ಕೋಜಿಕ್ಕೋಡ್: ಕೇರಳದಲ್ಲಿ 41 ವರ್ಷದ ದೀಪಕ್ ಎಂಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಮಹಿಳೆಯೊಬ್ಬರಿಗೆ ದೀಪಕ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಅವರ ಮೇಲೆ ಹೋರಿಸಲಾಗಿದೆ. ಶಿಮ್ಜಿತಾ ಮುಸ್ತಫಾ ಎಂಬ ಮಹಿಳೆ, ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ದೀಪಕ್ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿ ಸೋಷಿಯಲ್ ಮೀಡಿಯಾದಲ್ಲಿ ವೀಡಿಯೊವೊಂದನ್ನು ಪೋಸ್ಟ್ ಮಾಡಿದ್ದರು. ಆ ವೀಡಿಯೋದಲ್ಲಿ ದೀಪಕ್ ಅವರ ಮೊಣಕೈ ತನ್ನ ಎದೆಗೆ ತಾಗುತ್ತಿರುವಂತೆ ಕಾಣುವ ಸೆಲ್ಫಿ ವಿಡಿಯೋ ಆಗಿತ್ತು. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ದೀಪಕ್ ಆತ್ಮಹತ್ಯೆ ಮಾಡಿದ್ದಾರೆ. ಶಿಂಜಿತಾ ಮುಸ್ತಫಾಳನ್ನು (Shimjitha Mustafa) ಕೇರಳ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.
ದೀಪಕ್ ಆತ್ಮಹತ್ಯೆ ಮಾಡಿದ ನಂತರ ಈ ಪ್ರಕರಣ ತಿರುವು ಪಡೆದುಕೊಂಡಿತ್ತು. ದೀಪಕ್ ಅವರದ್ದು ಯಾವುದೇ ತಪ್ಪಿಲ್ಲದೇ ಇದ್ದರೂ ಅವರ ಬಳಿಯೇ ಹೋಗಿ ಆಕೆ ವಿಡಿಯೋ ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು. ಪ್ರಚಾರಕ್ಕಾಗಿ ವಿಡಿಯೋ ಮಾಡಿ ವ್ಯಕ್ತಿಯ ಸಾವಿಗೆ ಕಾರಣವಾಗಿದ್ದಕ್ಕೆ ಶಿಂಜಿತಾಳನ್ನು ಬಂಧಿಸಬೇಕೆಂಬ ಆಗ್ರಹ ಕೇಳಿಬಂದಿತ್ತು.
ವೀಡಿಯೋ ರೀಚ್ ಗಾಗಿ ಸುಳ್ಳು ಆರೋಪಗಳನ್ನು ಮಾಡಿ ಅಮಾಯಕ ವ್ಯಕ್ತಿಯೊಬ್ಬನ ಸಾವಿಗೆ ಕಾರಣಳಾದ ಶಿಮ್ಜಿತಾ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದು, ಆಕೆಯನ್ನು ಬಂಧಿಸಿದ್ದಾರೆ. ಬಂಧನದ ನಂತರ, ಕೋಝಿಕ್ಕೋಡ್‌ನ ಕುನ್ನಮಂಗಲಂ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಶಿಮ್ಜಿತಾ ಅವರಿಗೆ 14 ದಿನಗಳ ಕಾಲ ರಿಮಾಂಡ್ ವಿಧಿಸಿದ್ದು, ಅವರನ್ನು ಮಂಜೇರಿ ಜೈಲಿಗೆ ವರ್ಗಾಯಿಸಲಾಗುವುದು.
ಜನವರಿ 19 ರಂದು, ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಪೊಲೀಸರು ದೀಪಕ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಶಿಮ್ಜಿತಾ ವಿರುದ್ಧ ಪ್ರಥಮ ಮಾಹಿತಿ ವರದಿ ಸಲ್ಲಿಸಿದರು. ಎಫ್‌ಐಆರ್ ನಂತರ ಶಿಮ್ಜಿತಾ ಪರಾರಿಯಾಗಿದ್ದಾರೆ ಎಂದು ವರದಿಯಾಗಿತ್ತು. ವರದಿಗಳ ಪ್ರಕಾರ, ಬುಧವಾರ ವಡಗರದಲ್ಲಿ ಸಂಬಂಧಿಕರ ಮನೆಯಿಂದ ಆಕೆಯನ್ನು ಬಂಧಿಸಲಾಯಿತು. ಅವರ ಬಂಧನಕ್ಕೆ ಕೆಲವು ಗಂಟೆಗಳ ಮೊದಲು, ಪೊಲೀಸರು ಅವರ ವಿರುದ್ಧ ಲುಕ್ಔಟ್ ನೋಟಿಸ್ ಹೊರಡಿಸಿದ್ದರು. ಆಕೆ ಪರಾರಿಯಾಗಿದ್ದ ನಂತರ ಪೊಲೀಸರು ರಾಜ್ಯದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು. ಕೋಝಿಕ್ಕೋಡ್ ಜಿಲ್ಲಾ ನ್ಯಾಯಾಲಯವು ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪರಿಗಣಿಸುವ ಒಂದು ದಿನದ ಮೊದಲು ಬಂಧನ ನಡೆದಿದೆ.
ವಿಡಿಯೋದಲ್ಲಿರುವ ದೃಶ್ಯದಲ್ಲಿ ಇಬ್ಬರ ಮಧ್ಯೆ ಯಾವುದೇ ವಾಗ್ವಾದ, ಗಲಾಟೆ ನಡೆದಿರಲಿಲ್ಲ. ಪೊಲೀಸರು ಚಾಲಕ, ಕಂಡಕ್ಟರ್ ಮತ್ತು ಇತರ ಬಸ್ ಪ್ರಯಾಣಿಕರಿಂದ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಅವರೆಲ್ಲರೂ ಪ್ರಯಾಣದ ಸಮಯದಲ್ಲಿ ಯಾವುದೇ ದೂರು ಅಥವಾ ಅಸಾಮಾನ್ಯ ಘಟನೆ ನಡೆದಿಲ್ಲ ಎಂದು ಹೇಳಿದ್ದಾರೆ. ಶಿಂಜಿತಾ ಬಸ್‌ನಲ್ಲಿರುವಾಗ ತನ್ನ ಮೇಲೆ ದೌರ್ಜನ್ಯ ನಡೆದ ಬಗ್ಗೆ ಯಾವುದೇ ಸಹಾಯವನ್ನು ಕೋರಿಲ್ಲ ಎಂದು ಕಂಡಕ್ಟರ್ ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post