ಮಂಗಳೂರು: ಕಳೆದ 10 ದಿನಗಳಿಂದ ರಾಜ್ಯಾದ್ಯಂತ ಪೌರ ಕಾರ್ಮಿಕರು,ಮುನ್ಸಿಪಲ್ ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಮುಂದಿಟ್ಟು ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತಿದ್ದರೂ ಕೂಡ ಡಬ್ಬಲ್ ಇಂಜಿನ್ ಸರಕಾರವೆಂದು ಹೇಳಿಕೊಳ್ಳುತ್ತಿರುವ ಬಿಜೆಪಿ ಸರಕಾರವು ಯಾವುದೇ ರೀತಿಯ ಸ್ಪಂದನ ಮಾಡದೆ ತನ್ನ ಕ್ರೌರ್ಯವನ್ನು ಪ್ರದರ್ಶಿಸಿದೆ. ನಗರದಲ್ಲಿ ತ್ಯಾಜ್ಯವನ್ನು ತಕ್ಷಣ ವಿಲೇವಾರಿ ಮಾಡಿಸದಿದ್ದಲ್ಲಿ ಶಾಸಕರ ಮನೆ ಮುಂದೆ ತ್ಯಾಜ್ಯ ಸುರಿದು ಪ್ರತಿಭಟನೆ ಮಾಡಲಾಗುವುದು ಎಂದು ಡಿವೈಎಫ್‌ಐ ದ.ಕ.ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಎಚ್ಚರಿಸಿದ್ದಾರೆ.
ಪೌರ ಕಾರ್ಮಿಕರರ ಹೋರಾಟವನ್ನು ಬೆಂಬಲಿಸಿ ವಿವಿಧ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನಗರದ ಪಾಲಿಕೆ ಕಚೇರಿ ಎದುರು ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
‘ಸರ್ಕಾರ ಸ್ಮಾರ್ಟ್ ಸಿಟಿ ಯೋಜನೆ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ದುರುಪಯೋಗ ಪಡಿಸುತ್ತಿದೆ. ಆದರೆ, ತೀರಾ ಸಂಕಷ್ಟದಲ್ಲಿರುವ ಪೌರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಾದ ಶಾಸಕ ವೇದವ್ಯಾಸ ಕಾಮತ್ ಅವರು ಕಾರ್ಮಿಕರ ಜೊತೆ ದರ್ಪ ತೋರಿಸಿ ಬೆದರಿಕೆ ಹಾಕಿರುವುದು ತೀರಾ ಖಂಡನೀಯ. ಬೇಡಿಕೆ ಕೂಡಲೇ ಇತ್ಯರ್ಥ ಗೊಳ್ಳದಿದ್ದಲ್ಲಿ ಶಾಸಕರ ಮನೆಯೆದುರು ಕಸ ಸುರಿದು ಪ್ರತಿಭಟನೆ ನಡೆಸಲಿದ್ದೇವೆ’ ಎಂದರು.
ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ‘ಯಾವುದೇ ಸಾಮಾಜಿಕ ಭದ್ರತೆ ಇಲ್ಲದೇ ಗುತ್ತಿಗೆ ಆಧಾರದಲ್ಲಿ ದುಡಿಯುವ ಪೌರ ಕಾರ್ಮಿಕರ ಬದುಕು ತೀರಾ ಶೋಚನೀಯವಾಗಿದೆ. ಅವರ ಬಗ್ಗೆ ಸರ್ಕಾರಗಳು ಕಿಂಚಿತ್ತೂ ಗಮನ ನೀಡಿಲ್ಲ. ಎಲ್ಲಾ ಪೌರಕಾರ್ಮಿಕರನ್ನು ಕಾಯಂಗೊಳಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು’ ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಮೇಯರ್ ಅಶ್ರಫ್ ಕೆ. ಡಿವೈಎಫ್‌ಐ ಪ್ರಮುಖರಾದ ನವೀನ್ ಕೊಂಚಾಡಿ, ಜಗದೀಶ್ ಬಜಾಲ್, ತಯ್ಯುಬ್ ಬೆಂಗ್ರೆ, ಸಿಐಟಿಯು ಪ್ರಮುಖರಾದ ಯೋಗೀಶ್ ಜಪ್ಪಿನಮೋಗರು, ಮಹಮ್ಮದ್ ಮುಸ್ತಫಾ, ವಿಲ್ಲಿ ವಿಲ್ಸನ್, ಮಹಮ್ಮದ್ ಆಸಿಫ್, ಹರೀಶ್ ಪೂಜಾರಿ, ಮಹಿಳಾ ಸಂಘಟನೆಯ ಮುಖಂಡರಾದ ಭಾರತಿ ಬೋಳಾರ, ಪ್ರಮೀಳಾ ದೇವಾಡಿಗ, ಅಸುಂತಾ ಡಿಸೋಜ, ಯೋಗಿತಾ ಉಳ್ಳಾಲ, ವಿದ್ಯಾರ್ಥಿ ನಾಯಕರಾದ ವಿನೀತ್ ದೇವಾಡಿಗ, ಯುವ ವಕೀಲ ನಿತಿನ್ ಕುತ್ತಾರ್, ಸುನಂದಾ ಕೊಂಚಾಡಿ, ಪಾಲಿಕೆಯ ಮಾಜಿ ಸದಸ್ಯ ದಯಾನಂದ ಶೆಟ್ಟಿ, ಸಫಾಯಿ ಕರ್ಮಚಾರಿ ಸಂಘದ ಮುಖಂಡ ರಾಜೇಶ್, ಪದ್ಮನಾಭ, ಸಂತೋಷ್, ಅಶ್ವಿನ್ ಇದ್ದರು .
Discover more from Coastal Times Kannada
Subscribe to get the latest posts sent to your email.







Discussion about this post