ವಿಟ್ಲ, 20: ಕೇಪು ಶ್ರೀ ಉಳ್ಳಾಲ್ತಿ ದೈವಸ್ಥಾನದ ವಠಾರದಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಪೊಲೀಸರು ದಾಳಿ ನಡೆಸಲು ಮುಂದಾಗಿದ್ದು, ಬಳಿಕ ಶಾಸಕರು ಖುದ್ದು ನಿಂತು ಕೋಳಿ ಅಂಕ ನಡೆಸಿದ ಘಟನೆ ನಡೆದಿದೆ.
ಶನಿವಾರ ಕೋಳಿ ಅಂಕ ನಡೆದಿದ್ದು, ಕೋಳಿ ಅಂಕಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಮತಿ ನೀಡಿರಲಿಲ್ಲ. ಮಧ್ಯಾಹ್ನ ಕೋಳಿ ಅಂಕ ಆರಂಭವಾಗುತ್ತಿದ್ದಂತೆ ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ಕೋಳಿ ಅಂಕಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೋಳಿ ಅಂಕದಲ್ಲಿ ಸುಮಾರು 1 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಕೇಪು ಜಾತ್ರೆಯ ನಿಮಿತ್ತ ಪ್ರತಿ ವರ್ಷ ಜೂಜು ರಹಿತ ಕೋಳಿ ಅಂಕ ನಡೆಯುತ್ತದೆ, ಜನರ ಭಾವನೆಗೆ ಸ್ಪಂದಿಸಿ ಕೋಳಿ ಅಂಕಕ್ಕೆ ಅವಕಾಶ ನೀಡಬೇಕು ಎಂದು ಹೇಳಿ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರಿಗೆ ಕೆಲಸಕ್ಕೆ ಶಾಸಕ ಅಶೋಕ ರೈ ಅಡ್ಡಿಪಡಿಸಿದ್ದರು. ಆದರೆ ಅದಕ್ಕೂ ಮೊದಲೇ ಪೊಲೀಸರು 16 ಜನರನ್ನು ವಶಕ್ಕೆ ಪಡೆದು 22 ಕೋಳಿಗಳನ್ನೂ ವಶಪಡಿಸಿದ್ದರು.
ಪೊಲೀಸರು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಶಾಸಕ ಅಶೋಕ್ ಕುಮಾರ್ ರೈ, ಯಾರೂ ಓಡಬೇಡಿ ಕೋಳಿ ಅಂಕ ಸಂಜೆವರೆಗೆ ನಡೆದೇ ನಡೆಯುತ್ತದೆ ನಾನು ಕೂಡ ನಿಮ್ಮ ಜೊತೆಗೆ ಇರುತ್ತೇನೆಂದು ಹೇಳಿ ಸಂಜೆ 5ರವರೆಗೆ ಸ್ಥಳದಲ್ಲಿ ನಿಂತು ಕೋಳಿ ಅಂಕ ನಡೆಸಿದ್ದಾರೆ.
ನಂತರ ಮಾಧ್ಯಮದ ಜೊತೆ ಮಾತನಾಡಿದ ಶಾಸಕರು, 800 ವರ್ಷಗಳ ಇತಿಹಾಸವಿರುವ ಈ ಕ್ಷೇತ್ರದಲ್ಲಿ ಪ್ರತಿ ವರ್ಷ ಕೋಳಿ ಅಂಕ ನಡೆಯುತ್ತದೆ. ಇದು ಧಾರ್ಮಿಕ ಭಾವನೆ. ಇಲ್ಲಿ ಯಾವುದೇ ಜೂಜುಗಳಿಲ್ಲ. ಆಟೊ ರಿಕ್ಷಾದವರು ಕೂಡ ಫ್ರೀಯಾಗಿ ಬಂದು ಬಿಡುತ್ತಾರೆ. ಇಲ್ಲಿ ಎಲ್ಲವೂ ಫ್ರೀ. ಪ್ರೀತಿಯಿಂದ ಸಾಕಿದ ಕೋಳಿಯನ್ನು ಹರಕೆ ರೂಪದಲ್ಲಿ ಬಂದು ಕೋಳಿ ಅಂಕ ನಡೆಸಿ, ಅದನ್ನು ರೈತರು ತೆಗೆದುಕೊಂಡು ಹೋಗುತ್ತಾರೆ. ನಮಗೆ ಈ ಬಗ್ಗೆ ಗೊತ್ತಿದೆ ಕಾನೂನಿನಲ್ಲಿ ಅವಕಾಶವಿಲ್ಲ. ಆದರೆ ಜನರ ಧಾರ್ಮಿಕ ಭಾವನೆಗಳನ್ನು ಮನಗಂಡು ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಆದರೂ ಶನಿವಾರ ಪೊಲೀಸರು ಬಂದು ಚದುರಿಸುವಂತ ಪ್ರಯತ್ನ ಮಾಡಿದ್ದಾರೆ. ಕಾನೂನು ವಿರುದ್ಧವಾಗಿ ಯಾವುದೂ ಮಾಡಿಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.
