ಮಂಗಳೂರು, ಜ.21: ಇತ್ತೀಚೆಗೆ ಉಪ್ಪಿನಂಗಡಿ ಮೂಲದ ವ್ಯಕ್ತಿಯನ್ನು ಅಪಹರಿಸಿ ಮಂಗಳೂರು ಬಳಿಯ ಉಳಾಯಿಬೆಟ್ಟಿನ ಮಲ್ಲೂರು ಎಂಬಲ್ಲಿ ಕೂಡಿಹಾಕಿ ಹಲ್ಲೆ ನಡೆಸಲಾಗಿತ್ತು. ಕೃತ್ಯದ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಅದರ ಹಿಂದೆ ಗೋಲ್ಡ್ ಸ್ಮಗ್ಲಿಂಗ್ ಜಾಲ ಇರುವುದು ಪತ್ತೆಯಾಗಿದೆ. ಅಪಹರಣ ಮತ್ತು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದಲ್ಲಿ ಗ್ರಾಮಾಂತರ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಕರ್ವೇಲ್ ಸಿದ್ದಿಕ್(39), ಕಲಂದರ್ ಶಾಫಿ(22), ಮಹಮ್ಮದ್ ಇರ್ಶಾದ್(28), ಇರ್ಫಾನ್ (38) ಬಂಧಿತರು. ಎಂದು ಪೊಲೀಸರು ಮಾಹಿತಿ ನೀಡಿದರು.
‘ದುಷ್ಕರ್ಮಿಗಳ ತಂಡವೊಂದು ಕೊಯಿಲ ಗ್ರಾಮದ ನಿವಾಸಿ ನಿಜಾಮುದ್ದೀನ್, ಅವರ ಚಿಕ್ಕಮ್ಮನ ಮಗ ಶಾರುಖ್ ಮತ್ತು ಆತನ ಗೆಳೆಯನನ್ನು ಗುರುವಾರ ಪೆರ್ನೆ ಬಳಿಯ ಸೇಡಿಯಾಪುವಿನಿಂದ ಅಪಹರಿಸಿ ಹಲ್ಲೆ ನಡೆಸಿತ್ತು. ಶಾರುಖ್‌ನನ್ನು ಒತ್ತೆ ಇರಿಸಿಕೊಂಡ ದುಷ್ಕರ್ಮಿಗಳು, ನಿಜಾಮುದ್ದೀನ್‌ನನ್ನು ಮನೆಗೆ ಕಳುಹಿಸಿ ರೂ. 4ಲಕ್ಷ ಹಣ ತರುವಂತೆ ಸೂಚಿಸಿದ್ದರು. ನಿಜಾಮುದ್ದೀನ್ ಈ ಬಗ್ಗೆ ಉಪ್ಪಿನಂಗಡಿ ಠಾಣೆಗೆ ಶುಕ್ರವಾರ ದೂರು ನೀಡಿದ್ದರು. ಆದರೆ ಅಪಹರಣಕ್ಕೊಳಗಾದ ಶಾರುಖ್ ಪತ್ತೆಯಾಗಿರಲಿಲ್ಲ’ ಎಂದು ಪೊಲೀಸರು ತಿಳಿಸಿದರು.
‘ನಿಜಾಮುದ್ದೀನ್ ಅವರ ಚಿಕ್ಕಮ್ಮನ ಮಗ ಶಾರುಖ್ ಸೌದಿ ಅರೇಬಿಯಾದಲ್ಲಿ ಒಂದೂವರೆ ವರ್ಷದಿಂದ ವಾಹನ ಚಾಲಕರಾಗಿ ಕೆಲಸಮಾಡುತ್ತಿದ್ದರು. ಜ.18ರಂದು ವಿದೇಶದಿಂದ ಊರಿಗೆ ಮರಳಿದ್ದರು. ಅದರ ಮರುದಿನವೇ ಅವರ ಹಾಗೂ ಅವರ ಸೋದರನ ಅಪಹರಣ ನಡೆದಿತ್ತು.’
ಪೊಲೀಸರತ್ತ ಕಾರು ನುಗ್ಗಿಸಿ ಸಿಕ್ಕಿ ಬಿದ್ದ ಆರೋಪಿಗಳು: ‘ಮಂಗಳೂರು ಗ್ರಾಮಾಂತರ ಠಾಣೆಯ ಕಾನ್‌ಸ್ಟೆಬಲ್‌ಗಳಾದ ಮಲ್ಲಿಕಾರ್ಜುನ ಅಂಗಡಿ ಹಾಗೂ ಪ್ರದೀಪ್ ನಾಗನಗೌಡ ಅರ್ಕುಳ ತುಪ್ಪೆಕಲ್ಲು ಎಂಬಲ್ಲಿ ಗುರುವಾರ ರಾತ್ರಿ ಗಸ್ತು ತಿರುಗುತ್ತಿರುವಾಗ ಬಿಳಿ ಬಣ್ಣದ ಮಾರುತಿ ಸುಝುಕಿ ಆಲ್ಟೊ ಕಾರು (ಕೆಎ-19-ಎಂಎ 3457) ನಿಂತಿತ್ತು. ಅದರ ಪಕ್ಕ ಇಬ್ಬರು ನಿಂತಿದ್ದರು. ಕಾರಿನಲ್ಲಿದ್ದವರನ್ನು ಕಾನ್‌ಸ್ಟೆಬಲ್‌ಗಳು ವಿಚಾರಿಸಿದ್ದರು. ಆಗ ಅಲ್ಲಿ ನಿಂತಿದ್ದವರಿಬ್ಬರು ಪೊಲೀಸ್ ಸಿಬ್ಬಂದಿಯತ್ತ ಏಕಾಏಕಿ ಕಲ್ಲು ತೂರಿ, ಕಾರಿನೊಳಗೆ ಹತ್ತಿ ಪರಾರಿಯಾಗಲು ಯತ್ನಿಸಿದರು. ಪ್ರದೀಪ ನಾಗನಗೌಡ ಅವರತ್ತ ಕಾರನ್ನು ನುಗ್ಗಿಸಿ ಕೊಲೆಗೆ ಯತ್ನಿಸಿದ್ದರು’ ಪೊಲೀಸರು ಬೀಟ್ ಕರ್ತವ್ಯದಲ್ಲಿದ್ದಾಗ ಇವರ ಮೇಲೆ ಕಾರು ಹಾಯಿಸಿ, ಕಲ್ಲೆಸೆದು ಹಲ್ಲೆಗೆ ಯತ್ನಿಸಿದ್ದರು. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ವಿಚಾರದಲ್ಲಿ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ. ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಿದ್ದು, ಸೂತ್ರಧಾರ ಫೈಸಲ್ ಪತ್ತೆಗೆ ಬಲೆ ಬೀಸಲಾಗಿದೆ.
