ಉಳ್ಳಾಲ: ಕೇರಳದ ಕೊಚ್ಚಿಯಿಂದ ಬೈಕಂಪಾಡಿ ಪೇಂಟ್ ತಯಾರಿಸುವ ಕೈಗಾರಿಕೆಗೆ ರಾಸಾಯನಿಕ ಸಾಗಿಸುತ್ತಿದ್ದ ಟ್ಯಾಂಕರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪಲ್ಟಿಯಾಗಿ ಕಲ್ಲಾಪು ಬಳಿ ಮಂಗಳವಾರ ತಡರಾತ್ರಿ ಉರುಳಿಬಿದ್ದಿದೆ. ಚಾಲಕ ಮಯೂರ್ (40) ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಅವರನ್ನು ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಾಲಕನ ನಿಯಂತ್ರಣ ಕಳೆದುಕೊಂಡು ಟ್ಯಾಂಕರ್ ರಾ.ಹೆ.66ರ ಕಲ್ಲಾಪು ಹೆದ್ದಾರಿ ಮದ್ಯದಲ್ಲೇ ಪಲ್ಟಿ ಹೊಡೆದಿದೆ ಎನ್ನಲಾಗಿದೆ. ಇದರಿಂದ ಟ್ಯಾಂಕರಿನಲ್ಲಿದ್ದ ರಾಸಾಯನಿಕ ಸೋರಿಕೆಯಾಗದಿದ್ದರೂ ಮುನ್ನೆಚ್ಚರಿಕೆಯ ಕ್ರಮವಾಗಿ ಸ್ಥಳೀಯರು ಹಾಗೂ ಸಂಚಾರ ಮತ್ತು ಉಳ್ಳಾಲ ಠಾಣಾ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಹಾಗಾಗಿ ರಾ.ಹೆ.ಯಲ್ಲಿ ಸುಮಾರು ಒಂದುವರೆ ಗಂಟೆಗೂ ಅಧಿಕ ಕಾಲ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಅನಿಲ ಹೊಂದಿದ್ದ ಟ್ಯಾಂಕರ್ ತೆರವು ತಡರಾತ್ರಿ 1 ಗಂಟೆಯವರೆಗೆ ನಡೆಯಿತು. ಅಗ್ನಿ ಶಾಮಕ ದಳ, ಎಸಿಪಿ ಧನ್ಯಾ ಎನ್. ನಾಯಕ್, ದಕ್ಷಿಣ ಸಂಚಾರ ಠಾಣೆಯ ರಮೇಶ್ ಹಾನಾಪುರ್, ಉಳ್ಳಾಲ ಠಾಣಾಧಿಕಾರಿ ಸಂದೀಪ್ ಜಿ.ಎಸ್ ಸ್ಥಳದಲ್ಲಿ ಹಾಜರಿದ್ದು ತೆರವು ಕಾರ್ಯಾಚರಣೆಗೆ ಮಾರ್ಗದರ್ಶನ ಮಾಡಿದರು. ನಡು ರಸ್ತೆಯಲ್ಲೇ ಉರುಳಿದ್ದ ಟ್ಯಾಂಕರಿನಿಂದ ಸಣ್ಣ ಪ್ರಮಾಣದಲ್ಲಿ ರಾಸಾಯನಿಕ ಸೋರಿಕೆ ಉಂಟಾಗಿ ಪರಿಸರವಿಡೀ ದುರ್ವಾಸನೆ ಬೀರುತಿತ್ತು. ಸ್ಥಳಕ್ಕಾಗಮಿಸಿದ ಬೈಕಂಪಾಡಿ ಬಿಎಎಸ್ ಎಫ್ ಸುರಕ್ಷಾ ತಂಡ ಸಮೀಪದ ವಾಣಿಜ್ಯ ಮಳಿಗೆಗಳ ವಿದ್ಯುತ್ ದೀಪಗಳನ್ನು ಆರಿಸಲು ಸೂಚನೆ ನೀಡಿತು. ರಾ.ಹೆ.66 ರ ಎರಡೂ ಕಡೆಗಳಲ್ಲಿ ವಾಹನಗಳು ಸಂಚರಿಸದಂತೆ ಸಂಚಾರ ಠಾಣಾ ಪೊಲೀಸರು ತಡೆಹಿಡಿದಿದ್ದರು. ಬಿಎಎಸ್ ಎಫ್ ನಿಂದ ಬಂದ ಬೃಹತ್ ಗಾತ್ರದ ಕ್ರೇನ್ ಸಹಿತ ಎರಡು ಸಣ್ಣ ಕ್ರೇನ್ ಗಳನ್ನು ಬಳಸಿಕೊಂಡು 3 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಲಾಯಿತು. ಮೊದಲಿಗೆ ಲಾರಿಯನ್ನು ಮೇಲಕ್ಕೆತ್ತಿ, ನಂತರ ಟ್ಯಾಂಕ್ ಅನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿ, ಇನ್ನೊಂದು ಲಾರಿಗೆ ಲೋಡ್ ಮಾಡಿ ತಕ್ಷಣ ಕಳುಹಿಸಲಾಯಿತು. ರಾಸಾಯನಿಕ ಹೊಂದಿರುವ ಟ್ಯಾಂಕ್ ಹಲವು ಪದರಗಳು ಹಾಗೂ ಸುತ್ತಲೂ ಕಬ್ಬಿಣದ ಸುರಕ್ಷಾ ಕವಚ ಇರುವುದರಿಂದ ಸಣ್ಣ ಪ್ರಮಾಣದಲ್ಲಿ ಸೋರಿಕೆ ಉಂಟಾಗಿದೆ. ಸಾಬೂನಿಗೆ ಹಾಕುವ ರಾಸಾಯನಿಕ ಆಗಿರುವುದರಿಂದ ಅಷ್ಟೊಂದು ಪರಿಣಾಮಕಾರಿಯಾಗಿರುವುದಿಲ್ಲ ಎಂದು ಬಿಎಎಸ್ ಎಫ್ ಸುರಕ್ಷತಾ ಅಧಿಕಾರಿ ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post