ಮಂಗಳೂರು: ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 13 ವರ್ಷಗಳ ಹಿಂದೆ ಸಂಭವಿಸಿದ್ದ ವಿಮಾನ ದುರಂತದಲ್ಲಿ ಅಗಲಿದವರ ಸ್ಮರಣಾರ್ಥ ನಿರ್ಮಿಸಿರುವ ತಣ್ಣೀರುಬಾವಿಯ ಹುತಾತ್ಮರ ಸ್ಮಾರಕದಲ್ಲಿ ಜಿಲ್ಲಾಡಳಿತದಿಂದ ಸೋಮವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್., ಹೆಚ್ಚುವರಿ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಉಪ ವಿಭಾಗಾಧಿಕಾರಿ ರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್ ಸೇರಿದಂತೆ ಜಿಲ್ಲಾ ಮಟ್ಟದ ಹಲವು ಅಧಿಕಾರಿಗಳು ಪುಷ್ಪ ನಮನ ಸಲ್ಲಿಸಿದರು.
2010ರ ಮೇ 22ರಂದು ಬೆಳಿಗ್ಗೆ ದುಬೈನಿಂದ ಬಂದ ಏರ್ ಇಂಡಿಯಾ ವಿಮಾನ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ರನ್ ವೇಯಲ್ಲಿ ನಿಲ್ಲದೇ ಸೂಚನಾ ಗೋಪುರದ ಕಂಬಗಳಿಗೆ ಡಿಕ್ಕಿಯಾಗಿ ಆಳ ಪ್ರದೇಶಕ್ಕೆ ಉರುಳಿ ದುರಂತ ಸಂಭವಿಸಿತ್ತು. ಆ ವೇಳೆ ವಿಮಾನದಲ್ಲಿ 166 ಪ್ರಯಾಣಿಕರಿದ್ದರು. ಅಪಘಾತದಲ್ಲಿ 158 ಮಂದಿ ಸಾವನ್ನಪ್ಪಿದ್ದರು. 8 ಮಂದಿ ಬದುಕುಳಿದಿದ್ದರು.
ಸಾವನ್ನಪ್ಪಿದ 158 ಮಂದಿಯಲ್ಲಿ 12 ಮೃತದೇಹಗಳ ಗುರುತು ಪತ್ತೆಯಾಗಿರಲಿಲ್ಲ. ಗುರುತು ಪತ್ತೆಯಾಗದವರ ಮೃತದೇಹಗಳನ್ನು ತಣ್ಣೀರು ಬಾವಿ ಬಳಿಯ ನದಿತೀರದಲ್ಲಿ ಅಂತ್ಯಸಂಸ್ಕಾರ ನಡೆಸಲಾಗಿತ್ತು. ಆ ಬಳಿಕ ಇದೇ ಸ್ಥಳದಲ್ಲಿ ಸ್ಮಾರಕ ನಿರ್ಮಿಸಲಾಗಿತ್ತು.
ಸ್ಮಾರಕಕ್ಕೆ ಪುಷ್ಪ ಗುಚ್ಚ ಅರ್ಪಿಸಿ ಮಾತನಾಡಿದ ಜಿಲ್ಲಾಧಿಕಾರಿ, ಮೃತರ ಆತ್ಮಕ್ಕೆ ಶಾಂತಿ ಕೋರಿ ಅವರ ಕುಟುಂಬಗಳಿಗೆ ಧೈರ್ಯ ತುಂಬುವ ಮೂಲಕ ಅವರೊಂದಿಗೆ ಜಿಲ್ಲಾಡಳಿತ ಸದಾ ಇರುತ್ತದೆ ಎಂಬುದನ್ನು ತಿಳಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ವಿಮಾನ ದುರಂತದಲ್ಲಿ ಸಾವನ್ನಪ್ಪಿದ ಮಹಿಳೆಯೊಬ್ಬರ ತಂದೆ ಹರಿಶ್ಚಂದ್ರ ಈ ಸಂದರ್ಭದಲ್ಲಿ ಮಾತನಾಡಿ, ದುಬೈನಿಂದ ಬರುತ್ತಿದ್ದ ಮಗಳನ್ನು ಕರೆದುಕೊಂಡು ಬರಲು ಹೋಗುತ್ತಿದ್ದಾಗ ಅಪಘಾತವಾದ ಸುದ್ದಿ ಬಂತು. ಅದರಲ್ಲಿ ಇದ್ದ ಮಗಳು ಮೃತಪಟ್ಟಿದ್ದಳು. ಆಕೆಯ ಉಂಗುರದ ಮೂಲಕ ಮೃತದೇಹವನ್ನು ಗುರುತು ಹಿಡಿಯಲಾಯಿತು. 13 ವರ್ಷವಾದರೂ ನೆನಪು ಮಾಸಿಲ್ಲ ಎಂದರು.
ಶ್ರದ್ದಾಂಜಲಿ ಅರ್ಪಣಾ ಕಾರ್ಯಕ್ರಮದಲ್ಲಿ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಹಾಗೂ ನವ ಮಂಗಳೂರು ಬಂದರು ಪ್ರಾಧಿಕಾರದ ಅಧಿಕಾರಿಗಳು ಭಾಗವಹಿಸಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post