ಅಪಹರಣ ಏಕೆ? ; ‘ಶಾರುಖ್‌ನ ದೊಡ್ಡಮ್ಮನ ಮಗ ಶಫೀಕ್ ಕೂಡಾ ಸೌದಿ ಅರೇಬಿಯಾದಲ್ಲಿದ್ದಾನೆ. ಶಫೀಕ್ ಎರಡು ತಿಂಗಳ ಹಿಂದೆ ಚಿನ್ನದ ಬಿಸ್ಕೆಟ್ ಅನ್ನು ಭಾರತಕ್ಕೆ ಕಳ್ಳಸಾಗಣೆ ಮಾಡಿ ಯಾರಿಗೊ ತಲುಪಿಸುವ ಹೊಣೆ ಹೊತ್ತಿದ್ದ. ಆದರೆ, ವಿದೇಶದಿಂದ ಭಾರತಕ್ಕೆ ಬಂದಿದ್ದ ಆತ ಚಿನ್ನದ ಬಿಸ್ಕೆಟ್ ಅನ್ನು ತಲುಪಿಸಬೇಕಾದವರಿಗೆ ತಲುಪಿಸಿರಲಿಲ್ಲ. ಆತನ ಚಿಕ್ಕಮ್ಮನ ಮಗ ಶಾರುಖ್ ಸೌದಿಯಿಂದ ಊರಿಗೆ ಮರಳಿದ್ದು ಆರೋಪಿ ಕಡೆಯವರಿಗೆ ಗೊತ್ತಾಗಿತ್ತು. ಶಾರುಖ್‌ನನ್ನು ಅಪಹರಿಸಿ ಸುಮಾರು ರೂ. 40 ಲಕ್ಷ ಮೌಲ್ಯದ ಚಿನ್ನದ ಬಿಸ್ಕೆಟ್ ಮರಳಿ ಪಡೆಯುವುದು ಅವರ ಉದ್ದೇಶವಾಗಿತ್ತು’ ಎಂದು ಶಶಿಕುಮಾರ್ ವಿವರಿಸಿದರು.
‘ಎರಡು ತಿಂಗಳ ಹಿಂದೆ ಸ್ವದೇಶಕ್ಕೆ ಬಂದಿದ್ದ ಶಫೀಕ್ ಮುಂಬೈನಿಂದಲೇ ಮರಳಿದ್ದ. ಮನೆಗೂ ಬಂದಿರಲಿಲ್ಲ. ಆತ ಚಿನ್ನದ ಬಿಸ್ಕೆಟ್ ತಂದಿದ್ದ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ರೌಡಿ ಶೀಟರ್ ತಲ್ಲತ್ ಕೈವಾಡ? ; ಐವರು ಆರೋಪಿಗಳು ರೌಡಿ ಶೀಟರ್ ತಲ್ಲತ್ ಸೂಚನೆ ಪ್ರಕಾರ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ‘ಈ ಭಾಗದಲ್ಲಿ ಅಪರಾಧ ಚಟುವಟಿಕೆಯಲ್ಲಿ ತೊಡಗಿ, ಬೆಂಗಳೂರಿನಲ್ಲಿ ವಾಸವಾಗಿರುವ ರೌಡಿಶೀಟರ್‌ನ ಆಣತಿಯಂತೆ ಆರೋಪಿಗಳು ಈ ಕೃತ್ಯ ನಡೆಸಿದ್ದಾರೆ. ರೌಡಿ ಶೀಟರ್ ಮಂಗಳೂರು ಕಮಿಷನರೇಟ್, ದಕ್ಷಿಣ ಕನ್ನಡ ಹಾಗೂ ಕೇರಳ ಭಾಗದಲ್ಲಿ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ. ಆತನನ್ನು ಗಡಿಪಾರು ಮಾಡಬೇಕು ಎಂಬ ಪ್ರಸ್ತಾವನ್ನೂ ಪೊಲೀಸ್ ಇಲಾಖೆ ಸಲ್ಲಿಸಿದೆ’ ಎಂದು ಶಶಿಕುಮಾರ್ ತಿಳಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post