಎಂದು ತಿಳಿಸಿದರು. ,’ಆರೋಪಿ ಶಾರಿಕ್ ಗೆ ಬಾಂಬು ತಯಾರಿ ಬಗ್ಗೆ ಭಾರಿ ಪರಿಣತಿ ಇದ್ದಂತೆ ತೋರುತ್ತಿಲ್ಲ. ಹಾಗಾಗಿ ಅದನ್ನು ಪೂರ್ವ ತಯಾರಿ ನಡೆಸಿದಂತೆ ಸ್ಫೋಟಗೊಳಿಸಲು ಸಾಧ್ಯವಾಗಿಲ್ಲ.ಕುಕ್ಕರ್ ಬಾಂಬನ್ನು ಸಾಗಿಸುತ್ತಿದ್ದಾಗಲೇ ಅದು ಸ್ಪೋಟಗೊಂಡಿದ್ದರಿಂದ ಬಾರಿ ಅನಾಹುತ ತಪ್ಪಿದೆ.’ ಎಂದರು. ಆರೋಪಿಯು ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಿಸಿರುವ ಉಗ್ರಗಾಮಿ ಸಂಘಟನೆ ಒಂದರಿಂದ ಪ್ರೇರಣೆಗೊಂಡಿದ್ದ. ಈ ಕೃತ್ಯದಲ್ಲಿ ಇನ್ನು ಅನೇಕರು ಭಾಗಿಯಾಗಿದ್ದಾರೆ ಸದ್ಯಕ್ಕೆ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಒಬ್ಬನನ್ನು ಮಂಗಳೂರಿನಲ್ಲಿ ಇಬ್ಬರನ್ನು ಮೈಸೂರಿನಲ್ಲಿ ವಶಕ್ಕೆ ಪಡೆದಿದ್ದೇವೆ. ಇನ್ನೊಬ್ಬನನ್ನು ಊಟಿಯಲ್ಲಿ ವಶಕ್ಕೆ ಪಡೆದು ಮಂಗಳೂರಿಗೆ ಕರೆತರಲಾಗುತ್ತಿದೆ ಎಂದರು.
ಇದೇ ವೇಳೆ, ಮೈಸೂರಿನಲ್ಲಿ ಆತನ ಸಹವರ್ತಿಯಾಗಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡೆದು ಮಂಗಳೂರಿಗೆ ಕರೆತಂದಿದ್ದಾರೆ ಎನ್ನುವ ಮಾಹಿತಿಗಳಿವೆ. ಶಾರೀಕ್ ಗೋಡೆ ಬರಹ ಪ್ರಕರಣ ಮತ್ತು ಶಿವಮೊಗ್ಗದಲ್ಲಿ ಬಾಂಬ್ ಬ್ಲಾಸ್ಟ್ ತರಬೇತಿ ಪ್ರಕರಣದಲ್ಲಿ ಆರೋಪಿಯಾಗಿದ್ದ. ಎರಡು ತಿಂಗಳಿನಿಂದ ಆತನ ಪತ್ತೆಗೆ ಶಿವಮೊಗ್ಗ ಪೊಲೀಸರು ಬಲೆ ಬೀಸಿದ್ದರು. ಆದರೆ ಶಾರೀಕ್ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ. ಎಡಿಜಿಪಿ ಅಲೋಕ್ ಕುಮಾರ್ ತನಿಖೆಯ ಮೇಲುಸ್ತುವಾರಿ ವಹಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post