ಮಂಗಳೂರು: ತಿಂಗಳಿಗೆ ಒಂದು ಸಾವಿರ ರೂಪಾಯಿ ಕಟ್ಟಿದರೆ, ದುಬಾರಿ ಕಾರು, ಫ್ಲಾಟ್ ಗಿಫ್ಟ್ ಆಗಿ ಸಿಕ್ಕಿದರೆ ಯಾರಿಗೆ ಬೇಡ ಹೇಳಿ. ಆದರೆ, ಜನರ ಈ ರೀತಿಯ ಆಕರ್ಷಣೆಯನ್ನೇ ಬಂಡವಾಳ ಮಾಡಿಕೊಂಡ ಕೆಲವರು ಅದೃಷ್ಟ ಚೀಟಿ ಹೆಸರಲ್ಲಿ ಮಂಗಳೂರಿನಲ್ಲಿ ನಾನಾ ಮಾದರಿಯ ಲಕ್ಕಿ ಸ್ಕೀಂ ಆರಂಭಿಸಿದ್ದಾರೆ. ಇದರ ನಡುವಲ್ಲೇ ಮಂಗಳೂರಿನಲ್ಲಿ ಡ್ರೀಮ್ ಡೀಲ್ ಹೆಸರಿನ ಲಕ್ಕಿ ಸ್ಕೀಮ್ ನಲ್ಲಿ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ.
ಪ್ರತಿ ತಿಂಗಳು ಒಂದು ಸಾವಿರ ರೂಪಾಯಿ ಮೊತ್ತವನ್ನು ಗ್ರಾಹಕರು ಕಟ್ಟಬೇಕಿದ್ದು, ಡ್ರೀಮ್ ಡೀಲ್ ಸಂಸ್ಥೆಯವರು ಲಕ್ಕಿ ಡ್ರಾವನ್ನು ಲೈವ್ ಆಗಿ ನಡೆಸುತ್ತಿದ್ದಾರೆ. ಈ ಬಾರಿ ಮಹೀಂದ್ರಾ ಥಾರ್ ಕಾರು ಗಿಫ್ಟ್ ಇದೆಯೆಂದು ತೋರಿಸಲಾಗಿತ್ತು. ಹೀಗಾಗಿ ಗ್ರಾಹಕರು ಕೂಡ ಭಾರೀ ನಿರೀಕ್ಷೆಯಲ್ಲಿದ್ದರು. ಆದರೆ, ಇದೇ ವೇಳೆ ಲಕ್ಕಿ ಡ್ರಾ ನಡೆಸಿದ್ದ ವಿಡಿಯೋ ಹೊರಬಂದಿದ್ದು, ಅದೃಷ್ಟ ಚೀಟಿ ಎತ್ತುವುದರ ಹಿಂದಿನ ಸಾಚಾತನ ಬಯಲಾಗಿದೆ. ಕಣ್ಣಿಗೆ ಬಟ್ಟೆ ಕಟ್ಟಿದ ವ್ಯಕ್ತಿಯೊಬ್ಬ ಅದೃಷ್ಟ ಚೀಟಿಯನ್ನು ಎತ್ತುವುದನ್ನು ತೋರಿಸುವಾಗಲೇ, ಪಕ್ಕದಲ್ಲಿ ನಿಂತಿದ್ದ ವ್ಯಕ್ತಿ ಆತನ ಕೈಗೆ ತನ್ನ ಕೈಲಿದ್ದ ಚೀಟಿಯನ್ನು ನೀಡುತ್ತಾನೆ. ಆಮೂಲಕ ಕಂಪನಿಯಿಂದಲೇ ವ್ಯವಸ್ಥಿತ ರೀತಿಯಲ್ಲಿ ವಂಚನೆ ಎಸಗಲಾಗುತ್ತಿದೆ ಎಂದು ಜಾಲತಾಣದಲ್ಲಿ ಈ ವಿಡಿಯೋವನ್ನು ವೈರಲ್ ಮಾಡಲಾಗಿತ್ತು.
