ಬೆಳ್ಳಾರೆ: ಅತ್ತೆ, ಪತ್ನಿ ಮತ್ತು ಇನ್ನಿತರ ಅಪರಿಚಿತರು ಸೇರಿಕೊಂಡು ಜುವೆಲ್ಲರಿ ಉದ್ಯಮಿ ನವೀನ್ ಗೌಡ ಮಲ್ಲಾರ ಎಂಬವರನ್ನು ಅಪಹರಿಸಿರುವ ಘಟನೆಗೆ ಸಂಬಂಧಿಸಿದಂತೆ ಬೆಳ್ಳಾರೆ ಠಾಣೆಯಲ್ಲಿ ಆರು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.ನವೀನ್ ಅವರ ತಾಯಿ ನೀರಜಾಕ್ಷಿ ಅವರು ನೀಡಿದ ದೂರಿನಂತೆ ಮಾಧವ ಗೌಡ, ದಿವ್ಯ ಪ್ರಭಾ ಗೌಡ ಚಿಲ್ತಡ್ಕ, ಪರಶುರಾಮ, ಸ್ಪಂದನ, ಸ್ಪರ್ಶಿತ್ ಮತ್ತು ನವೀನ್ ರೈ ತಂಬಿನಮಕ್ಕಿ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.

ಡಿ.19ರಂದು ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಕಾವಿನಮೂಲೆಯ ಧರ್ಮಶ್ರೀ ನಿಲಯದಲ್ಲಿ ನವೀನ್ ಅವರು ವಾಸ್ತವ್ಯವಿದ್ದು, ಮನೆಯಲ್ಲಿ ನವೀನ್ ಅವರ ತಾಯಿ ಮತ್ತು ಅವರ ಅಣ್ಣನ ಮಗನ ಪತ್ನಿ ಇದ್ದ ವೇಳೆ ನಿನ್ನೆ ಮಧ್ಯಾಹ್ನ 12:45 ರ ಸುಮಾರಿಗೆ ಮಧ್ಯಾಹ್ನ ಅಂಬ್ಯುಲೆನ್ಸ್ ನಿಂದ ಇಳಿದು ಬಂದ ದುಷ್ಕರ್ಮಿಗಳು ಏಕಾಏಕಿ ನವೀನ್ ಅವರನ್ನು ಅಪಹರಿಸಲು ಯತ್ನಿಸಿದ್ದು, ತಡೆಯಲು ಹೋದ ನವೀನ್ ಅವರ ತಾಯಿ ಹಾಗೂ ಅತ್ತಿಗೆ ಮೇಲೆ ಹಲ್ಲೆಗ ನಡೆಸಿದ್ದು, ಕಾಲಿನಿಂದ ಒದ್ದು ನವೀನ್ ಅವರನ್ನು ಎಳೆದೊಯ್ದಿದ್ದಾರೆ ಎಂದು ನವೀನ್ ಅವರ ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ನವೀನ್ ಕುಮಾರ್ ಹಾಗೂ ಆತನ ಪತ್ನಿ ಸ್ಪಂದನಾ ಮಧ್ಯೆ ಮೂರು ತಿಂಗಳಿನಿಂದ ವೈಮನಸ್ಸು ಉಂಟಾಗಿದ್ದು ಪತ್ನಿ ತವರು ಮನೆಗೆ ಹೋಗಿದ್ದರು. ಕಳೆದ ಅಕ್ಟೋಬರ್ ನಲ್ಲಿ ಈಕೆ ಬೆಳ್ಳಾರೆಯ ಲಾಡ್ಜ್ ನಲ್ಲಿ ಎಸ್ಐ ಜೊತೆಗೆ ಸಿಕ್ಕಿಬಿದ್ದ ಬಳಿಕ ಗಂಡ ನವೀನ್, ಇನ್ಮುಂದೆ ತನ್ನ ಮನೆಗೆ ಬರಬಾರದೆಂದು ಸೂಚಿಸಿದ್ದರು. ಇದೇ ವಿಚಾರದಲ್ಲಿ ಎರಡು ಕುಟುಂಬದ ಮಧ್ಯೆ ಕಲಹ ಉಂಟಾಗಿತ್ತು. ಇತ್ತೀಚೆಗೆ ಮಾತುಕತೆ ನಡೆದಿದ್ದು ನವೀನ್ ತನಗೆ ಪತ್ನಿ ಬೇಡವೆಂದು ಹೇಳಿದ್ದರು ಎನ್ನಲಾಗಿದೆ. ಆದರೆ ಡಿ.18 ರಂದು ಸ್ಪಂದನಾ ಆಕೆಯ ಹೆತ್ತವರ ಜೊತೆ ನವೀನ್ ಮನೆಗೆ ಬಂದಿದ್ದು ಜಟಾಪಟಿ ನಡೆದಿತ್ತು. ಅಂದು ರಾತ್ರಿ ತನ್ನ ಮನೆಗೆ ಬರಕೂಡದು ಎಂದು ನವೀನ್ ಮನೆಗೆ ಬಾಗಿಲು ಹಾಕಿದ್ದರೆ, ಪತ್ನಿ ಮನೆಯ ಹೊರಗೆ ಮಲಗಿದ್ದರು ಎನ್ನಲಾಗಿದೆ. ಹೀಗಾಗಿ ಡಿ.19 ರಂದು ಸ್ಪಂದನಾ ಅವರ ತಾಯಿ, ಕಾಂಗ್ರೆಸ್ ನಾಯಕಿ ದಿವ್ಯಪ್ರಭಾ ಚಿಲ್ತಡ್ಕ, ತಂದೆ ಪರಶುರಾಮ, ತಮ್ಮ ಸ್ಪರ್ಶಿತ್ ಸೇರಿದಂತೆ ಏಳೆಂಟು ಮಂದಿ ನವೀನ್ ಮನೆಗೆ ಬಂದಿದ್ದರು. ಬೆಳ್ಳಾರೆ ಗ್ರಾಮದ ಕಾವಿನಮೂಲೆ ಎಂಬಲ್ಲಿನ ತನ್ನ ಮನೆ ಅಂಗಳದಲ್ಲಿ ನಿಂತಿದ್ದ ನವೀನ್ ಅವರನ್ನು ಆಂಬುಲೆನ್ಸ್ ವಾಹನದಲ್ಲಿ ಬಲವಂತ ಕುಳ್ಳಿರಿಸಿ ಅಪಹರಿಸಿದ್ದರು. ಆಂಬುಲೆನ್ಸಲ್ಲಿ ಹೋಗುತ್ತಿದ್ದಾಗ ಬಲ ಕಳೆದುಕೊಳ್ಳುವ ರೀತಿ ಇಂಜೆಕ್ಷನ್ ನೀಡಿದ್ದಾರೆಂದು ಆರೋಪಿಸಲಾಗಿದೆ.