ಡಿ.20ರಂದು ಮಧ್ಯಾಹ್ನ ಕೇಪುವಿನ ಮುರಳೀಧರ ರೈ ಎಂಬವರ ಗದ್ದೆಯಲ್ಲಿ ಕಾನೂನುಬಾಹಿರವಾಗಿ ಕೋಳಿ ಅಂಕ ಆಡಲು ಮುಂದಾಗುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಹಲವು ಮಂದಿ ಕೋಳಿ ಅಂಕಕ್ಕೆ ಸಿದ್ಧರಾಗಿ ಗುಂಪು ಸೇರಿದ್ದರು. ಪೊಲೀಸರು ಅಲ್ಲಿದ್ದವರಿಗೆ ಕಾನೂನುಬಾಹಿರ ಕೋಳಿ ಅಂಕದ ಬಗ್ಗೆ ಕಾನೂನು ತಿಳುವಳಿಕೆ ನೀಡಿದ್ದಾರೆ. ಆದರೆ ಈ ವೇಳೆ ಸ್ಥಳದಲ್ಲಿ ಹಾಜರಿದ್ದ ಪುತ್ತೂರು ಶಾಸಕ ಅಶೋಕ್ ರೈ ಸೇರಿದ್ದ ಜನರಿಗೆ ಕಾನೂನುಬಾಹಿರವಾಗಿ ಕೋಳಿ ಅಂಕವನ್ನು ಮುಂದುವರಿಸುವಂತೆ ಪ್ರಚೋದನೆ ಮತ್ತು ದುಷ್ಪ್ರೇರಣೆ ನೀಡಿದ್ದಾರೆ. ಅದರಂತೆ ಸ್ಥಳದಲ್ಲಿ ಸೇರಿದ್ದ ಜನರು ಕೋಳಿ ಅಂಕ ಆರಂಭಿಸಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪರವಾನಿಗೆ ಪಡೆಯದೆ ಕಾನೂನು ಬಾಹಿರವಾಗಿ ಕೋಳಿ ಅಂಕಕ್ಕೆ ಅವಕಾಶ ಮಾಡಿಕೊಟ್ಟ ಜಾಗದ ಮಾಲಕ ಮುರಳೀಧರ ರೈ, ಕಾನೂನುಬಾಹಿರ ಕೃತ್ಯವನ್ನು ನಡೆಸಲು ಪ್ರಚೋದನೆ-ದುಷ್ಪ್ರೇರಣೆ ನೀಡಿದ ಆರೋಪದಲ್ಲಿ ಶಾಸಕ ಅಶೋಕ್ ರೈ ವಿರುದ್ಧ ಹಾಗೂ ಕೋಳಿ ಅಂಕದಲ್ಲಿ ತೊಡಗಿದ್ದ 16 ಮಂದಿಯ ವಿರುದ್ಧ ವಿಟ್ಲ ಠಾಣೆಯಲ್ಲಿ ಅ.ಕ್ರ: 190/2025, ಕಲಂ:189(2),49, 221,223,190)BNS-2023, PREVENTION OF CRUELTY TO ANIMALS ACT, 1960 (U/s-3,11) ರಂತೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post