ಮಂಗಳೂರು, ಸುರತ್ಕಲ್ ನಲ್ಲಿ 25ಕ್ಕೂ ಹೆಚ್ಚು ಈ ರೀತಿಯ ಅದೃಷ್ಟ ಚೀಟಿ ಎತ್ತುವ ಸ್ಕೀಂ ನಡೆಯುತ್ತಿದ್ದು, ಪ್ರತಿ ಅದೃಷ್ಟ ಚೀಟಿಯಲ್ಲೂ 50 ಸಾವಿರಕ್ಕೂ ಹೆಚ್ಚು ಗ್ರಾಹಕರಿದ್ದು, ತಿಂಗಳಿಗೆ ಒಬ್ಬನಿಗೆ ಡ್ರಾದಲ್ಲಿ ದುಬಾರಿ ಬಹುಮಾನ ಸಿಗುತ್ತದೆ ಎಂದು ಭರವಸೆ ನೀಡಲಾಗುತ್ತದೆ. ವಿಶೇಷ ಅಂದ್ರೆ, ಕೆಲವು ಅದೃಷ್ಟ ಚೀಟಿ ಸ್ಕೀಮ್ ಗಳಿಗೆ ತುಳು ಚಿತ್ರನಟರೂ ವಿಡಿಯೋ ಮಾಡಿ, ಜನರನ್ನು ಆಕರ್ಷಿಸುತ್ತಿದ್ದಾರೆ. ವರ್ಷದ ಕೊನೆಯಲ್ಲಿ ಅದೃಷ್ಟ ಚೀಟಿಗೆ ಆಯ್ಕೆಯಾಗದ ಪ್ರತಿ ವ್ಯಕ್ತಿಗೂ ಆತ ಪಾವತಿಸಿದ ಮೊತ್ತದಲ್ಲಿ ಗಿಫ್ಟ್ ಕೂಪನ್ನಲ್ಲಿ ಕೊಡಲಾಗಿರುವ ದೊಡ್ಡ ಮೌಲ್ಯದ ವಸ್ತುಗಳನ್ನು ಪಡೆಯಲು ಅವಕಾಶ ಇದೆ ಎನ್ನುತ್ತಿದ್ದಾರೆ. ಇದೇ ರೀತಿ ವಿಕೆ ಫರ್ನಿಚರ್ ಸಂಸ್ಥೆಯಿಂದ ನಡೆಸಲ್ಪಡುವ ಅದೃಷ್ಟ ಚೀಟಿಯಲ್ಲಿ 50 ಸಾವಿರಕ್ಕೂ ಹೆಚ್ಚು ಗ್ರಾಹಕರಿದ್ದಾರೆ.
ಡ್ರೀಮ್ ಡೀಲ್ ಹೆಸರಿನಲ್ಲಿ ಲಕ್ಕಿ ಸ್ಕೀಂ ನಡೆಸುವ ಮಂದಿಯೂ ಜುವೆಲ್ಲರಿ ಸೇರಿದಂತೆ ಬೇರೆ ಬೇರೆ ವಹಿವಾಟು ನಡೆಸುತ್ತಾರೆ ಎನ್ನಲಾಗುತ್ತಿದೆ. ಹಾಗಾಗಿ, ಇದೇ ಮಾದರಿಯ ಯೋಜನೆಯನ್ನು ಇಡೀ ದೇಶಾದ್ಯಂತ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಸದ್ಯಕ್ಕೆ ರಾಜ್ಯದಾದ್ಯಂತ ನಮ್ಮ ಯೋಜನೆಯಿದ್ದು, 50 ಸಾವಿರಕ್ಕೂ ಹೆಚ್ಚು ಸದಸ್ಯರಿದ್ದಾರೆ. ಆಗಿರುವ ತಪ್ಪಿನಲ್ಲಿ ಸಂಸ್ಥೆಯ ಪಾಲುದಾರಿಕೆ ಇಲ್ಲ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕಾಗಿ ಪೊಲೀಸ್ ದೂರು ನೀಡಿದ್ದೇವೆ ಎಂದಿದ್ದಾರೆ.
ಆರ್‌ಬಿಐ ಪರವಾನಗಿಯಿಲ್ಲ : ಕೋಟ್ಯಂತರ ರೂ. ಸ್ಕೀಮ್, ಆರ್ಥಿಕ ವ್ಯವಹಾರ ಮಾಡುವಾಗ ಆರ್‌ಬಿಐ ನಿರ್ದೇಶನಗಳನ್ನು ಪಾಲಿಸಬೇಕು. ಈ ಸ್ಕೀಮ್‌ಗಳಲ್ಲಿ ಯಾವುದೇ ಆರ್‌ಬಿಐ ನಿಯಮಗಳನ್ನು ಪಾಲಿಸದೆ ವ್ಯವಹಾರ ಮಾಡಲಾಗುತ್ತಿದೆ. ಅಲ್ಲದೆ ಮಹಾನಗರ ಪಾಲಿಕೆ ಸೇರಿದಂತೆ ಯಾವುದೇ ಸ್ಥಳೀಯಾಡಳಿತದ ಅನುಮತಿ ಪಡೆಯುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.