ಇದೇ ವೇಳೆ, ತಡೆಯಲು ಹೋದ ತಾಯಿ ನೀರಜಾಕ್ಷಿ ಮತ್ತು ಅವರ ಹಿರಿಯ ಸೊಸೆ ಪ್ರಜ್ಞಾ ಪಿ.ಎಸ್ ಅವರನ್ನು ಆರೋಪಿಗಳು ಅಂಗಳದಲ್ಲಿ ಎಳೆದಾಡಿ ಕಾಲಿನಿಂದ ತುಳಿದು ರಂಪಾಟ ಮಾಡಿದ್ದಾರೆ. ಗಲಾಟೆಯಲ್ಲಿ ಗಾಯಗೊಂಡಿದ್ದ ನೀರಜಾಕ್ಷಿ ಮತ್ತು ಪ್ರಜ್ಞಾ ಸುಳ್ಯ ಕೆವಿಜಿ ಆಸ್ಪತ್ರೆಗೆ ದಾಖಲಾಗಿದ್ದರು. ಆನಂತರ, ಕೊಡಗಿನ ಸುಂಟಿಕೊಪ್ಪದಲ್ಲಿ ನವೀನ್ ಅವರನ್ನು ಅಪಹರಿಸಿ ಒಯ್ಯುತ್ತಿದ್ದ ಆಂಬುಲೆನ್ಸನ್ನು ಸ್ಥಳೀಯರು ಅಡ್ಡಗಟ್ಟಿ ಅಲ್ಲಿನ ಪೊಲೀಸರಿಗೆ ಒಪ್ಪಿಸಿದ್ದರು. ಘಟನೆ ಬಗ್ಗೆ ನವೀನ್ ಗೌಡ ತಾಯಿ ನೀರಜಾಕ್ಷಿ ಪೊಲೀಸ್ ದೂರು ನೀಡಿದ್ದು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Discover more from Coastal Times Kannada
Subscribe to get the latest posts sent to your email.








Discussion about this post