ಆದಾಯ ತೆರಿಗೆಯಲ್ಲೂ ವಂಚನೆ? : ಸ್ಕೀಮ್‌ಗಳಲ್ಲಿ ತಿಂಗಳಿಗೆ 1 ಸಾವಿರದಿಂದ 3 ಸಾವಿರದವರೆಗೆ ಹಣ ಪಡೆದು ಕೋಟ್ಯಂತರ ರೂ. ಹಣ ಸಂಗ್ರಹ ಮಾಡಲಾಗುತ್ತಿದೆ. ಯಾವುದೇ ಡ್ರಾದಲ್ಲಿ 1 ಸಾವಿರ ರೂ. ಬಹುಮಾನ ಗೆದ್ದರೂ ಶೇ. 30ರಂತೆ 300 ರೂ. ತೆರಿಗೆ ಕಟ್ಟಬೇಕು. 1 ಲಕ್ಷ ರೂ. ಗೆದ್ದರೆ 30 ಸಾವಿರ ರೂ. ತೆರಿಗೆಯನ್ನು ಬಹುಮಾನ ಪಡೆದುಕೊಂಡವರು ಸಂದಾಯ ಮಾಡಲೇಬೇಕಾಗಿರುವುದು ಆದಾಯ ತೆರಿಗೆ ಇಲಾಖೆ ನಿಯಮ. ಇಲ್ಲಿ ಈ ನಿಯಮ ಉಲ್ಲಂಘನೆ ಮಾಡಲಾಗುತ್ತಿದ್ದು, ತೆರಿಗೆ ವಂಚನೆ ನಡೆಯುವ ಅನುಮಾನವೂ ಇದೆ ಎನ್ನುತ್ತಾರೆ ಆತಂಕಕ್ಕೊಳಗಾಗಿದ್ದ ಗ್ರಾಹಕರು.
ರಾಜ್ಯದಲ್ಲಿ ಈಗಾಗಲೇ ಲಾಟರಿ ನಿಷೇಧವಾಗಿದ್ದು, ಸ್ಕೀಮ್‌ಗಳು ಸೇರಿದಂತೆ ಯಾವುದೇ ಅನಧಿಕೃತ ಹಣದ ವ್ಯವಹಾರಕ್ಕೆ ಅವಕಾಶವಿಲ್ಲ. ಈ ಬಗ್ಗೆ ಈಗಾಗಲೇ ಸರಕಾರೀ ಮಟ್ಟದಲ್ಲಿ ನಿರ್ದೇಶನ ಬಂದಿದ್ದು, ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಾಗುವುದು ಎಂದು ದಕ್ಷಿಣ ಕನ್ನಡ ಅಪರ ಜಿಲ್ಲಾಧಿಕಾರಿ ಡಾ. ಜಿ. ಸಂತೋಷ್ ಕುಮಾರ್ ಹೇಳಿದ್ದಾರೆ.
ಫ್ಲೈಯಿಂಗ್ ಸ್ಕ್ವಾಡ್ ರಚನೆ : ಮಂಗಳೂರು ಕಮಿಷನರೇಟ್ ವ್ಯಾಪ್ತಿ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫ್ಲ್ಯಾಟ್, ಕಾರು, ಬೈಕ್, ಚಿನ್ನ ಸೇರಿದಂತೆ ನಾನಾ ರೀತಿಯ ಬಹುಮಾನಗಳ ಆಮಿಷ ತೋರಿಸಿ ಸ್ಕೀಮ್‌ಗಳ ಹೆಸರಿನಲ್ಲಿ ಗ್ರಾಹಕರನ್ನು ಆಕರ್ಷಿಸುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ನಿಗಾ ವಹಿಸಲು ಫ್ಲೈಯಿಂಗ್ ಸ್ಕ್ವಾಡ್ ರಚಿಸಲಾಗಿದೆ.
ಸ್ಕೀಮ್ ನಡೆಸುತ್ತಿರುವ ಕಚೇರಿಗೆ ಇತ್ತೀಚೆಗೆ ಅಪರಾಧ ಪತ್ತೆದಳ (ಸಿಸಿಬಿ)ದ ತಂಡ ದಾಳಿ ನಡೆಸಿ ಕೆಲವೊಂದು ಮಾಹಿತಿಗಳನ್ನು ಕಲೆ ಹಾಕಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಅಲ್ಲದೆ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ಅವರು ಎಲ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ನಡೆಯುತ್ತಿರುವ ಸ್ಕೀಮ್‌ಗಳ ಬಗ್ಗೆ ಮಾಹಿತಿ ನೀಡಬೇಕೆಂದು ನಿರ್ದೇಶನ ನೀಡಿದ್ದಾರೆ.
ಫ್ಲೈಯಿಂಗ್ ಸ್ಕ್ವಾಡ್‌ಗಳು ತಪಾಸಣೆಯನ್ನು ಮುತುವರ್ಜಿಯಿಂದ ನಡೆಸಿ ವರದಿ ನೀಡಬೇಕು. ಸಾರ್ವಜನಿಕರು ವಂಚನೆಗೊಳಗಾಗುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪ್ರಕರಣಗಳ ಬಗ್ಗೆ ಜರುಗಿದ ಕ್ರಮದ ಬಗ್ಗೆ ಮಾಹಿತಿ ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post